ADVERTISEMENT

ಗೌಳಿ ಚಿತ್ರದ ವಿಮರ್ಶೆ: ಗೌಳಿಯ ಹಾಲಿಗೆ ವ್ಯವಸ್ಥೆಯ ‘ಹುಳಿ’

ಶರತ್‌ ಹೆಗ್ಡೆ
Published 24 ಫೆಬ್ರುವರಿ 2023, 11:31 IST
Last Updated 24 ಫೆಬ್ರುವರಿ 2023, 11:31 IST
ಶ್ರೀನಗರ ಕಿಟ್ಟಿ
ಶ್ರೀನಗರ ಕಿಟ್ಟಿ   

ಚಿತ್ರ: ಗೌಳಿ
ನಿರ್ದೇಶನ: ಸೂರ
ತಾರಾಗಣ: ಶ್ರೀನಗರ ಕಿಟ್ಟಿ, ಪಾವನಾಗೌಡ, ಶರತ್‌ ಲೋಹಿತಾಶ್ವ, ರಂಗಾಯಣ ರಘು
ಸಂಗೀತ: ಶಶಾಂಕ್‌ ಶೇಷಗಿರಿ
ನಿರ್ಮಾಣ: ರಘು ಸಿಂಗಂ

ಅಧಿಕಾರದ ಕುರ್ಚಿಗೆ ಬಂದವರು ಅಲ್ಲಿ ಕುಳಿತ ಮೇಲೆ ಆಡಿದ್ದೇ ಆಟ... ನಾವು ಏನು ಬೇಕಾದರೂ ಮಾಡಬಲ್ಲೆವು ಎಂದು ನೇರವಾಗಿ ಹೇಳುತ್ತಲೇ ವ್ಯವಸ್ಥೆಯೊಳಗಿನ ಕ್ರೌರ್ಯವನ್ನು ಸಂಕೇತಿಸುವ ಪೊಲೀಸ್‌ (ಶರತ್‌ ಲೋಹಿತಾಶ್ವ), ಮುಗ್ಧನೊಬ್ಬನ ಬದುಕು ಹೊಸಕಿ ಹಾಕುವಲ್ಲೇ ಎಲ್ಲರ ಗಮನ. ಆ ಮುಗ್ಧನದ್ದೋ ಹಿಂಸೆಯತ್ತ ಅನಿವಾರ್ಯ ಪಯಣ.

ಇದು ‘ಗೌಳಿ’ಯ ಹಾದಿ. ಮೊದಲಾರ್ಧ ಸಾಂಸಾರಿಕ ಕಥೆಯಂತೆ ಸುಂದರವಾಗಿ ತೆರೆದುಕೊಂಡು ನಿಧಾನಗತಿಯಲ್ಲಿ ಸಾಗುತ್ತದೆ. ಗಂಡ ಹೆಂಡಿರ ಪ್ರೀತಿ, ತಂದೆ–ಮಗಳ ವಾತ್ಸಲ್ಯ, ಚಿಕ್ಕಪ್ಪನ ಕಕ್ಕುಲತೆ ಎಲ್ಲವೂ ಹದವಾಗಿ ಬೆರೆತಿದೆ. ಆ ಹಳ್ಳಿಯಲ್ಲಿ ಯುವತಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಾಯಕನ ಸಂಸಾರಕ್ಕೆ ಸುತ್ತಿಕೊಳ್ಳುವುದರಿಂದ ಚಿತ್ರದ ಕಥೆ ತಿರುವು ಪಡೆಯುತ್ತದೆ. ನಾಯಕನ ಸುಂದರ ಪತ್ನಿಯ ಮೇಲೆ ಪೊಲೀಸನ ಕಣ್ಣು ಇದಕ್ಕೆ ಕಾರಣ... ಚಿತ್ರದ ಎರಡನೇ ಭಾಗದಲ್ಲಿ ಸಾಹಸ, ರೌದ್ರತೆಯ ಹೆಸರಿನಲ್ಲಿ ಹೊಡೆದಾಟಗಳೇ ಮೆರೆಯುತ್ತವೆ. ಕೊನೆಗೂ ಸಂಸಾರದ ಸ್ತಂಭವನ್ನೇ ಕಳೆದುಕೊಳ್ಳುವ ನಾಯಕ ವ್ಯವಸ್ಥೆಯ ಕ್ರೌರ್ಯಕ್ಕೆ ತಣ್ಣಗಾಗಲೇಬೇಕಾಗುತ್ತದೆ.

ADVERTISEMENT

ಕಥೆ ಒಂದೆರಡು ದಶಕ ಹಿಂದಿನದ್ದು ಎಂದು ಬಿಂಬಿಸಲಾಗಿದೆಯಾದರೂ ಇಂದಿಗೂ ಅಂದಿಗೂ ವಾಸ್ತವದಲ್ಲಿ ದೊಡ್ಡ ಬದಲಾವಣೇಯೇನೂ ಆಗಿಲ್ಲ. ಹಾಗಾಗಿ ಚಿತ್ರ, ಹಿಂಸೆಯನ್ನು ಹೆಚ್ಚು ವೈಭವೀಕರಿಸಿದೆ ಅನ್ನಿಸುವುದಾದರೂ ಅದು ವಾಸ್ತವಕ್ಕೆ ಹತ್ತಿರವಾಗಿದೆ ಎನ್ನುವುದನ್ನೂ ಗಮನಿಸಬೇಕು.

