ADVERTISEMENT

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಪ್ರೇಮಕುಮಾರ್ ಹರಿಯಬ್ಬೆ
Published 21 ನವೆಂಬರ್ 2023, 0:45 IST
Last Updated 21 ನವೆಂಬರ್ 2023, 0:45 IST
   

ಪಣಜಿ: ಐವತ್ತನಾಲ್ಕನೆಯ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸೋಮವಾರ ಸಂಜೆ ವಿಧ್ಯುಕ್ತ ಚಾಲನೆ ಸಿಕ್ಕಿತು. ಗೋವಾ ವಿಶ್ವ ವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕೇಂದ್ರ ವಾರ್ತಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಸಾಂಪ್ರದಾಯಕ ದೀಪ ಬೆಳಗಿಸಿ ಚಿತ್ರೋತ್ಸವವನ್ನು ಉದ್ಘಾಟಿಸಿದರು.

ನಟಿಯರಾದ ಮಾಧುರಿ ದೀಕ್ಷಿತ್‌, ಖುಷ್ಬೂ ಸುಂದರ್‌, ಕೇಂದ್ರ ವಾರ್ತಾ ಖಾತೆ ರಾಜ್ಯ ಸಚಿವ ಎಲ್‌. ಮುರುಗನ್‌, ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯಕ್‌, ಗೋವಾ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಗೋವಾ ಎಂಟರ್‌ಟೇನ್ಮೆಂಟ್ ಸೊಸೈಟಿ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್ ಅವರು, ಭಾರತೀಯ ಸಿನಿಮಾದ ಹಲವು ಆಯಾಮಗಳನ್ನು ಸುದೀರ್ಘವಾಗಿ ಪ್ರಸ್ತಾ‍ಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವ, ಚಂದ್ರಯಾನ, ಜಿ–20 ಶೃಂಗ ಸಭೆ ಮತ್ತು ಸಿನಿಮಾದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಗಳನ್ನು ಪ್ರಸ್ತಾಪಿಸಿದರು.

ADVERTISEMENT

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಾತನಾಡಿ, ಗೋವಾದಲ್ಲಿ ಕೊಂಕಣಿ ಸಿನಿಮಾಕ್ಕೆ ಉತ್ತೇಜನ ನೀಡಲು ಫಿಲಂ ಸಿಟಿ ನಿರ್ಮಿಸಲಾಗುತ್ತದೆ ಎಂದು ಪುನರ್ ಉಚ್ಚರಿಸಿದರು. 

ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ವಿಶೇಷ ಕೊಡುಗೆ ಗಮನಿಸಿ ಈ ವರ್ಷದಿಂದ ನೀಡುವ ವಿಶೇಷ ಪ್ರಶಸ್ತಿಯನ್ನು ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರಿಗೆ ನೀಡಲಾಯಿತು. ಸಚಿವ ಠಾಕೂರ್‌ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಸಿನಿಮಾ ಕಲಾವಿದರಾದ ವಿಜಯ್‌ ಸೇತುಪತಿ, ಸನ್ನಿ ಡಿಯೋಲ್‌, ಶ್ರೇಯಾ ಘೋಶಾಲ್‌, ಶ್ರೇಯಾ ಶರಣ್‌, ಶಾಹಿದ್‌ ಕಪೂರ್‌, ಕರಣ್‌ ಜೋಹರ್‌ ಸೇರಿದಂತೆ ಭಾರತೀಯ ಮತ್ತು ಹಲವು ದೇಶಗಳ ಸಿನಿಮಾ ರಂಗದ ಕಲಾವಿದರು, ತಂತ್ರಜ್ಞರು ಮತ್ತು ಅಂತರರಾಷ್ಟ್ರೀಯ ಮತ್ತು ಪನೋರಮಾ ವಿಭಾಗದ ಜ್ಯೂರಿ ಸದಸ್ಯರು ಮತ್ತು ಸಮಾರಂಭದಲ್ಲಿ ಹಾಜರಿದ್ದರು.

‘ವಿದೇಶಿ ಸಿನಿಮಾ ನಿರ್ಮಾಪಕರಿಗೆ ಪ್ರೋತ್ಸಾಹ ಧನ’

ಭಾರತೀಯ ಕಥಾ ವಸ್ತು ಆಧರಿಸಿದ ಮತ್ತು ಭಾರತದಲ್ಲೇ ಸಂಪೂರ್ಣವಾಗಿ ಚಿತ್ರೀಕರಣ ಮಾಡುವ ವಿದೇಶಿ ಸಿನಿಮಾ ನಿರ್ಮಾಪಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರಕಟಿಸಿದರು. ಇಂಥ ವಿದೇಶಿ ಸಿನಿಮಾಗಳಿಗೆ ಶೇ 30ರಷ್ಟು ಪೋತ್ಸಾಹ ಧನ ನೀಡುವ ನಿರ್ಧಾರವನ್ನು ಈಗಾಗಲೇ ಪ್ರಕಟಿಸಲಾಗಿದೆ. ಸಹಾಯಧನದ ಮೊತ್ತವನ್ನು ಶೇ 30 ರಿಂದ ಶೇ 40ರಷ್ಟು ಹೆಚ್ಚಿಸುವ (ಒಟ್ಟು ₹30 ಕೋಟಿ ಮೀರದಂತೆ) ನಿರ್ಧರಿಸಲಾಗಿದೆ. ಈ ಮೂಲಕ ಭಾರತೀಯ ಕಥಾ ವಸ್ತುವನ್ನು ಜಗತ್ತಿಗೆ ಪರಿಚಯಿಸುವ ಮತ್ತು ಭಾರತದಲ್ಲಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟು ದೇಶದ ಸುಂದರ ತಾಣಗಳನ್ನು ಜಗತ್ತಿಗೆ ಪರಿಚಯಿಸುವುದು ಸರ್ಕಾರದ ಉದ್ದೇಶ ಎಂದು ಹೇಳಿದರು. ಸಿನಿಮಾಗಳ ಪೈರಸಿ ತಡೆಯಲು ವಿಶೇಷ ಕಾನೂನು ರಚಿಸುವ ಪ್ರಕ್ರಿಯೆಗೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಸಿಕ್ಕಿದೆ. ಸದ್ಯದಲ್ಲೇ ಕಾನೂನು ಹೊರಬೀಳಲಿದೆ ಎಂದ  ಅವರು ಪೈರಸಿ ಮಾಡಿದವರಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.