ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಕೊನೆಯ ಬಾರಿಗೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿರುವ ‘ಗಂಧದಗುಡಿ’ಚಿತ್ರ ರಾಜ್ಯದಲ್ಲಿ ಶುಕ್ರವಾರ 250ಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡಿದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣಗೊಂಡಿರುವ ಈ ಡಾಕ್ಯೂಫಿಲ್ಮ್ ಅನ್ನು ಅಮೋಘವರ್ಷ ನಿರ್ದೇಶಿಸಿದ್ದಾರೆ.
ಗಂಧದಗುಡಿ ಚಿತ್ರದಕುರಿತಂತೆಅಭಿಮಾನಿಗಳು ಟ್ವಿಟರ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ನಮ್ಮ ಗಂಧದ ಗುಡಿಯ ಸುಂದರವಾದ ದೃಶ್ಯಗಳು ಮತ್ತು ಬ್ಯಾಗ್ರೌಂಡ್ ಸ್ಕೋರ್‌ನಿಂದ ಈ ಚಿತ್ರ ಹೆಚ್ಚು ವಿಶೇಷವಾಗಿದೆ. ನಮ್ಮ ಪ್ರೀತಿಯ ಅಪ್ಪುವಿನಿಂದ ಕೊನೆಯ ಅಪ್ಪುಗೆಯಂತೆ ಭಾಸವಾಯಿತು. ಮಹಾನ್ ವ್ಯಕ್ತಿಗೆ ಅತ್ಯುತ್ತಮ ಬೀಳ್ಕೊಡುಗೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಗಂಧದಗುಡಿ ಸಿನಿಮಾ ಒಂದು ಹೃದಯಸ್ಪರ್ಶಿ ಅನುಭವವಾಗಿದೆ. ಚಿತ್ರದಲ್ಲಿ ಪುನೀತ್ ಸರ್ ಅವರು ತಮ್ಮ ಸಂತೋಷ ಮತ್ತು ಕೌತುಕವನ್ನು ಹಂಚಿಕೊಳ್ಳುವ ರೀತಿ ಉತ್ತಮವಾಗಿ ಮೂಡಿಬಂದಿದೆ. ನಮ್ಮದೇ ಭೂಮಿಯನ್ನು ಸಂಪೂರ್ಣವಾಗಿ ಹೊಸ ರೀತಿಯಲ್ಲಿ ವೀಕ್ಷಿಸುವುದು, ಚಿತ್ರೀಕರಿಸಿ ವಿಶ್ವ ದರ್ಜೆಯ ರೀತಿಯಲ್ಲಿ ನಮಗೆ ಪ್ರಸ್ತುತಪಡಿಸಿರುವುದು ಸಂತಸದ ವಿಷಯವಾಗಿದೆ. ಇಡೀ ತಂಡಕ್ಕೆ ಧನ್ಯವಾದಗಳು ಎಂದು ನಟ ಮತ್ತು ನಿರ್ದೇಶಕ ರಿಷಿ ಟ್ವೀಟ್ ಮಾಡಿದ್ದಾರೆ.
‘ಹಸುರಿನ ಬನಸಿರಿಗೆ ಒಲಿದು ಸೌಂದರ್ಯ ಸರಸ್ವತಿ ಧರೆಗೆ ಇಳಿದು..’ ಕರ್ನಾಟಕದಲ್ಲಿ ನಾವು ಕಾಣದ ಸೌಂದರ್ಯದ ಅನ್ವೇಷಣೆ ಇದಾಗಿದೆ. ‘ಗಂಧದಗುಡಿ’ ರಿಯಲ್ ಹೀರೋ ಜೊತೆಗಿನ ಪಯಣ ಎಂದು ಕೃಷ್ಣ ಎಂಬುವವರು ಬರೆದುಕೊಂಡಿದ್ದಾರೆ. ಮನಸ್ಸಿಗೆ ಮುದ ನೀಡುವ ಅನುಭವ. ಅಮೋಘವರ್ಷ ಅವರೇ ಇದೊಂದು ಅದ್ಬುತ ಐಡಿಯಾ ಎಂದು ಅವರು ಹೇಳಿದ್ಧಾರೆ.
ಉಸಿರು ಬಿಗಿದಿಡಿದು ನೋಡುವ ದೃಶ್ಯ ವೈಭವ. ಅಪ್ಪು ಸರ್ ಅವರ ಸರಳತೆ, ವನ್ಯಜೀವಿಗಳು ಮತ್ತು ಮಾನವ ಸಂಘರ್ಷ, ಕಾಡಿನ ಸಂರಕ್ಷಣೆಯ ಜಾಗೃತಿ, ಗ್ರಾಮೀಣ ಮಕ್ಕಳ ಶಿಕ್ಷಣ., ಈ ಎಲ್ಲವೂ ಚಿತ್ರದಲ್ಲಿದೆ. ಮುಂದಿನ ಪೀಳಿಗೆಗೆ ಇದೊಂದು ಉಡುಗೊರೆ ಎಂದು ಅವರು ಬಣ್ಣಿಸಿದ್ದಾರೆ.
