ADVERTISEMENT

‘ಮಗಳು ಜಾನಕಿ’ ನಟಿ ಗಾನವಿಯ ಸಿನಿಮಾ ಕಥೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 19:45 IST
Last Updated 23 ಏಪ್ರಿಲ್ 2020, 19:45 IST
ಗಾನವಿ
ಗಾನವಿ   

ಟಿ.ಎನ್. ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯ ಕೇಂದ್ರಬಿಂದು ಜಾನಕಿ. ಈ ಪಾತ್ರಕ್ಕೆ ಜೀವತುಂಬಿದವರು ನಟಿ ಗಾನವಿ. ಈ ಪಾತ್ರದ ಮೂಲಕವೇ ಅಸ್ಮಿತೆ ಸಂಪಾದಿಸಿಕೊಂಡವರು ಇವರು.

ಗಾನವಿ ಅವರು ಈಗ ‘ಭಾವಚಿತ್ರ’ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್‌, ಪ್ರೀತಿ, ಥ್ರಿಲ್ಲರ್ ಎಳೆಗಳು ಇರುವ ಚಿತ್ರ ಇದು. ಇದರಲ್ಲಿ ಗಾನವಿ ಅವರದ್ದು ನಾಯಕಿಯ ಪಾತ್ರ. ಇತಿಹಾಸಕ್ಕೆ ಸಂಬಂಧಿಸಿದ ಎಳೆಯೊಂದು ಕೂಡ ಇದರಲ್ಲಿ ಇದೆಯಂತೆ.

ಚಿತ್ರದ ಕುರಿತ ಮಾತುಕತೆಗೆ ಗಾನವಿ ಅವರು ‘ಸಿನಿಮಾ ಪುರವಣಿ’ ಜೊತೆ ಸಿಕ್ಕಿದ್ದರು. ‘ಇದರ ಚಿತ್ರೀಕರಣವು ಹಾವೇರಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ನಡೆದಿದೆ. ನಾನು ಇದರಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ನನ್ನ ಪಾತ್ರದ ಒಂದು ಶೇಡ್‌ನಲ್ಲಿ ನಾನು ಹಳೆಯ ದೇವಸ್ಥಾನ, ಅಲ್ಲಿನ ಶಿಲ್ಪಕಲೆಯ ಬಗ್ಗೆ ಅಧ್ಯಯನ ನಡೆಸುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತೇನೆ. ಬಹಳ ಸರಳ, ಸುಶಿಕ್ಷಿತ ಹುಡುಗಿಯ ಪಾತ್ರ ಅದು’ ಎಂದರು.

ADVERTISEMENT

ಗಾನವಿ ಅವರಿಗೆ ತಾವು ಸಿನಿಮಾ ಲೋಕ ಪ್ರವೇಶಿಸಬೇಕು ಎಂಬ ಬಯಕೆ ಮೊದಲಿನಿಂದಲೂ ಇತ್ತು. ಸಿನಿಮಾ ಮಾಡುವ ರೀತಿಯೇ ಅವರಲ್ಲಿ ಆಸಕ್ತಿ ಮೂಡಿಸುತ್ತಿತ್ತು. ಹಳ್ಳಿಯ ಪರಿಸರದಲ್ಲಿ ಮಾಡುವ ಸಿನಿಮಾಗಳು ಗಾನವಿ ಅವರಿಗೆ ಬಹಳ ಖುಷಿ ಕೊಡುತ್ತಿದ್ದವಂತೆ. ಹಾಗೆಯೇ, ವಾಸ್ತವಕ್ಕೆ ಹತ್ತಿರವಾದ ಪಾತ್ರಗಳನ್ನು ಸೃಷ್ಟಿಸುವುದು ಕೂಡ ಗಾನವಿ ಅವರಲ್ಲಿ ಸೆಳೆತ ಮೂಡಿಸುತ್ತಿದ್ದ ಇನ್ನೊಂದು ಅಂಶ. ‘ಸೀತಾರಾಮ್ ಅವರ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆತ ನಂತರ, ಸಿನಿಮಾ ಉದ್ಯಮ ನನ್ನನ್ನು ಗುರುತಿಸಿತು. ನಾನು ಯಾರು ಎಂಬುದು ಉದ್ಯಮಕ್ಕೆ ಇದಕ್ಕೂ ಮೊದಲು ಗೊತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಈ ಧಾರಾವಾಹಿಯ ಕಾರಣದಿಂದಾಗಿ ನನಗೆ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳುವುದು ತುಸು ಸುಲಭವಾಯಿತು’ ಎಂದು ಕೃತಜ್ಞತೆಯಿಂದ ಹೇಳಿದರು ಗಾನವಿ.

