ADVERTISEMENT

ಹಫ್ತಾ ವಸೂಲಿ ಕಥೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 19:30 IST
Last Updated 13 ಡಿಸೆಂಬರ್ 2018, 19:30 IST
ಬಿಂಬಶ್ರೀ ನೀನಾಸಂ
ಬಿಂಬಶ್ರೀ ನೀನಾಸಂ   

ಭೂಗತ ಲೋಕದಲ್ಲಿ ಹಫ್ತಾ ವಸೂಲಿ ಮಾಮೂಲು. ಇದರ ಸುತ್ತವೇ ‘ಹಫ್ತಾ’ ಕಥೆ ಹೆಣೆದಿದ್ದಾರೆ ನಿರ್ದೇಶಕ ಪ್ರಕಾಶ್‌ ಹೆಬ್ಬಾಳ್‌.

ಹಲವು ನಿರ್ದೇಶಕರ ಕೈಕೆಳಗೆ ಒಂದು ದಶಕದವರೆಗೆ ದುಡಿದಿರುವ ಅವರಿಗೆ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್‌ ಧರಿಸಿದ ಖುಷಿಯಿದೆ. ಶೂಟಿಂಗ್‌ ಮುಗಿಸಿ ಟೀಸರ್‌ ಸಮೇತ ಚಿತ್ರತಂಡದೊಂದಿಗೆ ಅವರು ಹಾಜರಾಗಿದ್ದರು. ‘ಸಸ್ಪೆನ್ಸ್, ಥ್ರಿಲ್ಲರ್‌ ಕಥೆ ಇದು. ಭೂಗತದ ಲೋಕದ ಕಥೆಯಾದರೂ ಭಿನ್ನವಾಗಿ ಹೇಳಿದ್ದೇವೆ’ ಎಂದು ಸಮರ್ಥಿಸಿಕೊಂಡರು ಪ್ರಕಾಶ್‌ ಹೆಬ್ಬಾಳ್.

ಹಲವು ಚಿತ್ರಗಳಲ್ಲಿ ಖಳನಟನಾಗಿ ಮಿಂಚಿರುವ ವರ್ಧನ್‌ ತೀರ್ಥಹಳ್ಳಿ ಈ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಆದರೆ, ಇಲ್ಲಿಯೂ ಅವರು ಖಳನಟನ ಶೇಡ್‌ನಿಂದ ಹೊರಬಂದಿಲ್ಲ. ಮಂಗಳಮುಖಿಯಾಗಿಯೂ ಅವರು ಬಣ್ಣಹಚ್ಚಿದ್ದಾರೆ.‘ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಕೆಟ್ಟವರನ್ನು ಸಂಹರಿಸಲು ಕೆಟ್ಟವನಾಗಿಯೇ ಬರುವ ಪಾತ್ರ ನಿರ್ವಹಿಸಿದ್ದೇನೆ’ ಎಂದು ವಿವರಿಸಿದರು.

ADVERTISEMENT

ಮತ್ತೊಬ್ಬ ನಾಯಕ ರಾಘವ್‌ ನಾಗ್, ‘ನಾನು ಮಾಡುವ ಅಪರಾಧ ಕೃತ್ಯಗಳಿಗೆ ಯಾವುದೇ ಸಾಕ್ಷ್ಯಗಳು ಇರುವುದಿಲ್ಲ. ಅಂತಹ ಭಿನ್ನವಾದ ಪಾತ್ರವನ್ನು ನಿಭಾಯಿಸಿದ್ದೇನೆ’ ಎಂದು ಹೇಳಿಕೊಂಡರು.

‘ರಾಮಾ ರಾಮಾ ರೇ’ ಚಿತ್ರದಲ್ಲಿ ನಟಿಸಿದ್ದ ಬಿಂಬಶ್ರೀ ಅವರಿಗೆ ಇದು ಎರಡನೇ ಚಿತ್ರ. ಇಲ್ಲಿ ಅವರು ಭರತನಾಟ್ಯ ಕಲಾವಿದೆಯಾಗಿ ನಟಿಸಿದ್ದಾರೆ. ರೂಪದರ್ಶಿ ಸೌಮ್ಯಾ ತಿತೀರ ಮತ್ತೊಬ್ಬ ನಾಯಕಿ. ‌‌

ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿಜಯ್‌ ಯಾಡ್ಲಿನಾ ಸಂಗೀತ ಸಂಯೋಜಿಸಿದ್ದಾರೆ. ಸೂರಿ ಸಿನಿಟೆಕ್‌ ಅವರ ಛಾಯಾಗ್ರಹಣವಿದೆ. ಹಿನ್ನೆಲೆ ಸಂಗೀತ ಗೌತಮ್‌ ಶ್ರೀವತ್ಸ ಅವರದ್ದು. ಮೈತ್ರಿ ಮಂಜುನಾಥ್‌ ಬಂಡವಾಳ ಹೂಡಿದ್ದಾರೆ.ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಜನವರಿ ತಿಂಗಳ ಕೊನೆಯ ವಾರದ ಥಿಯೇಟರ್‌ಗೆ ಬರಲು ಚಿತ್ರತಂಡ ಯೋಜನೆ ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.