ಇಡೀ ವ್ಯವಸ್ಥೆಯ ವಿಕಾರತೆ, ವಿಕೃತಿ, ಕ್ರೌರ್ಯವನ್ನು ಸಮಗ್ರವಾಗಿ ಸಂಕೇತಿಸಿದ್ದಾರೆ ಖಳಪಾತ್ರಧಾರಿ ಶರತ್‌ ಲೋಹಿತಾಶ್ವ. ಇವರ ಪಾತ್ರದ ತೂಕವೇ ಬೇರೆ. ನಾಯಕನ ಚಿಕ್ಕಪ್ಪನ ಪಾತ್ರದಲ್ಲಿ ರಂಗಾಯಣ ರಘು ಒಮ್ಮೆ ಮನ ಕಲುಕಿಬಿಡುತ್ತಾರೆ. ನಾಯಕ ಶ್ರೀನಗರ ಕಿಟ್ಟಿ, ನಾಯಕಿ ಪಾವನಾಗೌಡ, ಕಾಕ್ರೋಚ್‌ ಸುಧಿ, ರುದ್ರೇಶ್‌ ಶಿವಣ್ಣ, ಯಶ್‌ ಶೆಟ್ಟಿ, ಬಾಲನಟಿ ನಮನ ನವೀನ್‌ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಅಭಿನಯ ನೀಡಿದ್ದಾರೆ. ಹಾಗಾಗಿ ಎಲ್ಲರ ನಟನೆಗೆ ಪೂರ್ಣ ಅಂಕ.

ಸಂಗೀತ ಮೊದಲಾರ್ಧದಲ್ಲಿ ಚೆನ್ನಾಗಿದೆ. ದ್ವಿತೀಯಾರ್ಧದಲ್ಲಿ ಸಾಹಸ ದೃಶ್ಯಗಳಿಗೆಂದು ಹಿನ್ನೆಲೆ ಧ್ವನಿ ಸಂಯೋಜಿಸಲಾಗಿದೆಯಾದರೂ ಅತಿಯೆನಿಸುವಷ್ಟಿದೆ. ಎರಡು ಹಾಡುಗಳು ತುಂಬಾ ಚೆನ್ನಾಗಿವೆ. ಛಾಯಾಗ್ರಹಣ ಪರವಾಗಿಲ್ಲ. ದೃಶ್ಯಗಳು ಮಲೆನಾಡಿನ ಸನ್ನಿವೇಶಗಳನ್ನು ತೋರಿಸಿವೆ. ಭಾಷೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಸೊಗಡಿನಲ್ಲಿದೆ. ಅತಿಯಾದ ಹೊಡೆದಾಟಗಳು ಮತ್ತು ಕೆಲವು ಅತಿಭಾವುಕ, ಗೋಳಾಟದ ಸನ್ನಿವೇಶಗಳಿಗೆ ಕತ್ತರಿ ಹಾಕಬಹುದಿತ್ತು. ಕೊಡಲಿ ಬೀಸಿಯೇ ಕೊಲ್ಲುವ ನಾಯಕನನ್ನು ಎದುರಿಸಲು ಬಂದೂಕುಗಳಿದ್ದೂ ಮೌನವಾಗುವುದು ಸ್ವಲ್ಪ ಆಭಾಸವೆನಿಸಿದೆ.

ಗೌಳಿಗರೆಂದರೆ ಬರಿಯ ಹೈನುಗಾರರಲ್ಲ. ನೆಲದ ನಂಟು, ಜೀವಗಳೊಂದಿಗೆ ಭಾವ ಸೇತು ಅಲ್ಲಿದೆ ಎನ್ನುವುದನ್ನು ಮೊದಲಾರ್ಧದಲ್ಲಿ ಹೇಳಿದ್ದಾರೆ. ‘ಬದುಕುಳಿಯಬೇಕಾದರೆ ಗೌಳಿಯಾಗಿ ಅಲ್ಲ ಗೂಳಿಯಾಗಬೇಕಲೇ’ ಎನ್ನುವ ರಂಗಾಯಣ ರಘು ಅವರ ಮಾತು ಮುಗ್ದರೆನಿಸಿಕೊಂಡಿರುವ ಎಲ್ಲರಿಗೂ ಅನ್ವಯಿಸುತ್ತದೆ.

ಪ್ರತಿ ಫ್ರೇಮ್‌ನಲ್ಲೂ ನಿರ್ದೇಶಕರು ಮತ್ತು ಕಲಾ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಕಿಟ್ಟಿ ಅವರಿಗೆ ಈ ಚಿತ್ರ ಹೊಸ ಬ್ರೇಕ್‌ ನೀಡಬಹುದೇನೋ. ಮಸಾಲೆಗಳಿಲ್ಲದ ಸಾಹಸ ಪ್ರಧಾನ, ಹಳ್ಳಿ ಸೊಗಡಿನ ಕಥೆ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.