ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಬಹುನಿರೀಕ್ಷಿತ 'ಗಾಂಧಿ ಗೋಡ್ಸೆ- ಏಕ್ ಯುದ್ಧ್' ಚಿತ್ರದ ಟ್ರೇಲರ್ ಬುಧವಾರ ಬಿಡುಗಡೆಗೊಂಡಿದ್ದು, ಚಿತ್ರದ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಮಹಾತ್ಮಾ ಗಾಂಧಿ ಮತ್ತು ನಾಥೂರಾಮ್ ಗೋಡ್ಸೆ ನಡುವಿನ ಸೈದ್ಧಾಂತಿಕ ಸಮರವೇ ಚಿತ್ರದ ಕಥೆಯೆಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ
'ಘಾಯಲ್', 'ದಾಮಿನಿ', 'ಚೈನಾ ಗೇಟ್', 'ಪುಕಾರ್' ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ 'ಫಟಾ ಪೋಸ್ಟರ್ ನಿಕ್ಲಾ ಹೀರೋ’ ಬಳಿಕ ಯಾವುದೇ ಸಿನಿಮಾ ಮಾಡಿರಲಿಲ್ಲ. 2013ರಲ್ಲಿ ಈ ಚಿತ್ರ ತೆರೆಕಂಡಿತ್ತು. ಇದೀಗ ಮತ್ತೊಂದು ಭಿನ್ನ ಮತ್ತು ಗಟ್ಟಿಯಾದ ಚಿತ್ರದೊಂದಿಗೆ ಬಾಲಿವುಡ್‌ಗೆ ಮರಳಿದಂತೆ ಕಾಣುತ್ತಿದೆ.
ಅಹಿಂಸಾವಾದಿಯಾಗಿದ್ದ ಬಾಪುವನ್ನು ಕೊಲೆಗೈದು ದೇಶಕ್ಕೆ ವಿಲ್ಲನ್ ಆಗಿದ್ದರು ಗೋಡ್ಸೆ. ಗಾಂಧಿಜೀಗೆ ತದ್ವಿರುದ್ಧವಾಗಿ ತೀವ್ರಗಾಮಿ ಸಿದ್ಧಾಂತ ನಂಬಿದ್ದ ಗೋಡ್ಸೆ ಮತ್ತು ಮಹಾತ್ಮನ ಮುಖಾಮುಖಿ ಹೇಗಿರಬಹುದು, ಅವರ ಸಂವಾದಗಳೇನಿರಬಹುದು ಎಂಬ ಸುತ್ತಲೇ ಕಥೆ ಸಾಗುತ್ತದೆ.
ಗಾಂಧಿ ಹತ್ಯೆಯ ನಂತರವೂ ಇಬ್ಬರ ನಡುವಿನ ಕಾಲ್ಪನಿಕ ಸಂವಾದದ ದೃಶ್ಯಗಳು ಚಿತ್ರದಲ್ಲಿ ಇರುವಂತೆ ಕಾಣುತ್ತಿದೆ. ಗಣರಾಜ್ಯೋತ್ಸವದ ದಿನ ಈ ಸಿನಿಮಾ ತೆರೆಗೆ ಬರುತ್ತಿದೆ. ಜ.25ಕ್ಕೆ ಶಾರೂಖ್ ಅಭಿನಯದ ಪಠಾಣ್ ತೆರೆ ಕಾಣುತ್ತಿದೆ. ಈಗಾಗಲೇ ಒಂದು ಬಣದಿಂದ ವಿರೋಧ ಎದುರಿಸುತ್ತಿರುವ ಪಠಾಣ್‌ಗೆ ಗಾಂಧಿ ಚಿತ್ರ ಸವಾಲಾಗಿ ನಿಲ್ಲುವಂತೆ ಕಾಣುತ್ತಿದೆ.
ಮನಿಲಾ ಸಂತೋಷಿ ನಿರ್ಮಣದ ಚಿತ್ರದಲ್ಲಿ ಚಿನ್ಮಯ್ ಮಂಡ್ಳೇಕರ್ ನಾಥೂರಾಮ್ ಗೋಡ್ಸೆ ಪಾತ್ರ ಮಾಡಿದ್ದಾರೆ. ಮಹಾತ್ಮ ಗಾಂಧಿಯಾಗಿ ದೀಪಕ್ ಅಂತಾನಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ನಟರು ಜಿದ್ದಿಗೆ ಬಿದ್ದು ನಟಿಸಿದಂತೆ ಕಾಣುತ್ತಿದೆ. ಎ.ಆರ್. ರೆಹಮಾನ್ ಅವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆ. ತನಿಷಾ ಸಂತೋಷಿ, ಅನುಜ್ ಸೈನಿ, ಪವನ್ ಚೋಪ್ರಾ, ಶರದ್ ಸಿಂಗ್, ಆರೀಫ್ ಝಕಾರಿಯಾ ತಾರಾಗಣವಿದೆ. ರಿಷಿ ಪಂಜಾಬಿ ಛಾಯಾಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.