ನಮ್ಮ ನಡುವಿನ ದಂತಕಥೆ, ದಶಕಗಳಿಂದ ಚಿತ್ರರಂಗದಲ್ಲಿನ ಸಂವೇದನೆಗಳಿಗೆ ಸ್ವರವಾದ ದೈತ್ಯ ಪ್ರತಿಭೆ, ಇಳಯರಾಜ ಇಂದು (ಜೂನ್ 2) 79ನೇ ವಸಂತದ ಸಂಭ್ರಮದಲ್ಲಿದ್ದಾರೆ.
ಅವರ ಸ್ವರ ಸಂಯೋಜನೆಗೆ ಇಡೀ ಜಗತ್ತೇ ತಲೆದೂಗಿದೆ. ಕನ್ನಡದಲ್ಲಿ ಅವರು ಸಂಗೀತ ನಿರ್ದೇಶಿಸಿದ್ದು ಪ್ರಮಾಣದಲ್ಲಿ ಕಡಿಮೆ ಚಿತ್ರಗಳಾದರೂ ಗಮನಾರ್ಹ ಗೀತೆಗಳನ್ನು ನೀಡಿ ಕನ್ನಡಿಗರ ಮನೆ ಮಾತಾಗಿದ್ದಾರೆ.
ಇಳಯರಾಜ ಅವರ ಜನ್ಮದಿನಕ್ಕೆ ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ಕಡೆ ನೆಲೆಸಿರುವ ಅಭಿಮಾನಿಗಳು, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದ ಗಣ್ಯರು, ನಟ–ನಟಿಯರು, ತಂತ್ರಜ್ಞರು ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಬುಧವಾರ ಸಂಜೆ ಇಳಯರಾಜ ಅವರು ಅಭಿರಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಅವರ ಕುಟುಂಬದವರು ಉಪಸ್ಥಿತರಿದ್ದರು. ಇಂದು ಸಂಜೆ 6 ಗಂಟೆಗೆ ಕೊಯಮತ್ತೂರಿನಲ್ಲಿ ಅಭಿಮಾನಿಗಳಿಗಾಗಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಮೂಲಕ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆ ವಿಶೇಷವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
1943ರಲ್ಲಿ ಜನಿಸಿದ ಇಳಯರಾಜ ಅವರು ಸುಮಾರು 1500 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರು ಸಂಗೀತ ನೀಡಿರುವ ಇನ್ನು 5 ಸಿನಿಮಾಗಳು ತೆರೆ ಕಾಣಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.