‘ಭರಾಟೆ’ ಚಿತ್ರದಲ್ಲಿ ಶ್ರೀಮುರಳಿ ನಗುತ್ತಾರೆ, ಪ್ರೇಕ್ಷಕರನ್ನು ನಗಿಸುತ್ತಾರೆ, ಕೊನೆಗೆ ಅಳಿಸುತ್ತಾರೆ’
–ನಿರ್ದೇಶಕ ಚೇತನ್‌ಕುಮಾರ್ ಅವರು ‘ಭರಾಟೆ’ ಸಿನಿಮಾ ಬಗ್ಗೆ ಒಂದೇ ಸಾಲಿನಲ್ಲಿ ಹೇಳಿದ್ದು ಹೀಗೆ. ‘ಅವರ ಪಾತ್ರದ ಮೇಲೆ ಪ್ರೇಕ್ಷಕರಿಗೆ ಪ್ರೀತಿ ಮೂಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಮೂಲವನ್ನು ನೆನಪಿಸುವ ಚಿತ್ರ ಇದು. ತಾತ– ತಂದೆಯ ಹಿನ್ನೆಲೆಯನ್ನು ನೆನಪಿಸುತ್ತದೆ. ಹಳೆಯ ಭಾವನೆಗಳಿಗೆ ಹೊಸತನ ನೀಡುತ್ತದೆ’ ಎಂದು ಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿದರು.
ಶ್ರೀಮುರಳಿ ನಟನೆಯ ‘ಉಗ್ರಂ’, ‘ರಥಾವರ’ ಮತ್ತು ‘ಮಫ್ತಿ’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ಕೊಯ್ದಿವೆ. ಹಾಗಾಗಿ, ಇದೇ 18ರಂದು ತೆರೆಗೆ ಬರುತ್ತಿರುವ ‘ಭರಾಟೆ’ಯ ಮೇಲೂ ನಿರೀಕ್ಷೆ ದುಪ್ಪಟ್ಟಾಗಿದೆ.
‘ಬಹದ್ದೂರ್’ ಮತ್ತು ‘ಭರ್ಜರಿ’ಯಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಚೇತನ್‌ಕುಮಾರ್ ಅವರಿಗೆ ಈ ಸಿನಿಮಾ ತೃಪ್ತಿ ಕೊಟ್ಟಿದೆಯಂತೆ. ‘ಬರವಣಿಗೆಯೇ ನನ್ನ ಉಸಿರು. ಸಿನಿಮಾ ಮಾಡುವುದಕ್ಕೂ ಮೊದಲು ಅದು ನಮ್ಮದಾಗಿರುತ್ತದೆ. ಬಿಡುಗಡೆಯ ನಂತರ ಆ ಚಿತ್ರ ಪ್ರೇಕ್ಷಕನದು. ನಿರ್ದೇಶಕ ಎಷ್ಟೇ ಸಿನಿಮಾ ಮಾಡಿದರೂ ತೃಪ್ತಿ ಸಿಗುವುದು ತೀರಾ ಅಪರೂಪ. ಭರಾಟೆ ನನಗೆ ತೃಪ್ತಿ ಕೊಟ್ಟಿದೆ’ ಎಂದು ಮಂದಹಾಸ ಬೀರಿದರು.
ಇದನ್ನೂ ಓದಿ:ಶ್ರೀಮುರಳಿ ಗಾನ ಬಜಾನ
‘ಭರಾಟೆ’ ಚಿತ್ರದ ಕಥೆ ಹುಟ್ಟಿದ್ದು ಹೇಗೆ?
ನಾನಾಗ ‘ಭರ್ಜರಿ’ ಸಿನಿಮಾದ ತಯಾರಿಯಲ್ಲಿದ್ದೆ. ಅರ್ಜುನ್ ಸರ್ಜಾ ಅವರಿಗೆ ಈ ಚಿತ್ರದ ಕಥೆ ಹೇಳಲು ಚೆನ್ನೈಗೆ ಹೋಗಿದ್ದೆ. ಅಲ್ಲಿನ ಮರೀನಾ ಬೀಚ್‌ನಲ್ಲಿ ಏಕಾಂಗಿಯಾಗಿ ಕುಳಿತಿದ್ದ ವೇಳೆ ಹುಟ್ಟಿದ್ದೇ ‘ಭರಾಟೆ’ಯ ಕಥೆ. ಆ ಎಳೆಯನ್ನು ಮುಂದುವರಿಸಿಕೊಂಡು ಹೋದೆ. ಚೆನ್ನೈನ ಕಡಲತೀರ ನನ್ನ ಪಾಲಿಗೆ ಪಾಸಿಟಿವ್ ಅಂಶಗಳನ್ನು ನೀಡುವ ತಾಣ.
ಶ್ರೀಮುರಳಿ ಅವರನ್ನೇ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದು ಏಕೆ?
