ADVERTISEMENT

ಗಡಿನಾಡಲಿ ಅರಳಿದ ಪ್ರೇಮ ಕಥೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 2:06 IST
Last Updated 27 ಡಿಸೆಂಬರ್ 2019, 2:06 IST
‘ಗಡಿನಾಡು’ ಚಿತ್ರದಲ್ಲಿ ಸಂಚಿತಾ ಪಡುಕೋಣೆ ಮತ್ತು ಪ್ರಭುಸೂರ್ಯ
‘ಗಡಿನಾಡು’ ಚಿತ್ರದಲ್ಲಿ ಸಂಚಿತಾ ಪಡುಕೋಣೆ ಮತ್ತು ಪ್ರಭುಸೂರ್ಯ   

‌ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮಹಾಜನ್‌ ವರದಿ ಹೇಳಿದೆ. ಆದರೂ, ಮರಾಠಿಗರು ತಗಾದೆ ತೆಗೆಯುವುದು ನಿಂತಿಲ್ಲ. ಈಗ ಈ ವಿಷಯವಿಟ್ಟುಕೊಂಡೇ ನಿರ್ದೇಶಕ ನಾಗ್‌ ಹುಣಸೋಡು ‘ಗಡಿನಾಡು’ ಚಿತ್ರದ ಕಥೆ ಹೆಣೆದು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯೂ ಅವರದ್ದೇ. ಈಗಾಗಲೇ, ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಂದೆ ಹೋಗಿದೆ. ಜನವರಿ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ನಾಯಕ ಶಿಕ್ಷಣ ಮುಗಿಸಿಕೊಂಡು ತನ್ನೂರು ಬೆಳಗಾವಿಗೆ ಹೋಗುತ್ತಾನೆ. ಆಗ ಅಲ್ಲಿನ ಗಡಿ ಸಮಸ್ಯೆಯ ಅರಿವಾಗುತ್ತದೆ. ಇದರ ಪರಿಹಾರಕ್ಕೆ ಆತ ಗಡಿನಾಡ ಸೇನೆ ಕಟ್ಟುತ್ತಾನೆ. ಈ ನಡುವೆಯೇ ಮರಾಠಿ ಚೆಲುವೆಯ ಮೇಲೆ ಮೋಹಿತನಾಗುತ್ತಾನೆ. ಈ ಪ್ರೀತಿ ಸಹಿಸದವರು ಇಬ್ಬರಿಗೂ ಕಷ್ಟ ಕೊಡುತ್ತಾರೆ. ಕೊನೆಗೆ, ಆಕೆ ಅವನಿಗೆ ಸಿಗುತ್ತಾಳೆಯೇ ಎನ್ನುವುದೇ ಚಿತ್ರದ ಕಥಾಹಂದರ.

ADVERTISEMENT

ಚರಣ್‍ರಾಜ್, ಶೋಭರಾಜ್, ದೀಪಕ್‍ ಶೆಟ್ಟಿ ಮತ್ತು ರಘುರಾಜು ಖಳನಾಯಕರಾಗಿ ನಟಿಸಿರುವುದು ಚಿತ್ರದ ವಿಶೇಷ. ಮರಾಠಿ ಹುಡುಗಿಯಾಗಿ ಸಂಚಿತಾ ಪಡುಕೋಣೆ ಬಣ್ಣ ಹಚ್ಚಿದ್ದಾರೆ. ಪ್ರಭುಸೂರ್ಯ ಈ ಚಿತ್ರದ ನಾಯಕ. ಇದು ಅವರ ಎರಡನೇಯ ಚಿತ್ರ. ಗೌರಿ ವೆಂಕಟೇಶ್ -ರವಿಸುವರ್ಣ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ವಿನ್‍ ಜೋಶ್ವಾ ಸಂಗೀತ ನೀಡಿದ್ದಾರೆ. ಥ್ರಿಲ್ಲರ್‌ ಮಂಜು ಮತ್ತು ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶಿಸಿದ್ದಾರೆ. ವಸಂತ್‍ಮುರಾರಿ ದಳವಾಯಿ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.