ಅಂದಹಾಗೆ, ಈ ಸಿನಿಮಾಕ್ಕೂ ಮೊದಲು ಅವರು ಬೇರೆ ಒಂದು ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಆ ಚಿತ್ರದ ಕೆಲಸಗಳು ತಾತ್ಕಾಲಿಕವಾಗಿ ನಿಂತಿವೆ ಎಂಬ ಸುದ್ದಿ ಇದೆ. ‘ಭಾವಚಿತ್ರ ಸಿನಿಮಾದಲ್ಲಿ ನಟಿಸುವ ಅವಕಾಶವು ನನಗೆ ನನ್ನ ರಂಗಭೂಮಿ ಸಂಪರ್ಕದ ಮೂಲಕ ಸಿಕ್ಕಿದ್ದು. ಮೊದಲು ಇದರಲ್ಲಿ ನಟಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರಲಿಲ್ಲ. ಆದರೆ, ಕಥೆಯನ್ನು ಕೇಳಿದ ನಂತರ ನನಗೆ ಇದರಲ್ಲಿ ನಟಿಸುವ ಮನಸ್ಸು ಆಯಿತು. ಕಷ್ಟಪಟ್ಟು ದುಡಿಯುವ ತಂಡ ಈ ಚಿತ್ರದಲ್ಲಿ ಇದೆ. ಹಾಗಾಗಿ ಇದರ ಭಾಗವಾಗಲು ನಾನು ಒಪ್ಪಿಕೊಂಡೆ’ ಎಂದು ತಿಳಿಸಿದರು.

ಸಿನಿಮಾದಲ್ಲಿ ತಮಗೆ ಸಿಕ್ಕಿರುವ ಪಾತ್ರವು ಜಾನಕಿಯ ಪಾತ್ರಕ್ಕಿಂತ ಭಿನ್ನ ಎನ್ನುತ್ತಾರೆ ಅವರು. ‘ಸಿನಿಮಾದಲ್ಲಿ ನಾನು ಮಾಡಿರುವುದು ಒಂದಿಷ್ಟು ಬೋಲ್ಡ್‌ ಗುಣಗಳು ಇರುವ ಪಾತ್ರ. ಇಂದಿನ ತಲೆಮಾರಿನ ಯುವತಿಯ ಪಾತ್ರ ನಿಭಾಯಿಸಿದ್ದೇನೆ. ಒಂದು ವಿಚಾರದ ಮೇಲೆ ಗಮನವಿಟ್ಟು ಕೆಲಸ ಮಾಡುವ ವ್ಯಕ್ತಿತ್ವ ಆಕೆಯದ್ದು. ಜಾನಕಿಯ ಪಾತ್ರಕ್ಕೆ ಸಮೀಪದ ವ್ಯಕ್ತಿತ್ವ ಇದರಲ್ಲಿ ಇಲ್ಲ. ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಇನ್ನಷ್ಟು ಹೇಳಿಬಿಟ್ಟರೆ, ಸಿನಿಮಾ ಕುರಿತ ಕುತೂಹಲ ಕರಗಿಹೋಗುತ್ತದೆ. ಹಾಗಾಗಿ ಹೆಚ್ಚು ಹೇಳಲಾರೆ’ ಎಂದರು.

‘ಜಾನಕಿಯ ವ್ಯಕ್ತಿತ್ವದ ಪ್ರಭಾವವು ಈ ಸಿನಿಮಾದ ಪಾತ್ರದ ಮೇಲೆ ಬಾರದಂತೆ ನೋಡಿಕೊಂಡಿದ್ದೇನೆ. ಸಿನಿಮಾ ಸೆಟ್‌ಗೆ ಹೋಗುವಾಗ ನಾನು ಪಾತ್ರ ನಿಭಾಯಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಂಡೇ ಹೋಗುತ್ತಿದ್ದೆ. ಕೆಲವೊಮ್ಮೆ ಜಾನಕಿಯ ಛಾಯೆ ಸಂಭಾಷಣೆಯಲ್ಲಿ ಬಂದಾಗ ಸಿನಿಮಾ ನಿರ್ದೇಶಕರು ನನ್ನನ್ನು ಎಚ್ಚರಿಸುತ್ತಿದ್ದರು. ನನ್ನನ್ನು ಹಾಗೆ ಎಚ್ಚರಿಸುವಂತೆ ಅವರಿಗೆ ನಾನು ಮೊದಲೇ ಹೇಳಿದ್ದೆ ಕೂಡ’ ಎಂದು ತಾವು ಪಾತ್ರ ನಿಭಾಯಿಸಿದ ಬಗೆಯ ಕುರಿತು ತಿಳಿಸಿದರು.

ಅಂದಹಾಗೆ, ‘ಯಾನ’ ಚಿತ್ರದಲ್ಲಿ ಮುಖ್ಯ ‍ಪಾತ್ರವೊಂದನ್ನು ನಿಭಾಯಿಸಿದ್ದ ಚಕ್ರವರ್ತಿ ಅವರು ಇದರ ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.