ADVERTISEMENT

ದಿ ಸಾಬರಮತಿ ರಿಪೋರ್ಟ್‌ ಚಿತ್ರ ಬಿಡುಗಡೆ | ಸತ್ಯ ಹೊರಬರುವುದು ಒಳ್ಳೆಯದು: PM ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2024, 11:24 IST
Last Updated 17 ನವೆಂಬರ್ 2024, 11:24 IST
<div class="paragraphs"><p>ದಿ ಸಾಬರಮತಿ ರಿಪೋರ್ಟ್‌ ಚಿತ್ರದ ಪೋಸ್ಟರ್‌</p></div>

ದಿ ಸಾಬರಮತಿ ರಿಪೋರ್ಟ್‌ ಚಿತ್ರದ ಪೋಸ್ಟರ್‌

   

ನವದೆಹಲಿ: ನೈಜ ಘಟನೆ ಆಧಾರಿತ ‘ದಿ ಸಾಬರಮತಿ ರಿಪೋರ್ಟ್‌’ ಹಿಂದಿ ಸಿನಿಮಾ ಚಿತ್ರಮಂದಿರಗಳಲ್ಲಿ ನ.15 ರಂದು ಬಿಡುಗಡೆಗೊಂಡಿದೆ. 

2002ರಲ್ಲಿ ನಡೆದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿ ಬೋಗಿಗೆ ಗೋಧ್ರಾದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆಯ ಕಥಾಹಂದರದ ಚಿತ್ರ ಇದಾಗಿದ್ದು, ವಿಕ್ರಾಂತ್‌ ಮಾಸ್ಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಘಟನೆ ‘ಗೋಧ್ರಾ ರೈಲು ಹತ್ಯಾಕಾಂಡ’ ಎಂದೇ ಹೆಸರು ಪಡೆದಿದೆ.

ADVERTISEMENT

ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಲೋಕ್‌ ಭಟ್‌ ಎನ್ನುವವರ ಪೋಸ್ಟ್‌ ಹಂಚಿಕೊಂಡು ‘ಸತ್ಯ ಹೊರಬರುವುದು ಒಳ್ಳೆಯದು, ಅದರಲ್ಲೂ, ಜನಸಾಮಾನ್ಯರೂ ಅದನ್ನು ನೋಡಲು ಸಾಧ್ಯವಾಗುತ್ತಿರುವುದು ಇನ್ನೂ ಒಳ್ಳೆಯದು. ಸುಳ್ಳು ಕತೆಗಳಿಗೆ ಆಯಸ್ಸು ಕಡಿಮೆ. ಕ್ರಮೇಣವಾಗಿ ಸತ್ಯ ಹೊರಬರಲೇಬೇಕು’ ಎಂದು ಬರೆದುಕೊಂಡಿದ್ದಾರೆ.

ಅಲೋಕ್‌ ಭಟ್‌ ಅವರ ಪೋಸ್ಟ್‌ನಲ್ಲಿ ಏನಿದೆ?

‘ದಿ ಸಾಬರಮತಿ ರಿಪೋರ್ಟ್‌’ ನೋಡಲೇಬೇಕಾದ ಸಿನಿಮಾವಾಗಿದೆ ಎಂದಿರುವ ಅಲೋಕ್‌ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

‘ನಮ್ಮ ಇತಿಹಾಸದಲ್ಲಿ ನಡೆದ ಒಂದು ಅವಮಾನವೀಯ ಘಟನೆಯ ನಿಜಾಂಶವನ್ನು ಸಿನಿಮಾ ಮೂಲಕ ಹೊರತರುವ ಯತ್ನ ನಿಜಕ್ಕೂ ಶ್ಲಾಘನೀಯ. ಸಿನಿಮಾ ನಿರ್ಮಾಪಕರು ತುಂಬಾ ಸೂಕ್ಷ್ಮವಾಗಿ ಮತ್ತು ಘನತೆಯಿಂದ ಚಿತ್ರವನ್ನು ನಿರ್ಮಿಸಿದ್ದಾರೆ.

ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದ ಅಗ್ನಿ ಅವಘಡದ ಘಟನೆಯು ಪಟ್ಟಭದ್ರ ಹಿತಾಸಕ್ತಿಗಳ ಗುಂಪಿನಿಂದ ಹೇಗೆ ರಾಜಕೀಯ ಬಣ್ಣವನ್ನು ಪಡೆಯಿತು, ಒಬ್ಬ ನಾಯಕನನ್ನು ಕಳಂಕಿತನನ್ನಾಗಿಸಿತು ಮತ್ತು ತಮ್ಮದೇ ಆದ ಕಾರ್ಯಸೂಚಿಗಳನ್ನು ತೃಪ್ತಿಪಡಿಸಿಕೊಳ್ಳಲು  ಒಂದಾದ ಮೇಲೊಂದು ಹೆಣೆದ ಸುಳ್ಳುಗಳು ಹೇಗಿದ್ದವು ಎನ್ನುವುದನ್ನು ವೀಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಲ್ಲದೆ ಬಹುಮುಖ್ಯವಾಗಿ, 59 ಮಂದಿ ಅಮಾಯಕ ಬಲಿಪಶುಗಳ ಪರವಾಗಿ ಚಿತ್ರ ಮಾತನಾಡುತ್ತದೆ. ಕೊನೆಯಲ್ಲಿ ಸತ್ಯ ಮಾತ್ರ ಗೆಲ್ಲುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಎರಡೇ ದಿನದಲ್ಲಿ ₹1.69 ಕೋಟಿ ಗಳಿಕೆ ಮಾಡಿದೆ.

ಚಿತ್ರವನ್ನು ಧೀರಜ್‌ ಸರ್ನಾ ನಿರ್ದೇಶಿಸಿದ್ದು, ರಾಶಿ ಖನ್ನಾ, ರಿಧಿ ಡೋಗ್ರಾ ಸೇರಿ ಇನ್ನಿತರ ಕಲಾವಿದರು ಕಾಣಿಸಿಕೊಂಡಿದ್ದಾರೆ.

ಗೋಧ್ರಾ ಹತ್ಯಾಕಾಂಡ

ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ, ಕರಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಗುಜರಾತ್‌ನ ಗೋಧ್ರಾದಲ್ಲಿ 2002ರ ಫೆಬ್ರುವರಿ 27ರಂದು ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 59 ಕರಸೇವಕರು ಮೃತಪಟ್ಟಿದ್ದರು. ಗೋಧ್ರಾದ ಈ ಘಟನೆಯು ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಯಿತಲ್ಲದೇ, 1,200 ಕ್ಕೂ ಹೆಚ್ಚು ಜನ ಕೊಲ್ಲಲ್ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.