ಶ್ರೀಮುರಳಿ ಅವರಿಗೆ ‘ಚಂದ್ರ ಚಕೋರಿ’ ಚಿತ್ರ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಸಿನಿಮಾ ಅವರು ಎಲ್ಲಾ ವರ್ಗದಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿದ್ದರು. ಉತ್ತರ ಕರ್ನಾಟಕದಲ್ಲೂ ಎರಡು ವರ್ಷ ಪ್ರದರ್ಶನ ಕಂಡಿದ್ದು ಇದರ ಹೆಗ್ಗಳಿಕೆ. ‘ಕಂಠಿ’ ಸಿನಿಮಾದಲ್ಲಿ ಲವರ್‌ಬಾಯ್ ಆಗಿ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿಯೂ ಲಭಿಸಿತು. ‘ಉಗ್ರಂ’, ‘ರಥಾವರ’ ಮತ್ತು ‘ಮಫ್ತಿ’ಯಲ್ಲಿ ಮಾಸ್ ಆಡಿಯನ್ಸ್‌ಗೆ ಜಾಸ್ತಿ ಅವಕಾಶವಿತ್ತು. ಅವರು ಆ್ಯಂಗ್ರಿ ಯಂಗ್‌ಮನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಎಂಟರ್‌ಟೈನರ್ ಆಗಿ ಮಾಡಿರಲಿಲ್ಲ.
‘ಚಂದ್ರ ಚಕೋರಿ’ ಮತ್ತು ‘ಕಂಠಿ’ಯಲ್ಲಿ ಅವರದು ಅಪ್ಪಟವಾದ ಮನರಂಜಿಸುವ ಪಾತ್ರ. ಕಂಟೆಂಟ್ ಸಿನಿಮಾಗಳಲ್ಲಿ ಮನರಂಜನೆಗೆ ಜಾಗ ಕಡಿಮೆ. ‘ಭರಾಟೆ’ ಕೌಟುಂಬಿಕ ಮನರಂಜನಾತ್ಮಕ ಸಿನಿಮಾ. ಇದರಲ್ಲಿ ಸಂಬಂಧಗಳ ಕಥನವಿದೆ. ಹಿಂದಿನ ಸಿನಿಮಾಗಳಲ್ಲಿ ವರ್ಣಮಯವಾಗಿ ಅವರ ಲುಕ್, ರಿಯಾಕ್ಷನ್ ತೋರಿಸಲು ಅವಕಾಶ ಇರಲಿಲ್ಲ. ಭರಾಟೆಯಲ್ಲಿ ಅದು ಸಾಧ್ಯವಾಗಿದೆ. ಇದರ ಮೂಲಕ ಮತ್ತೆ ಎಂಟರ್‌ಟೈನರ್ ಹೀರೊ ಆಗಿ ಹೊಮ್ಮುತ್ತಾರೆ.
ಸಿನಿಮಾದಲ್ಲಿ ನಟನಿಗೆ ಫರ್ಮಾಮೆನ್ಸ್‌ಗೆ ಸಾಕಷ್ಟು ಜಾಗವಿರಬೇಕು. ಭರಾಟೆಯಲ್ಲಿ ಅಳು, ನಗು, ಎಮೋಷನ್, ಲವ್, ರೊಮ್ಯಾಂಟಿಕ್ ಹೀಗೆ ಎಲ್ಲದ್ದಕ್ಕೂ ಜಾಗವಿದೆ. ಅವರೊಬ್ಬ ಕಂಪ್ಲೀಟ್ ಆ್ಯಕ್ಟರ್ ಆಗಿ ಹೊರಹೊಮ್ಮಿದ್ದಾರೆ ಎಂಬ ಹೆಮ್ಮೆ ನನಗಿದೆ.
ಇದನ್ನೂ ಓದಿ:ಭರ ಭರ ಭರಾಟೆ
ಚಿತ್ರೀಕರಣದ ಅನುಭವದ ಬಗ್ಗೆ ಹೇಳಿ.
ಈ ಚಿತ್ರದಲ್ಲಿ ವಿಜಯದಶಮಿ ಹಬ್ಬದ ಆಚರಣೆ ಇದೆ. ಇದರ ಶೂಟಿಂಗ್‌ಗಾಗಿ ನೆಲಮಂಗಲದ ಬಳಿ ನವದುರ್ಗದಲ್ಲಿದೊಡ್ಡ ಸೆಟ್ ಹಾಕಿದ್ದೆವು. ನನ್ನ ನಿರೀಕ್ಷೆಗೂ ಮೀರಿ ವಿಷ್ಯುಯಲ್ಸ್ ಬಂದಿದೆ. ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. 41 ಕಲಾವಿದರು ಇದ್ದಾರೆ. ಆ ಪೈಕಿ 17 ನೆಗೆಟಿವ್ ಶೇಡ್‌ಗಳಿವೆ. ದೊಡ್ಡ ಕ್ಯಾನ್ವಾಶ್ ಸಿನಿಮಾ ಇದು. ಇದೇ ಸಿನಿಮಾದ ಮತ್ತೊಂದು ಶಕ್ತಿ.
ಚಿತ್ರದಲ್ಲಿನ ಇನ್ನೊಂದು ಹಾಡನ್ನು ಏಕೆ ಬಿಡುಗಡೆ ಮಾಡಿಲ್ಲ?
ಹಾಡಿಗೆ ಸಿನಿಮಾದ ಕಥೆಯನ್ನು ಮೀರುವ ಶಕ್ತಿ ಇರುತ್ತದೆ. ಹಾಗಾಗಿ, ಒಂದು ಹಾಡನ್ನು ಥಿಯೇಟರ್‌ಗಾಗಿಯೇ ಮೀಸಲಿಟ್ಟಿದ್ದೇವೆ. ಅದು ಅದ್ಭುತವಾಗಿ ಮೂಡಿಬಂದಿದೆ. ಜನರನ್ನು ಬಹುಕಾಲದವರೆಗೂ ಕಾಡುವ ಶಕ್ತಿ ಅದಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.