ADVERTISEMENT

ಗಿಟಾರ್ ನನ್ನ ಮೊದಲ ಪ್ರೇಯಸಿ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 19:30 IST
Last Updated 22 ಅಕ್ಟೋಬರ್ 2018, 19:30 IST
ಅರ್ಮಾನ್‌ ಮಲ್ಲಿಕ್‌
ಅರ್ಮಾನ್‌ ಮಲ್ಲಿಕ್‌   

ಅರ್ಮಾನ್‌ ಮಲ್ಲಿಕ್‌ ಅಂದ್ರೆ ಸಾಕು, ಒಂದು ಮಳೆಬಿಲ್ಲು ಹಾಡು ಗುನುಗಲಾರಂಭಿಸುವಷ್ಟು ಆ ಇನಿದನಿ ಕನ್ನಡಿಗರನ್ನು ಆವರಿಸಿಕೊಂಡಿದೆ. ಮಾಧುರ್ಯವೇ ಕಂಠಸಿರಿಯಿಂದ ತುಳುಕುವಂತೆ ಹಾಡುವ ಈ ಗಾಯಕ, ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಕನ್ನಡದ ಮಳೆ ಮತ್ತು ಮಲಿಕ್‌ ಮಾತಿನ ಧಾರೆ ಇಲ್ಲಿದೆ.

ಯಾವ ಗಾಯಕನ ಜೊತೆಗೂಡಿ ಹಾಡುವುದಕ್ಕೆ ಇಷ್ಟಪಡುತ್ತಿರೀ?

ನನಗಿಷ್ಟವಾಗುವ ಗಾಯಕರು ಹಲವರು ಇದ್ದಾರೆ. ಅರ್ಜಿತ್‌ ಸಿಂಗ್‌ ಅವರೊಂದಿಗೆ ಹಾಡಲು ಅವಕಾಶ ಸಿಕ್ಕರೆ ಉತ್ಸಾಹ
ದಿಂದ ಹಾಡುತ್ತೇನೆ. ಅವರ ಗಾಯನ ಗಮನ ಸೆಳೆಯುತ್ತದೆ.

ADVERTISEMENT

ನಿಮಗೆ ಈ ವರೆಗೆ ನೀಡಿರುವ ಉತ್ತಮ ಸಲಹೆ ಯಾವುದು?

ನಮ್ಮ ತಂದೆ ಒಮ್ಮೆ ಹೇಳಿದ್ದು ಇನ್ನೂ ನೆನಪಿದೆ. ‘ಅತಿ ವಿನಯ ಎಂದಿಗೂ ಒಳ್ಳೆಯದಲ್ಲ. ಅತಿಯಾದ ಆತ್ಮವಿಶ್ವಾಸವೂ ಒಳ್ಳೆಯದಲ್ಲ. ನೀನು ನೀನಾಗಿರು’ ಎಂದಿದ್ದರು. ಈ ವರೆಗೆ ನನಗೆ ನೀಡಿರುವ ಸಲಹೆಗಳ ಪೈಕಿ ಇದೇ ಉತ್ತಮ ಸಲಹೆ.

ಯಾವ ಕಾಲದ ಸಂಗೀತ ನಿಮ್ಮಲ್ಲಿ ಹೆಚ್ಚು ಪ್ರೇರಣೆ ತುಂಬಿದೆ?

ಹಲವು ವಿಧದ ಸಂಗೀತವನ್ನು ಕೇಳಿ ಬೆಳೆದಿದ್ದೇನೆ. ಹಲವರ ಗಾಯನ ಆಲಿಸಿ ಸ್ಫೂರ್ತಿ ಪಡೆದಿದ್ದೇನೆ. ನಾನು ಗಾಯನ ಆರಂಭಿಸಿ ಕೇವಲ ನಾಲ್ಕು ವರ್ಷಗಳಾಗಿವೆ. ಈಗ ನನ್ನ ವಯಸ್ಸು 23. ನಿರಂತರವಾಗಿ ಈ ಕ್ಷೇತ್ರದಲ್ಲಿ ತೊಡಗಿಸಿ
ಕೊಳ್ಳಬೇಕೆಂಬ ಬಯಕೆ ಇದೆ. ಆದರೆ, ಕೇವಲ ಸಂಗೀತದಿಂದಾಗಿ ಮಾತ್ರ ಜನ ನನ್ನನ್ನು ಗುರುತಿಸು
ವಂತಹ ಗಾಯಕನಾಗುವುದಕ್ಕೆ ನನಗೆ ಇಷ್ಟವಿಲ್ಲ.

ಸಂಗೀತ ಕ್ಷೇತ್ರದಲ್ಲೂ ಈಚೆಗೆ ಮಹತ್ತರ ಬದಲಾವಣೆಗಳು ಆಗಿವೆ. ನೀವು ಗಮನಿಸಿರುವಂತೆ ಒಳ್ಳೆಯ ಮತ್ತು ಕೆಟ್ಟ ಬದಲಾವಣೆಗಳು ಯಾವುವು?

