ADVERTISEMENT

ಸಿದ್ದಾರ್ಥ್​ಗೆ ದೇವರು ಒಳ್ಳೆಯದು ಮಾಡಲಿ; ನಟನ ಕ್ಷಮೆ ಬಳಿಕ ಸೈನಾ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 8:34 IST
Last Updated 12 ಜನವರಿ 2022, 8:34 IST
ಸೈನಾ.ಸಿದ್ದಾರ್ಥ್‌
ಸೈನಾ.ಸಿದ್ದಾರ್ಥ್‌   

ಬ್ಯಾಡ್ಮಿಂಟನ್​​ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ನಟ ಸಿದ್ದಾರ್ಥ್‌​ ಅವರ ಟ್ವೀಟ್​ ವಿವಾದ ಅಂತ್ಯವಾದಂತಾಗಿದ್ದು ಸಿದ್ದಾರ್ಥ್​ ಕ್ಷಮಾಪಣೆಯನ್ನು ಸ್ವೀಕರಿಸಿರುವ ಸೈನಾ ‘ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸೈನಾ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ತಾವು ಮಾಡಿದ್ದ ‘ಅಸಭ್ಯ ಹಾಸ್ಯ’ದ ಟ್ವೀಟ್‌ಗಾಗಿ ಸಿದ್ಧಾರ್ಥ್ ಬುಧವಾರ ಕ್ಷಮೆಯಾಚಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಸೈನಾ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು ‘ವಿವಾದಿತ ಟ್ವೀಟ್‌ ಮಾಡಿ, ಈಗ ಕ್ಷಮೆ ಕೇಳಿದ್ದಾರೆ. ಈ ಬೆಳವಣಿಗೆಗಳು ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿರುವುದು ನೋಡಿ ನನಗೆ ಅಚ್ಚರಿ ಆಗಿತ್ತು. ನಾನು ಕಾಮೆಂಟ್‌ ಹಾಕಿ ಸುಮ್ಮನಾದೆ, ಇಲ್ಲಿಯವರೆಗೂ ಅವರ ಬಳಿ ಮಾತನಾಡಿಲ್ಲ’ ಎಂದರು.

ADVERTISEMENT

’ಇದು ಮಹಿಳೆಯರ ಘನತೆಗೆ ಸಂಬಂಧಿಸಿದ ವಿಚಾರ. ಅವರು ಮಹಿಳೆಯರ ಬಗ್ಗೆ ಈ ರೀತಿ ಮಾಡಬಾರದು. ಇದರಿಂದ ವಿಚಲಿತಳಾಗದೇ ನಾನು ಖುಷಿಯಾಗಿದ್ದೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎನ್ನುವ ಮೂಲಕಒಟ್ಟಾರೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ಧಾರ್ಥ್‌ ಕ್ಷಮೆ...

‘ಡಿಯರ್ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ನಾನು ಮಾಡಿದ ಅಸಭ್ಯ ಹಾಸ್ಯಕ್ಕಾಗಿ ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ನಿಮ್ಮ ಟ್ವೀಟ್‌ಗೆ ನಾನು ಪ್ರತಿಕ್ರಿಯಿಸಿದ ರೀತಿ ಸಮರ್ಥನೀಯವಲ್ಲ’ ಎಂದು ಕ್ಷಮಾಪಣೆ ಪತ್ರದಲ್ಲಿ ಹೇಳಿದ್ದಾರೆ.

‘ನನ್ನ ಟ್ವೀಟ್‌ನ ಉದ್ದೇಶ ಹಾಸ್ಯವಾಗಿತ್ತೇ ಹೊರತು ಅನೇಕರು ಆರೋಪಿಸುತ್ತಿರುವ ರೀತಿಯಲ್ಲಿ ಯಾವುದೇ ದುರುದ್ದೇಶಪೂರಿತ ಉದ್ದೇಶವಿರಲಿಲ್ಲ. ನಾನು ಕಟ್ಟಾ ಸ್ತ್ರೀವಾದಿ ಮಿತ್ರ ಮತ್ತು ನನ್ನ ಟ್ವೀಟ್‌ನಲ್ಲಿ ಯಾವುದೇ ಲಿಂಗವನ್ನು ಉದ್ದೇಶಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಒಬ್ಬ ಮಹಿಳೆ ಎಂದು ನಿಮ್ಮ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ. ನೀವು ನನ್ನ ಪತ್ರವನ್ನು ಸ್ವೀಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ, ಪ್ರಾಮಾಣಿಕವಾಗಿ, ಸಿದ್ಧಾರ್ಥ್’ಎಂದು ಪತ್ರದಲ್ಲಿ ಕ್ಷಮೆಯಾಚಿಸಿದ್ದರು.

ಘಟನೆ ಹಿನ್ನೆಲೆ

ಜನವರಿ 5ರಂದು ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ವೇಳೆ ಸಂಭವಿಸಿದ ಭದ್ರತಾ ಲೋಪದ ಬಗ್ಗೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. 'ಯಾವುದೇ ರಾಷ್ಟ್ರವು ತನ್ನ ಪ್ರಧಾನಿಯ ಭದ್ರತೆಗೆ ಧಕ್ಕೆಯಾದರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಪ್ರಬಲವಾದ ಪದಗಳಲ್ಲಿ, ಅರಾಜಕತಾವಾದಿಗಳ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ಧಾರ್ಥ್ ಅಸಭ್ಯ ಹಾಸ್ಯದ ಟ್ವೀಟ್ ಮಾಡಿದ್ದರು.

COCK & BULL"

That's the reference. Reading otherwise is unfair and leading!

Nothing disrespectful was intended, said or insinuated. Period. 🙏🏽

— Siddharth (@Actor_Siddharth)January 10, 2022

ಸಿದ್ಧಾರ್ಥ್‌ ಟ್ವೀಟ್‌ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ವಿವಾದದಲ್ಲಿ ಮಧ್ಯ ಪ್ರವೇಶ ಮಾಡಿತ್ತು. ನಂತರ ಸಿದ್ದಾರ್ಥ್​ ಕ್ಷಮೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೈನಾ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದರು. ಈ ಬೆಳವಣಿಗೆಗಳಿಂದ ವಿವಾದ ಅಂತ್ಯವಾದಂತಾಗಿದೆ.

ಇವನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.