ADVERTISEMENT

'ಗಂಗೂಬಾಯಿ ಕಾಠಿಯಾವಾಡಿ' ಶೀರ್ಷಿಕೆ ಬದಲಿಸಲು ಸುಪ್ರೀಂ ಕೋರ್ಟ್ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2022, 12:53 IST
Last Updated 23 ಫೆಬ್ರುವರಿ 2022, 12:53 IST
ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಪೋಸ್ಟರ್
ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಪೋಸ್ಟರ್   

ನವದೆಹಲಿ: ಬಾಲಿವುಡ್‌ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಶೀರ್ಷಿಕೆ ಬದಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ ಎಂದು ವರದಿಯಾಗಿದೆ.

ಆಲಿಯಾ ಭಟ್‌ ಅಭಿನಯದ ಗಂಗೂಬಾಯಿ ಕಾಠಿಯಾವಾಡಿ ಚಿತ್ರ ಶುಕ್ರವಾರ ತೆರೆ ಕಾಣಲಿದೆ. ಈ ನಡುವೆ ನಿಜ ಜೀವನದ ಕಥೆ ಆಧರಿಸಿ ನಿರ್ಮಾಣವಾದ ಸಿನಿಮಾದ ಬಗ್ಗೆ ವಿವಾದ ಹುಟ್ಟಿಕೊಂಡಿದೆ.

ಬಹುನಿರೀಕ್ಷಿತ ಚಿತ್ರದ ಬಿಡುಗಡೆಯನ್ನು ತಡೆ ಹಿಡಿಯುವಂತೆ ಕೋರಿ ನ್ಯಾಯಾಲಯಗಳ ಮುಂದೆ ಅನೇಕ ಪ್ರಕರಣಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಚಿತ್ರದ ಶೀರ್ಷಿಕೆಯನ್ನು ಬದಲಿಸುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ ಎಂದು 'ಎನ್‌ಡಿಟಿವಿ' ವರದಿ ಮಾಡಿದೆ.

ADVERTISEMENT

ಬನ್ಸಾಲಿ ಪ್ರೊಡಕ್ಷನ್‌ನ ವಕೀಲ ಸಿದ್ದಾರ್ಥ ದಾವೆ ಈ ಕುರಿತು ತಮ್ಮ ಕಕ್ಷಿದಾರರಿಂದ ಸೂಚನೆಯನ್ನು ಪಡೆಯುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರದಂದು ವಿಚಾರಣೆ ಮುಂದುವರಿಯಲಿದೆ.

ಲೇಖಕ ಎಸ್. ಹುಸೈನ್ ಅವರ ಪುಸ್ತಕ 'ಮಾಫಿಯಾ ಕ್ವೀನ್ಸ್ ಆಫ್ ಮುಂಬೈ' ಆಧರಿಸಿ ಗಂಗೂಬಾಯಿ ಕಾಠಿಯಾವಾಡಿ ಚಿತ್ರವನ್ನು ನಿರ್ಮಿಸಲಾಗಿದೆ.

ಚಿತ್ರದ ವಿರುದ್ಧ ಗಂಗೂಬಾಯಿ ಅವರ ದತ್ತು ಪುತ್ರ ಕೂಡ ಕೋರ್ಟ್ ಮೆಟ್ಟಿಲೇರಿದ್ದು, ಸಿನಿಮಾ ರಿಲೀಸ್‌ಗೆ ತಡೆ ಕೋರಿ ಮನವಿ ಸಲ್ಲಿಸಿದ್ದಾರೆ.

ಚಿತ್ರದಲ್ಲಿ ಮುಂಬೈನ ಕಾಮಾಟಿಪುರದ ಬಗ್ಗೆ ಕೆಟ್ಟ ಸಂದೇಶ ರವಾನಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಹಾರಾಷ್ಟ್ರದ ಶಾಸಕ ಅಮಿನ್ ಪಟೇಲ್ ಹಾಗೂ ಕಾಮಾಟಿಪುರ ನಿವಾಸಿಗಳು ಕೂಡ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.