ADVERTISEMENT

ಗಿಫ್ಟ್‌ಬಾಕ್ಸ್‌ ತೆರೆದಿಟ್ಟ ಕರಾಳದಂಧೆ ಕಥೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 19:30 IST
Last Updated 21 ನವೆಂಬರ್ 2019, 19:30 IST
ಅಮಿತಾ ಕುಲಾಲ್‌
ಅಮಿತಾ ಕುಲಾಲ್‌   

‘ಮಾನವ ಕಳ್ಳಸಾಗಣೆಯ ಜಾಲಕ್ಕೆ ಸಿಲುಕಿದ ಟ್ರಾಫಿಕರ್‌ ಕೂಡ ಸಂತ್ರಸ್ತ. ಆತನದು ಮುಖವಾಡದ ಬದುಕು. ಮನೆಯಲ್ಲಿ ಆತನಿಗೂ ಅಮ್ಮ, ಹೆಂಡತಿ ಇರುತ್ತಾಳೆ. ಆತ ಕುಟುಂಬ, ಸಮಾಜವನ್ನು ಹೇಗೆ ಎದುರಿಸುತ್ತಾನೆ ಎನ್ನುವುದನ್ನು ಈ ಚಿತ್ರ ಕಟ್ಟಿಕೊಡುತ್ತದೆ’

–ಹೀಗೆಂದ ನಿರ್ದೇಶಕ ರಘು ಎಸ್‌.ಪಿ. ಅವರ ಮಾತಿನಲ್ಲಿ ಬಹುದಿನದ ಕನಸೊಂದು ನನಸಾದ ಧನ್ಯತೆಯಿತ್ತು. ಅವರು ಎರಡು ವರ್ಷದ ಹಿಂದೆ ನಿರ್ದೇಶಿಸಿದ್ದ ‘ಪಲ್ಲಟ’ ಚಿತ್ರ ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಪಡೆದಿತ್ತು. ಈಗ ಅವರ ಎರಡನೇ ಚಿತ್ರ ‘ಗಿಫ್ಟ್‌ಬಾಕ್ಸ್‌’ ಮಾನವ ಕಳ್ಳಸಾಗಣೆಯ ಕಬಂಧಬಾಹುವಿನ ಅನಾವರಣಕ್ಕೆ ಸಜ್ಜಾಗಿದೆ. ಇದರ ಕಥೆ, ಚಿತ್ರಕಥೆಯನ್ನು ಅವರೇ ನಿಭಾಯಿಸಿದ್ದಾರೆ.

ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡದ ಸಮೇತ ಅವರು ಸುದ್ದಿಗೋಷ್ಠಿಗೆ ಹಾಜರಾಗಿದ್ದರು.‘ಮಾನವ ಕಳ್ಳಸಾಗಣೆ ಮತ್ತು ‘ಲಾಕ್ಡ್‌ ಇನ್‌ ಸಿಂಡ್ರೋಮ್’ ಎಂಬ ನರರೋಗದ ಸಮಸ್ಯೆಯ ಸುತ್ತ ಈ ಚಿತ್ರದ ಕಥೆ ಹೊಸೆಯಲಾಗಿದೆ. ಮುಗ್ಧ ಯುವಕನೊಬ್ಬ ತನಗರಿವಿಲ್ಲದಂತೆ ಹೇಗೆ ಈ ಜಾಲದೊಳಗೆ ಸಿಲುಕುತ್ತಾನೆ ಎಂಬುದು ಚಿತ್ರದ ತಿರುಳು’ ಎಂದರು ರಘು.

ADVERTISEMENT
ನಟಿ ದೀಪ್ತಿ , ನಿರ್ದೇಶಕ ರಘು

‘ಈ ವಿಷಯ ಕುರಿತು ಸಾಕಷ್ಟು ಚಿತ್ರಗಳು ಬಂದಿವೆ. ಯಾರೊಬ್ಬರು ಮುಟ್ಟದ ವಿಷಯವನ್ನು ಹೆಕ್ಕಿ ತೆಗೆದು ಸಿನಿಮಾ ಮಾಡಿರುವ ಖುಷಿಯಿದೆ. ಸಿದ್ಧಮಾದರಿಯ ಸೂತ್ರವನ್ನು ಬದಿಗಿಟ್ಟು ಚಿತ್ರ ಮಾಡಿದ್ದೇವೆ’ ಎಂದು ವಿವರಿಸಿದರು.

ಅಮಿತಾ ಕುಲಾಲ್‌ ಅವರ ಮೊಗದಲ್ಲಿ ಮೂರು ಛಾಯೆಯ ಪಾತ್ರಗಳಿಗೆ ಬಣ್ಣ ಹಚ್ಚಿದ ಸಂತಸವಿತ್ತು. ‘ಇಂತಹ ಪಾತ್ರಗಳು ಸಿಗುವುದೇ ಅಪರೂಪ. ವೃತ್ತಿಬದುಕಿನಲ್ಲಿ ಒಳ್ಳೆಯ ಪಾತ್ರದಲ್ಲಿ ನಟಿಸಿದ್ದೇನೆ. ಕಲಿಕೆಗೂ ಸಾಕಷ್ಟು ಸಹಕಾರಿಯಾಯಿತು’ ಎಂದರು.

ದೀಪ್ತಿ ಮೋಹನ್‌ ಅವರದು ‘ಲಾಕ್ಡ್‌ ಇನ್‌ ಸಿಂಡ್ರೋಮ್‌’ನಿಂದ ಬಳಲುವ ಹುಡುಗಿಯ ಪಾತ್ರವಂತೆ. ‘ಈ ಪಾತ್ರದ ಮೇಕಪ್‌ಗಾಗಿ ಆರು ತಾಸು ಹಿಡಿಯುತ್ತಿತ್ತು’ ಎಂದು ಹೇಳಿಕೊಂಡರು.

ರಿತ್ವಿಕ್ ಮಠದ್‌ ಈ ಚಿತ್ರದ ನಾಯಕ. ಹಳ್ಳಿಚಿತ್ರ ಸಂಸ್ಥೆಯಡಿ ಸಿನಿಮಾ ನಿರ್ಮಿಸಲಾಗಿದೆ. ಮಹಾವೀರ್‌ ಸಾಬಣ್ಣವರ್‌ ಇದಕ್ಕೆ ಸಿಂಕ್‌ ಸೌಂಡ್‌ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಾಘವೇಂದ್ರ ಎಂ.ಬಿ. ಅವರದು. ವಾಸು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ಗುಂಡಣ್ಣ, ಶಿವಾಜಿರಾವ್‌ ಜಾಧವ್‌, ಪ್ರಸಾದ್‌ ಹುಣಸೂರ್, ಲಕ್ಷ್ಮಿ ಚಂದ್ರಶೇಖರ್‌, ಇಂದಿರಾ ನಾಯರ್‌
ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.