ADVERTISEMENT

‘ಗೌಡ್ರು ಸೈಕಲ್‌’ ಸೌಂಡು ಡೌಟು, ಸಣ್ಣ ಬೆಲ್ಲಂತೂ ಖಚಿತ

ಕೆ.ಎಂ.ಸಂತೋಷ್‌ ಕುಮಾರ್‌
Published 5 ಏಪ್ರಿಲ್ 2019, 18:58 IST
Last Updated 5 ಏಪ್ರಿಲ್ 2019, 18:58 IST
‘ಗೌಡ್ರು ಸೈಕಲ್’ ಚಿತ್ರದ ದೃಶ್ಯ
‘ಗೌಡ್ರು ಸೈಕಲ್’ ಚಿತ್ರದ ದೃಶ್ಯ   

ಸಿನಿಮಾ: ಗೌಡ್ರು ಸೈಕಲ್‌
ತಾರಾಗಣ: ಶಶಿಕಾಂತ್‌, ಬಿಂಬಶ್ರೀ, ಕೃಷ್ಣಮೂರ್ತಿ ಕವತ್ತಾರ್‌, ಆರ್ಯ, ಎನ್‌.ಟಿ.ಆರ್.ಗೌಡ, ಶಶಿಕಲಾ
ನಿರ್ದೇಶನ: ಪ್ರಶಾಂತ ಕೆ.ಎಳ್ಳಂಪಳ್ಳಿ
ನಿರ್ಮಾಣ: ಸವಿತಾ ರಾಜೇಶ್‌ ಚೌಟ

**

‘ಗೌಡ್ರು ಸೈಕಲ್‌’ ಹಿಂದೆ ಕುತೂಹಲದ ಕಥೆಯೊಂದು ಇಲ್ಲದಿದ್ದರೆ ಇದು ಕೂಡ ಹತ್ತರೊಳಗೆ ಮತ್ತೊಂದು ಸಿನಿಮಾ ಆಗಿಬಿಡುತ್ತಿತ್ತು. ಇದು ವಿಭಿನ್ನ ಸಿನಿಮಾವೆಂದು ಹೇಳಲು ಹೊರಟ ನಿರ್ದೇಶಕಪ್ರಶಾಂತ ಕೆ. ಎಳ್ಳಂಪಳ್ಳಿ 2 ಗಂಟೆ 20 ನಿಮಿಷಗಳ ಕಾಲ ತೆರೆಯ ಮೇಲೆ ‘ಸೈಕಲ್‌ ಸವಾರಿ’ ಮಾಡಿಸಿದ್ದಾರೆ. ಇದು ನಿರ್ದೇಶಕನಾಗಿ ಅವರ ಮೊದಲ ಸವಾರಿ. ಸಹಜವಾಗಿ ಮೊದಲ ಬಾರಿಗೆ ಸೈಕಲ್‌ ಕಲಿಯುವ ಹುಡುಗರಂತೆ ನಿರ್ದೇಶಕ ಪ್ರಶಾಂತ್‌ ಕೂಡ, ಅಲ್ಲಲ್ಲಿ ಪೆಡಲ್‌ ತುಳಿಯುವುದು, ಅಡ್ಡ ಬೀಳುವುದು ಮಾಡಿದ್ದಾರೆ.

ADVERTISEMENT

ಈ ಚಿತ್ರದಲ್ಲಿ ಸೈಕಲ್‌ಗಾಗಿ ಗೌಡ್ರು ಏನುಬೇಕಾದರೂ ಬಿಡುತ್ತಾರೆ. ಅಂದರೆ, ಪೂರ್ವಿಕರಿಂದ ಬಳುವಳಿಯಾಗಿ ಬಂದ ಸೈಕಲ್‌ಗಾಗಿ ತಮ್ಮ, ತಂಗಿ, ಭಾವ ಹೀಗೆ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತಾರೆ. ‘ಗೌಡ್ರು ಸೈಕಲ್‌’ ಪೂರ್ವಾಪರವೇನು, ಆ ಸೈಕಲ್‌ ₹50 ಲಕ್ಷ ಬಹುಮಾನ ಹೇಗೆ ಗೆಲ್ಲುತ್ತದೆ, ಬಿರಿದ ಸಂಬಂಧಗಳನ್ನು ಹೇಗೆ ಬೆಸೆಯುತ್ತದೆ ಎನ್ನುವುದೇ ಕಥೆಯ ತಿರುಳು.

