ADVERTISEMENT

ಗೀತಾ ಪಿಕ್ಚರ್ಸ್‌ನ ವೇದಾಂತರಂಗ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 19:31 IST
Last Updated 23 ಜೂನ್ 2022, 19:31 IST
ಗೀತಾ ಪಿಕ್ಚರ್ಸ್‌ ಲಾಂಛನ ಬಿಡುಗಡೆ ಸಮಾರಂಭದಲ್ಲಿ ನಟ ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌ ಹಾಗೂ ಕುಟುಂಬದವರು ಒಟ್ಟಾಗಿ ಕಾಣಿಸಿಕೊಂಡದ್ದು ಹೀಗೆ
ಗೀತಾ ಪಿಕ್ಚರ್ಸ್‌ ಲಾಂಛನ ಬಿಡುಗಡೆ ಸಮಾರಂಭದಲ್ಲಿ ನಟ ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌ ಹಾಗೂ ಕುಟುಂಬದವರು ಒಟ್ಟಾಗಿ ಕಾಣಿಸಿಕೊಂಡದ್ದು ಹೀಗೆ   

ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಮೂಡಿಬರುತ್ತಿರುವ ‘ವೇದಾ’ ಸಿನಿಮಾ ಶಿವರಾಜ್‌ಕುಮಾರ್‌ ಅವರ 125ನೇ ಸಿನಿಮಾ ಎಂಬುವುದಷ್ಟೇ ವಿಶೇಷವಲ್ಲ. ಎ.ಹರ್ಷ ಹಾಗೂ ಶಿವರಾಜ್‌ಕುಮಾರ್‌ ಅವರ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾವೂ ಇದಾಗಿದೆ. ಚಿತ್ರದ ಶೇ 60ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ...

ನಟ ಶಿವರಾಜ್‌ಕುಮಾರ್‌ ಅವರ 125ನೇ ಚಿತ್ರದ ಶೀರ್ಷಿಕೆ ಅನಾವರಣ,ಗೀತಾ ಪಿಕ್ಚರ್ಸ್‌ನ ಲಾಂಛನ ಬಿಡುಗಡೆ, ಗೀತಾ ಶಿವರಾಜ್‌ಕುಮಾರ್‌ ಅವರ ಜನ್ಮದಿನ... ಹೀಗೆ ಸಾಲು ಸಂಭ್ರಮಗಳಿಗೆ ಬೆಂಗಳೂರಿನ ಅರಮನೆ ಮೈದಾನದ ಅದ್ದೂರಿ ವೇದಿಕೆಯಲ್ಲಿ ನಡೆದ ವರ್ಣರಂಜಿತ ಸಮಾರಂಭ ಸಾಕ್ಷಿಯಾಯಿತು.

ಅಂದಹಾಗೆ, ಈ ಮೆಗಾ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬದ ಎಲ್ಲ ಸದಸ್ಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಚಂದನವನದ ಎಲ್ಲ ಗಣ್ಯರು ಹಾಜರಿದ್ದು ಶುಭಕೋರಿದರು.

ADVERTISEMENT

‘ವೇದಾ’ ಚಿತ್ರದ ಶೀರ್ಷಿಕೆ ಬಿಡುಗಡೆ ಬಳಿಕ ಪತ್ನಿ ಗೀತಾ ಅವರಿಗೆ ಶುಭಕೋರಿ ಮಾತನಾಡಿದ ಶಿವರಾಜ್‌ಕುಮಾರ್‌, ‘ಅಪ್ಪ–ಅಮ್ಮ, ವರದರಾಜ್‌, ಸಹೋದರರು, ಉದಯಶಂಕರ್‌ ಅವರೆಲ್ಲಾ ನನಗೆ ಒಳ್ಳೆಯ ಬುನಾದಿ ಹಾಕಿಕೊಟ್ಟರು. ಮುಂದೆ ಚಿತ್ರರಂಗದ ಹಿರಿಯರು, ನಿರ್ಮಾಪಕರು, ನಿರ್ದೇಶಕರು ನನ್ನನ್ನು ಯಾವತ್ತೂ ಕೆಳಗಿಳಿಯಲು ಬಿಡಲಿಲ್ಲ. ಸದಾ ಬ್ಯುಸಿ ಆಗಿರುವಂತೆ ಮಾಡಿದರು. ಹಾಗೆಯೇ ಅಭಿಮಾನಿಗಳು ಕೂಡಾ. ಇವರೆಲ್ಲ ಇಲ್ಲವಾದರೆ ಮೊದಲ ಚಿತ್ರದಿಂದ 125ನೇ ಚಿತ್ರದವರೆಗೆ ಬರಲು ಸಾಧ್ಯವಾಗುತ್ತಲೇ ಇರಲಿಲ್ಲ. ಅಭಿಮಾನಿಗಳ ಜೊತೆ ಅಪರೂಪದ ಸಂಬಂಧ ನನ್ನದು. ನಾನಿವತ್ತು ಇಲ್ಲಿರಲು ನೀವೇ ಕಾರಣ’ ಎಂದು ಕೃತಜ್ಞತೆ ಅರ್ಪಿಸಿದರು.