ಯಾವುದೇ ಕ್ಷೇತ್ರವಾಗಿರಲಿ ಒಳ್ಳೆಯದು, ಕೆಟ್ಟದ್ದು ಎಂಬುದು ಇದ್ದೇ ಇರುತ್ತದೆ. ಪ್ರಸ್ತುತ ಬದಲಾವಣೆಗಳನ್ನು ಗಮನಿಸಿದಾಗ ನನಗೆ ಅನಿಸಿದ್ದು ಏನೆಂದರೆ, ಸೃಜನಾತ್ಮಕ ಸಂಗೀತ ಮೂಡಿಬರುವುದು ತೀರಾ ಕಡಿಮೆಯಾಗಿದೆ. ಯಾವುದೋ ರಾಗವನ್ನು ನಕಲು ಮಾಡಿದ್ದೊ ಅಥವಾ ಮತ್ತೆ ಸಂಯೋಜನೆ ಮಾಡಿದ್ದೊ ಮಾತ್ರ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆದರೆ ಇದರಲ್ಲೂ ಒಳ್ಳೆಯದನ್ನು ಹುಡುಕುವ ಪ್ರಯತ್ನ ಮಾಡಬೇಕು.

ನಿಮ್ಮಲ್ಲಿ ಸಂಗೀತ ಸ್ಫೂರ್ತಿ ತುಂಬಿದವರು ಯಾರು?

ಸೋನು ನಿಗಮ್. ನನ್ನ ಪ್ರಕಾರ ಹಾಡು ಆರಂಭವಾಗುವುದು ಮತ್ತು ಮುಗಿಯುವುದು ಅವರಿಂದಲೇ. ಭಾರತ ಕಂಡ ಶ್ರೇಷ್ಠ ಗಾಯಕರಲ್ಲಿ ಅವರೂ ಒಬ್ಬರು. ನಾನು ಅವರ ಗಾಯನದಿಂದ ಕಲಿತದ್ದು ತುಂಬಾ ಇದೆ.

ನಾನೂ ಮತ್ತು ಅವರು ಕನ್ನಡ ಹಾಡುಗಳನ್ನು ಹಾಡಿದ್ದೇವೆ. ಇದೊಂದೇ ನಮ್ಮಿಬ್ಬರ ನಡುವೆ ಇರುವಂತಹ ವಿಶೇಷ ಹೋಲಿಕೆ. ನನಗೆ ಈಗಲೂ ನೆನಪಿದೆ, ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿದ್ದಾಗ ರೇಡಿಯೊ ವಾಹಿನಿಯೊಂದರಲ್ಲಿ ಮುಂಗಾರು ಮಳೆ ಚಿತ್ರದ ‘ಅನಿಸುತಿದೆ ಯಾಕೊ ಇಂದು’ ಹಾಡನ್ನು ಕೇಳಿದೆ. ಹಾಡು ಕೇಳಿದ ನಂತರ, ಎಷ್ಟೊಂದು ಅದ್ಭುತವಾಗಿದೆ ಎಂದು ನಮ್ಮ ತಂದೆ ಬಳಿ ಹೇಳಿದ್ದೆ. ನನಗೆ ಖುಷಿ ನೀಡುವ ವಿಚಾರವೆಂದರೆ 10 ವರ್ಷಗಳ ನಂತರ ಮುಂಗಾರು ಮಳೆ–2 ಚಿತ್ರದ ‘ಸರಿಯಾಗಿ’ ಹಾಡನ್ನು ಹಾಡುವ ಅವಕಾಶ ಹುಡುಕಿಕೊಂಡು ಬಂತು. ಹೀಗೆ ಮನಸ್ಸಿನಗೆ ಅಮಿತಾನಂದ ನೀಡುವ ಸಣ್ಣ–ಪುಟ್ಟ ಘಟನೆಗಳು ನನ್ನ ಜೀವನದಲ್ಲಿ
ನಡೆದಿವೆ.

ಚಿತ್ರರಂಗದಲ್ಲಿ ಅವಕಾಶಗಳು ಹೇಗಿವೆ?

ಹಲವು ಚಿತ್ರರಂಗಗಳಿಂದ ಅವಕಾಶಗಳು ಬಂದಿವೆ. ಆದರೆ ಆ ಬಗ್ಗೆ ಈ ವೇದಿಕೆಯಲ್ಲಿ ಹೇಳಲಾಗದು. ನನಗಿಂತ ದುಪ್ಪಟ್ಟು ವಯಸ್ಸಿರುವ ನಟರೊಬ್ಬರಿಗೂ ನಾನು ಹಾಡಿದ್ದೇನೆ. ಹಲವು ನಗರಗಳನ್ನು ಸುತ್ತುವುದಿದೆ. ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುವುದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.