ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರ ಫೆಬ್ರುವರಿ 25ರಂದು ತೆರೆಗೆ ಬರುತ್ತಿರುವ ಬೆನ್ನಲ್ಲೇ ಚಿತ್ರದ ಬಿಡುಗಡೆ ಕಾನೂನು ಸಮಸ್ಯೆ ಎದುರಾಗಿದೆ.
ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ನಟಿ ಆಲಿಯಾ ಭಟ್ ಅವರು ಗಂಗೂಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಮುಂಬೈನ ಕಾಮಾಟಿಪುರದ ಮುಖ್ಯಸ್ಥೆಯಾಗಿದ್ದ ಗಂಗೂಬಾಯಿ ಹರ್ಜಿವಂದಾಸ್ ಅವರ ಜೀವನ ಆಧರಿಸಿದ ಸಿನಿಮಾ ಇದು. ಅವರ ಕತೆಯನ್ನು ಎಸ್.ಹುಸೇನ್ ಜೈದಿ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಗಂಗೂಬಾಯಿ, ವೇಶ್ಯೆಯರಿಗೆ ಸಮಾಜದಲ್ಲಿ ಗೌರವಯುತ ಬದುಕುವ ಕಟ್ಟಿಕೊಡುವುದು, ಅವರ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಟ ಮಾಡುವ ಕಥಾಹಂದರ ಇರುವ ಸಿನಿಮಾಎಂದು ಚಿತ್ರತಂಡ ಹೇಳಿಕೆ ನೀಡಿದೆ. ಆದರೆ ಚಿತ್ರದಲ್ಲಿಗಂಗೂಬಾಯಿ ಅವರನ್ನು ವೇಶ್ಯೆ ಎಂದು ಬಿಂಬಿಸಲಾಗಿದೆ ಎಂದು ಗಂಗೂಬಾಯಿ ಕುಟುಂಬದವರು ಆರೋಪಿಸಿದ್ದಾರೆ.
ಗಂಗೂಬಾಯಿ ವೇಶ್ಯೆ ಆಗಿರಲಿಲ್ಲ, ಅವರು ವೇಶ್ಯೆಯರ ಗೌರವಯುತ ಬದುಕಿಗಾಗಿ ಹೋರಾಟ ಮಾಡಿದ್ದರು. ಆದರೆ ಸಿನಿಮಾದಲ್ಲಿ ಅವರನ್ನು ತಪ್ಪಾಗಿ ಬಿಂಬಿಸಲಾಗಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ನಿರ್ಮಾಪಕರಿಗೆನೋಟಿಸ್ ಕಳುಹಿಸಲಾಗಿದೆ ಎಂದು ಗಂಗೂಬಾಯಿ ಕುಟುಂಬಸ್ಥರು ಹೇಳಿದ್ದಾರೆ.
ಗಂಗೂಬಾಯಿ ಅವರಿಗೆ ನಾಲ್ವರು ದತ್ತು ಮಕ್ಕಳು ಇದ್ದಾರೆ. ಅವರಲ್ಲಿ ಬಾಬುರಾವ್ ಎಂಬುವರು ಮಾಧ್ಯಮಗಳೊಂದಿಗೆ ಮಾತನಾಡಿ, ’ಈ ಸಿನಿಮಾದಲ್ಲಿ ಗಂಗೂಬಾಯಿ ಅವರ ಚಾರಿತ್ರ್ಯ ಹರಣ ಮಾಡಲಾಗಿದೆ, ನಾವು ಸಂಜಯ್ ಲೀಲಾ ಬನ್ಸಾಲಿ, ಹುಸೇನ್ ಜೈದಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಸದ್ಯ ಈ ಸಿನಿಮಾ ಬಿಡುಗಡೆಗೆ ತಡೆ ಕೋರಿ ನೋಟಿಸ್ ನೀಡಲಾಗಿದೆ ಎಂದು ಖಚಿತಪಡಿಸಿದ್ದಾರೆ.
ಟ್ರೈಲರ್ನಲ್ಲಿ ಆಲಿಯಾರನ್ನು ವೇಶ್ಯಾಗೃಹಕ್ಕೆ ಮಾರುವುದು ಮತ್ತು ಆಕೆ ಕಾಮಾಟಿಪುರದಲ್ಲಿ ಹೋರಾಟಗಾರ್ತಿಯಾಗಿ ಬೆಳೆಯುವುದನ್ನು ತೋರಿಸಲಾಗಿದೆ.
ಫೆಬ್ರುವರಿ 25ಕ್ಕೆ ಚಿತ್ರ ತೆರೆ ಕಾಣಲಿದೆ. ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್ ದೇವಗನ್ ಮತ್ತು ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.