ಹುಬ್ಬಳ್ಳಿ: ‘ಏಕ್ ಲವ್ ಯಾ ಚಲನಚಿತ್ರಕ್ಕೆ ರಾಜ್ಯದಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸಹೋದರ, ನಾಯಕ ನಟ ರಾಣಾ ಮತ್ತು ನಾಯಕಿ ರೀಷ್ಮಾ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ನಟಿ ಹಾಗೂ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ಹೇಳಿದರು.
‘ದಕ್ಷಿಣ ಹಾಗೂ ಉತ್ತರ ಕರ್ನಾಟಕದಾದ್ಯಂತ ಚಿತ್ರತಂಡದೊಂದಿಗೆ ಸಿನಿಮಾ ಮಂದಿರಗಳಿಗೆ ಭೇಟಿ ನೀಡಲಾಗುತ್ತಿದೆ. ಹಲವೆಡೆ ಚಿತ್ರಮಂದಿರ ಭರ್ತಿಯಾಗಿರುವುದನ್ನು ನೋಡಿ ಸಾರ್ಥಕವೆನಿಸಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೈರಸಿ ಕಾಟ: ‘ನಮ್ಮ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪೈರಸಿ ಕಾಡುತ್ತಿದೆ. ಅದನ್ನು ತಡೆಯುವುದಕ್ಕಾಗಿ ನಾವು ಏಜೆನ್ಸಿ ನೇಮಿ
ಸಿಕೊಂಡಿದ್ದೇವೆ. ಟೆಲಿಗ್ರಾಂ ಆ್ಯಪ್‌ನಲ್ಲಿ ಇದುವರೆಗೆ ಸಿನಿಮಾದ 811 ಲಿಂಕ್‌ಗಳನ್ನು, ಯೂ ಟ್ಯೂಬ್‌ನಲ್ಲಿದ್ದ 235 ಸಿನಿಮಾ ತುಣುಕುಗಳನ್ನು ತೆಗೆಸಿದ್ದೇವೆ. ಈ ಕುರಿತು ಸೈಬರ್ ಠಾಣೆ ಪೊಲೀಸರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೂಡ ಕೊಟ್ಟಿದ್ದೇವೆ’ ಎಂದರು.
ನಿರ್ದೇಶಕ ಪ್ರೇಮ್ ಮಾತನಾಡಿ, ‘ಹುಬ್ಬಳ್ಳಿ ಎಂದರೆ ಕನ್ನಡಾಭಿಮಾನ. ಇಲ್ಲಿನ ಜನರ ಸಿನಿಮಾ ಪ್ರೀತಿ ಅಪಾರ. ಚಿತ್ರರಂಗವನ್ನು ಹಾಗೂ ಕಲಾವಿದರನ್ನು ಪೋಷಿಸುವ ಪ್ರೇಕ್ಷಕರು ಇಲ್ಲಿದ್ದಾರೆ’ ಎಂದು ತಿಳಿಸಿದರು.
‘ಈಗ ಸಿನಿಮಾಗಳ ಕಾಲ ಏನಿದ್ದರೂ ಕೇವಲ ಎರಡೇ ವಾರ.ಅಷ್ಟರೊಳಗೆ ಸಿನಿಮಾಗೆ ಹಾಕಿದ ಬಂಡವಾಳ ವಾಪಸ್ ಬರಬೇಕಿದೆ. ಐವತ್ತು, ನೂರು ದಿನಗಳು ಓಡುವ ಕಾಲ ಮುಗಿಯಿತು’ ಎಂದು ಹೇಳಿದರು.
‘ಚಿತ್ರರಂಗದಲ್ಲಿಲ್ಲ ನಾಯಕತ್ವ’
‘ಕನ್ನಡ ಚಿತ್ರರಂಗಕ್ಕೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಸಿನಿಮಾ ಎಂದರೆ ಈಗ ಉದ್ಯಮ ಅಷ್ಟೇ. ಡಾ. ರಾಜಕುಮಾರ್ ಅವರ ಕಾಲದಲ್ಲಿ ಸಿನಿಮಾದಲ್ಲಿ ಉದ್ಯಮಕ್ಕಿಂತ ಕನ್ನಡತನವೇ ಎದ್ದು ಕಾಣುತ್ತಿತ್ತು. ಈಗ ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಉದ್ಯಮದ ಹಿತಾಸಕ್ತಿಗಳು ಇರುವುದರಿಂದ ಒಗ್ಗೂಡುವುದು ಅಸಾಧ್ಯವಾಗಿದೆ. ಅಲ್ಲದೆ, ನಮ್ಮಲ್ಲೇ ಪರಸ್ಪರ ಕಾಲೆಳೆಯುವವರು ಹಾಗೂ ನಟರ ಮಧ್ಯೆ ಜಗಳ ತಂದಿಡುವವರಿದ್ದಾರೆ’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರೇಮ್ ಪ್ರತಿಕ್ರಿಯಿಸಿದರು.
‘ಹಿಂದೆ ಕನ್ನಡ ಸಿನಿಮಾ ತೆರೆ ಕಂಡಾಗ, ಎರಡು ವಾರಗಳ ಬಳಿಕ ಚಿತ್ರಮಂದಿರದಲ್ಲಿ ಬೇರೆ ಭಾಷೆಯ ಚಿತ್ರಗಳು ತೆರೆ ಕಾಣುತ್ತಿರಲಿಲ್ಲ. ಈಗ ಎಲ್ಲವೂ ಬದಲಾಗಿದೆ. ಒಂದೆರಡು ಪ್ರದರ್ಶನ ಸಿಕ್ಕರೆ ಹೆಚ್ಚು. ಅದಕ್ಕೂ ಇತರ ಭಾಷೆಗಳೊಂದಿಗೆ ಸ್ಪರ್ಧಿಸಬೇಕಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.