ಆರಂಭದಲ್ಲಿ ಲಂಗು ಲಗಾಮು ಇಲ್ಲದಂತೆ ಅಡ್ಡಾದಿಡ್ಡಿ ಹೋಗುವ ‘ಗೌಡ್ರು ಸೈಕಲ್‌‘ ಕ್ರಮೇಣಟ್ರ್ಯಾಕಿಗೆ ಬರುತ್ತದೆ. ‌ವಿಶೇಷ ಸೈಕಲ್‌ನ ಕಥೆ ಹೇಳಲು ನಿರ್ದೇಶಕರು ನಿರೂಪ‍ಣೆಯನ್ನು ಹಗ್ಗ ಜಗ್ಗಿದಂತೆ ಜಗ್ಗಿದ್ದಾರೆ. ಸಿದ್ಧಸೂತ್ರವಿಟ್ಟುಕೊಂಡು ಸಿನಿಮಾ ಕ್ಲೈಮ್ಯಾಕ್ಸ್ ಮಾಡಿದ್ದಾರೆ. ಕೆಲವು (ಅಪ)ಹಾಸ್ಯ ಸನ್ನಿವೇಶಗಳನ್ನು, ದ್ವಂದ್ವಾರ್ಥಗಳ ಸಂಭಾಷಣೆಯನ್ನು ಅನಗತ್ಯ ಮತ್ತು ಬಲವಂತದಿಂದ ತುರುಕಿದ್ದಾರೆ.

ಸರಿಯಾದ ಎಡಿಟಿಂಗ್‌ (ಸಂಕಲನ) ಆಗದೆ, ಕೆಲವೊಂದು ಕಡೆ ಆಭಾಸ ಉಳಿದಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತೆ ‘ಗೌಡ್ರು ಸೈಕಲ್‌’ ಅನ್ನು ಸದಭಿರುಚಿಯ ಮತ್ತು ‘ಆ್ಯಂಟಿಕ್‌ ಪೀಸ್‌‘ ಮಾಡಬಹುದಾಗಿದ್ದ ಸದಾವಕಾಶವನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ.

ನಟನೆಯಲ್ಲಿ ನಾಯಕ ಕೃಷ್ಣ (ಶಶಿಕಾಂತ್‌) ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಸಹಜ ನಟನೆ, ಡಾನ್ಸು, ಪಂಚಿಂಗ್‌ ಡೈಲಾಗ್‌ಗಳಿಂದ ಶಶಿಕಾಂತ್‌ ಚಿತ್ರರಂಗಕ್ಕೆ ಹೊಸಬ ಎನಿಸುವುದೇ ಇಲ್ಲ.ನಾಯಕಿ ರಜತಾ (ಬಿಂಬಶ್ರೀ ನೀನಾಸಂ) ಸಿಕ್ಕಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಪಾತ್ರದಲ್ಲಿ ಗೈಯಾಳಿ ಹುಡುಗಿಯಂತೆ ಪರಿಚಯವಾಗುವ ಬಿಂಬಶ್ರೀಯ ಪ್ರತಿಭೆಯು ಲವ್‌ ಮತ್ತು ಸೆಂಟಿಮೆಂಟ್‌ ದೃಶ್ಯಗಳಲ್ಲಿ ಪ್ರತಿಬಿಂಬಿತವಾಗಿದೆ. ಕೃಷ್ಣಮೂರ್ತಿ ಕವತ್ತಾರ್‌ ‘ಗೌಡ್ರು’ ಪಾತ್ರದ ಪರಕಾಯ ಪ್ರವೇಶಿಸಿದಂತೆ ಅಭಿನಯಿಸಿದ್ದಾರೆ.ವಿಲನ್‌ ಪಾತ್ರದಲ್ಲಿರುವ (ಗೂಳಿ) ಆರ್ಯ ಮೈಕಟ್ಟು ಮತ್ತು ಅಭಿನಯ ಗಮನ ಸೆಳೆಯುತ್ತದೆ.

ಅಂಬರೀಷ್‌ ಹುಟ್ಟೂರು (ದೊಡ್ಡರಿಸನಕೆರೆ) ಪರಿಸರ, ರವಿಕಿಶೋರ್‌ ಮತ್ತು ಪೂರ್ಣಚಂದ್ರ ಬೈಕಂಪಾಡಿ ಅವರ ಕ್ಯಾಮೆರಾ ಕೈಚಳಕದಲ್ಲಿ ನೈಜವಾಗಿ ಸೆರೆ ಸಿಕ್ಕಿದೆ. ಸಾಯಿಸರ್ವೇಶ್‌ ಸಂಗೀತ ನಿರ್ದೇಶನದ ನಾಲ್ಕು ಹಾಡುಗಳ ಪೈಕಿ ‘ಮೊದಲ್‌ ಮೊದಲ್‌ ಪ್ರೀತಿ...’ ಹಾಡು ಮಾತ್ರ ಕಿವಿಗೆ ಹಿತವಾಗುತ್ತದೆ.

ದೊಡ್ಡ ಬಜೆಟ್‌ಗಳ ಚಿತ್ರಗಳಂತೆ ‘ಗೌಡ್ರು ಸೈಕಲ್‌‘ ಗಾಂಧಿ ನಗರದಲ್ಲಿ ಸೌಂಡು ಮಾಡುವುದು ಡೌಟು, ಸಣ್ಣಗೆ ಬೆಲ್‌ ಮಾಡುವುದು ಮಾತ್ರ ನಿಸ್ಸಂಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.