ಪುನೀತ್ ಅವರನ್ನು ವೈಯಕ್ತಿಕವಾಗಿ ಬಲ್ಲವರಿಗೆ, ಈ ಚಿತ್ರ ಅವರ ಜೊತೆ ಕೊನೆಯ ಸಂಭಾಷಣೆಯನ್ನು ಪುನರಾರಂಭಿಸುವಂತಿದೆ. ಸೂಪರ್‌ಸ್ಟಾರ್ ಅನ್ನು ಮೆಚ್ಚಿದವರಿಗೆ, ಅವರು ನಿಜವಾಗಿಯೂ ಯಾರೆಂಬುದರ ಬಗ್ಗೆ ಒಂದು ಇಣುಕು ನೋಟ. ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಮೀರಿದ ಅನುಭವ. ಅಪ್ಪುಸರ್ ಬದುಕುತ್ತಿದ್ದಾರೆ! ಕುಡೋಸ್.. ಅಮೋಘವರ್ಷ ಮತ್ತು ತಂಡ ಎಂದು ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.
ಹೊಸ ಯುಗ ಆರಂಭವಾಗಿದೆ. ಅಪ್ಪು ಸರ್ ಜೀವಿಸಿದ್ದ ಯುಗದಲ್ಲಿ ನಾನು ಜೀವಿಸಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ ಎಂದು ಮತ್ತೊಬ್ಬ ಟ್ವೀಟಿಗರು ಬರೆದಿದ್ಧಾರೆ. ಪ್ರಕೃತಿ ದೈವವಲ್ಲ, ದೇವರ ಜೊತೆ ಪ್ರಕೃತಿ ಎಂದು ಮತ್ತೊಬ್ಬ ಟ್ವೀಟ್ ಬಳಕೆದಾರರು ಬಣ್ಣಿಸಿದ್ದಾರೆ.
ಇದರ ಜೊತೆಗೆ ನೂರಾರು ಅಭಿಮಾನಿಗಳು ಸಹ ಗಂಧದಗುಡಿ ಚಿತ್ರವನ್ನು ಮೆಚ್ಚಿಕೊಂಡು ಟ್ವೀಟ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಚಿತ್ರರಂಗದಲ್ಲಷ್ಟೇ ಅಲ್ಲ. ಸಮಾಜದ ಎಲ್ಲ ವಲಯಗಳ ಜನರ ಜೊತೆ ಸುಲಭವಾಗಿ ಬೆರೆಯುತ್ತಿದ್ದ ಸಜ್ಜನರಾಗಿದ್ದರು. ಹೀಗಾಗಿ, ಎಲ್ಲೆಡೆಯಿಂದ ಗಂಧದಗುಡಿ ಚಿತ್ರಕ್ಕೆ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ.
ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಅವರು, ಪುನೀತ್ ಅವರ ಕೊನೆಯ ಚಿತ್ರಕ್ಕೆ ಶುಭ ಕೋರಿದ್ದಾರೆ.
ಕರುನಾಡಿನ ವನ್ಯಲೋಕ, ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿರುವ ಈ ಚಿತ್ರದಲ್ಲಿ ‘ಪವರ್‌ಸ್ಟಾರ್’ ಎಂಬ ಪಟ್ಟವನ್ನು ಕೆಳಗಿಟ್ಟು ನೈಜವಾಗಿ ಹೆಜ್ಜೆ ಹಾಕಿದ್ದಾರೆ ಪುನೀತ್. ಭಾರತವಷ್ಟೇ ಅಲ್ಲದೆ ಅಮೆರಿಕ, ಯುಎಇ, ಸಿಂಗಪುರ ಹೀಗೆ ವಿದೇಶದ ನೂರಾರು ಪರದೆಗಳಲ್ಲೂ ಗಂಧದ ಘಮಲು ಹರಡಿದೆ. ಪುನೀತ್ ಅವರ ಅಕಾಲಿಕ ನಿಧನದ ಬಳಿಕ ತೆರೆಕಂಡಿದ್ದ ‘ಜೇಮ್ಸ್’ ಹಾಗೂ ‘ಲಕ್ಕಿಮ್ಯಾನ್’ ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು. ‘ಜೇಮ್ಸ್’ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಕೂಡ ಸೇರಿತ್ತು. ಇದೇ ವಾತಾವರಣ ‘ಗಂಧದಗುಡಿ’ ಬಿಡುಗಡೆ ವೇಳೆಯೂ ಇದೆ. ಸಾಮಾಜಿಕ ಮಾಧ್ಯಮಗಳಲ್ಲೂ ‘ಗಂಧದಗುಡಿ’ ಟ್ರೆಂಡಿಂಗ್‌ನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.