ಇದೇ ಮಾತನ್ನು ಅನುಮೋದಿಸಿದ ಗೀತಾ ಶಿವರಾಜ್‌ಕುಮಾರ್‌, ‘ಶಿವರಾಜ್‌ಕುಮಾರ್‌ ಅವರ ಹಿಂದಿನ ಶಕ್ತಿ ನೀವು (ಅಭಿಮಾನಿಗಳು). ಜೊತೆಗೆ ಅವರ ಅಪ್ಪ–ಅಮ್ಮ, ಸಹೋದರರು ಸೇರಿ ಕುಟುಂಬದ ಎಲ್ಲರೂ ಅವರ ಯಶಸ್ಸಿಗೆ ಕಾರಣರಾಗಿದ್ದಾರೆ. 100ನೇ ಚಿತ್ರದ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡಬೇಕಿತ್ತು. ಆದರೆ, ಮಾಡಲಾಗಿರಲಿಲ್ಲ. ಈಗ ಆ ಸಂದರ್ಭ ಬಂದಿದೆ. ‘ವೇದಾ’ ಇದು ನಿಮ್ಮೆಲ್ಲರ ಚಿತ್ರ’ ಎಂದು ಹೇಳಿದರು.

‘ಚಿತ್ರ ನಿರ್ಮಾಣದ ಬಗ್ಗೆ ಏನೊಂದೂ ಗೊತ್ತಿಲ್ಲದ ನನಗೆ ನಿರ್ದೇಶಕ ಹರ್ಷ ಅವರು ಆಗಾಗ ಮಾರ್ಗದರ್ಶನ ನೀಡುತ್ತಿದ್ದರು. ಹೀಗೆ ಎಲ್ಲರ ಮಾರ್ಗದರ್ಶನ, ಬೆಂಬಲ ಬೇಕು’ ಎಂದು ಅವರು ಆಶಿಸಿದರು.

ಲಾಂಛನ ಬಿಡುಗಡೆ ಮಾಡಿದ ನಟ ಅನಂತ್‌ನಾಗ್‌, ‘ನನ್ನ ಮನಸ್ಸಿನ ಪಟಲದ ಮೇಲೆ ಕಳೆದ ಐವತ್ತು ವರ್ಷಗಳೇ ಹಾದು ಹೋಗುತ್ತವೆ. ನಾನು ಚಿತ್ರರಂಗಕ್ಕೆ ಬಂದ ಕೆಲಕಾಲದಲ್ಲೇ ಡಾ.ರಾಜ್‌ಕುಮಾರ್‌ ಕುಟುಂಬದವರ ಪರಿಚಯವಾಯಿತು. ಅವರಿಂದ ಏಕಲವ್ಯನ ಹಾಗೆ ಸಾಕಷ್ಟು ಕಲಿತೆ. ರಾಜ್‌ಕುಮಾರ್‌ ತಾವಾಗಿಯೇ ಏನನ್ನೂ ಹೇಳುತ್ತಿರಲಿಲ್ಲ. ಕೇಳಿದರೆ ಹೇಳುತ್ತಿದ್ದರು. ಅವರ ನಟನಾ ಶೈಲಿಯ ಮೂಲಕವೇ ಕಲಿಸಿದರು. ರಾಜ್‌ಕುಮಾರ್‌ ಅವರ ಜೊತೆ ದೊಡ್ಡ ಸೃಜನಶೀಲ ತಂಡ ಇತ್ತು. ಒಳ್ಳೆಯ ಕಥೆಗಳನ್ನು ಆರಿಸಿ, ಭಿನ್ನವಾದ ವಿಷಯಗಳನ್ನು ಆಧರಿಸಿ ಚಿತ್ರ ಮಾಡುತ್ತಿದ್ದರು. ‘ವೇದಾ’ ಚಿತ್ರ ಹಾಗೂ ಗೀತಾ ಪಿಕ್ಚರ್ಸ್‌ ಹಾಗೆಯೇ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ಕ್ರಿಕೆಟಿಗ ಅನಿಲ್‌ ಕುಂಬ್ಳೆ,ಮಧು ಬಂಗಾರಪ್ಪ, ಸಂಗೀತ ನಿರ್ದೇಶಕರಾದ ಗುರುಕಿರಣ್‌, ಅರ್ಜುನ್‌ ಜನ್ಯ, ಜೀ ಸ್ಟುಡಿಯೋಸ್‌ನ ಸಿಇಒ ಶಾರೀಕ್‌ ಪಟೇಲ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

ಗೀತಾ ಪಿಕ್ಚರ್ಸ್‌ನ ಮೊದಲ ಚಿತ್ರವಾಗಿ ‘ವೇದಾ’ ಮೂಡಿಬರುತ್ತಿದೆ. ಈ ಚಿತ್ರಕ್ಕೆ ಜೀ ಸ್ಟುಡಿಯೋಸ್‌ ಕೈಜೋಡಿಸಿದೆ. ಶೀರ್ಷಿಕೆಯೇ ಕುತೂಹಲ ಮೂಡಿಸುವಂತಿದೆ. ಚಿತ್ರಕ್ಕೆ ಎ.ಹರ್ಷ ಅವರ ನಿರ್ದೇಶನವಿದೆ. ಹರ್ಷ ಹಾಗೂ ಶಿವರಾಜ್‌ಕುಮಾರ್‌ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. 2022ರಲ್ಲೇ ‘ವೇದಾ’ ತೆರೆಕಾಣಲಿದೆ. ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆ ಇದೆ ಎಂದು ಗೀತಾ ಶಿವರಾಜ್‌ಕುಮಾರ್‌ ಈ ಹಿಂದೆಯೇ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.