ಗಿಣಿರಾಮ ಮಾತನಾಡುವುದು ಗೊತ್ತು; ಕಥೆ ಹೇಳುವುದು ಗೊತ್ತಿದೆಯಾ? ‘ಗಿಣಿ ಹೇಳಿದ ಕಥೆ’ಯನ್ನು ತೆರೆಯ ಮೇಲೆ ಹೇಳಹೊರಟಿದ್ದಾರೆ ದೇವರಾಜ್. ರಂಗಭೂಮಿ ಹಿನ್ನೆಲೆಯ ದೇವರಾಜ್, ಹೀರೊ ಆಗಬೇಕೆಂದು ಹಲವು ವರ್ಷಗಳಿಂದ ಗಾಂಧಿನಗರದಲ್ಲಿ ಅಲೆದವರು. ಆದರೆ ಅವಕಾಶ ಸಿಗದಾದಾಗ ತಾವೇ ಸ್ನೇಹಿತರ ಬೆಂಬಲದಿಂದ ನಿರ್ಮಾಣ ಮಾಡಿ ಹೀರೊ ಆಗಿದ್ದಾರೆ. ಆ ಚಿತ್ರದ ಹೆಸರೇ ‘ಗಿಣಿ ಹೇಳಿದ ಕಥೆ’.
ಈ ಚಿತ್ರದ ಮೋಷನ್ ಪೋಸ್ಟರ್, ಟೀಸರ್, ಹಾಡುಗಳು ಎಲ್ಲವನ್ನೂ ಪತ್ರಕರ್ತರಿಗೆ ತೋರಿಸಿದರು ದೇವರಾಜ್.
‘ಇದೊಂದು ಪ್ರಯಾಣದ ಕಥೆ. ಕ್ಯಾಬ್ ಡ್ರೈವರ್‌ಗೆ ಬೆಂಗಳೂರಿನಿಂದ ಮಡಿಕೇರಿಗೆ ಬಾಡಿಗೆ ಹೋಗಬೇಕಾಗುತ್ತದೆ. ಆಗ ಅವನ ಜತೆ ಹೋಗುವವನಿಗೆ ತನ್ನ ಕಥೆಯನ್ನು ಹೇಳಿಕೊಳ್ಳುತ್ತಾನೆ.ಇದು ಒಂದು ಏರಿಯಾ ಒಳಗೆ ನಡೆಯುವ ಲವ್ ಸ್ಟೋರಿ. ಅಲ್ಲಿ ಬಡ್ಡಿ ವ್ಯವಹಾರ ಮಾಡುವವನ ಮಗಳ ಮೇಲೆ ನಾಯಕನಿಗೆ ಪ್ರೀತಿಯಾಗುತ್ತದೆ’ ಎಂದು ಕಥೆಯ ಎಳೆಯನ್ನು ಬಿಚ್ಚಿಟ್ಟರು. ಇಡೀ ಸಿನಿಮಾದಲ್ಲಿ ಹುಡುಗ ಹುಡುಗಿಯನ್ನು ಮುಟ್ಟದೇ ಪ್ರೀತಿಸುತ್ತಾನಂತೆ.
ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದವರೂ ದೇವರಾಜ್ ಅವರೇ. ನಾಗರಾಜ್ ಉಪ್ಪುಂದ ನಿರ್ದೇಶನ ಮತ್ತು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಹಿತನ್ ಹಾಸನ್ ಹಾಡುಗಳನ್ನು ಸಂಯೋಜಿಸಿದ್ದಾರೆ. ನಾಯಕಿ ಗೀತಾಂಜಲಿ ಅವರಿಗೆ ಇದು ಮೊದಲ ಸಿನಿಮಾ.
‘ನನ್ನ ಪಾತ್ರದ ಹೆಸರು ಅಮೃತಾ. ಸಂಪ್ರದಾಯಸ್ಥ ಕುಟುಂಬದ ಹುಡುಗಿ. ಟೀಚರ್ ಆಗಿರ್ತಾಳೆ. ಒಳ್ಳೆ ಸಬ್ಜೆಕ್ಟ್. ಅಮ್ಮ ತುಂಬ ಸ್ಟ್ರಿಕ್ಟ್. ಅದ್ಕೆ ಅಪ್ಪನ ಜತೆಗೆ ತಿರುಗಾಡುತ್ತಿರುತ್ತೀನಿ’ ಎಂದು ತಮ್ಮ ಪಾತ್ರದ ಬಗ್ಗೆ ಅವರು ಹೇಳಿಕೊಂಡರು. ಅರವತ್ತು ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದ ಉದ್ದೇಶ ಕಾಮಿಡಿ ಮೂಲಕ ಜನರಿಗೆ ಬುದ್ಧಿವಾದ ಹೇಳುವುದು ಎಂದೂ ದೇವ್ ಅವರೇ ಹೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.