ಮುಂಬೈ: ಸಹಜ ಸೌಂದರ್ಯ ಮತ್ತು ತುಂಟ ಮುಗುಳ್ನಗೆಯಿಂದಲೇ ಮನಗೆದ್ದ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಶನಿವಾರ 39ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ನೆಚ್ಚಿನ ನಟಿಯ ಹುಟ್ಟುಹಬ್ಬದ ಪ್ರಯುಕ್ತ ಚಿತ್ರರಂಗದ ನಟ –ನಟಿಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.
‘ಹಿಂದಿ ಭಾಷೆ ಚೆನ್ನಾಗಿ ಬರಲ್ಲ’ ಎಂಬ ಹಣೆಪಟ್ಟಿಯ ನಡುವೆಯೂ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಂಡ ಕತ್ರಿನಾ, ಸದ್ಯ ಬಾಲಿವುಡ್‌ನ ಬಹು ಬೇಡಿಕೆಯ ಮತ್ತು ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರಲ್ಲಿ ಒಬ್ಬರು. ಬಾಲಿವುಡ್‌ನಲ್ಲಿ ಎಲ್ಲರಿಂದಲೂ ಪ್ರೀತಿಯಿಂದ ‘ಕ್ಯಾಟ್’ ಎಂದು ಕರೆಸಿಕೊಳ್ಳುವ ಈ ಬೆಡಗಿ ಫಿಟ್‌ನೆಸ್ ಮತ್ತು ಚೆಲುವಿನಿಂದಾಗಿ ಇಂದಿನ ತಲೆಮಾರಿನ ನಟಿಯರ ಜತೆಗೂ ರೇಸ್‌ನಲ್ಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಈ ಜೋಡಿ, ಹಬ್ಬ, ಸಮಾರಂಭ, ಪ್ರವಾಸದ ವೇಳೆ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.
2021ರ ಡಿ. 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅದ್ಧೂರಿಯಾಗಿ ವಿವಾಹವಾಗಿದ್ದರು.
ಫರ್ಹಾನ್ ಅಖ್ತರ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಜೀ ಲೇ ಝರಾ’ ಚಿತ್ರದಲ್ಲಿ ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಹಾಗೂ ಆಲಿಯಾ ಭಟ್ ಒಟ್ಟಿಗೆ ನಟಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಚಿತ್ರದಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಲಕ್ಷ್ಮಣ್ ಉಟೇಕರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ವಿಕ್ಕಿ ಕೌಶಲ್, ಸಾರಾ ಅಲಿ ಖಾನ್ ಅಭಿನಯಿಸುತ್ತಿದ್ದಾರೆ.
ಕೆಂಪುಡುಗೆಯಲ್ಲಿ ಮಿರಮಿರ ಮಿಂಚಿದ ರಶ್ಮಿಕಾ ಮಂದಣ್ಣ: ವೈರಲ್ ಆಯ್ತು ಹಾಟ್ ವಿಡಿಯೊ
ಲಂಡನ್ ಟು ಮುಂಬೈ
ಲಂಡನ್‌ನಲ್ಲಿ ಮಾಡೆಲಿಂಗ್ ಮಾಡಿಕೊಂಡಿದ್ದ ಕತ್ರಿನಾ ಆಕಸ್ಮಿಕವಾಗಿ ನಿರ್ದೇಶಕ ಕೈಜಾದ್ ಗುಸ್ತಾದ್ ಕಣ್ಣಿಗೆ ಬಿದ್ದರು. 1999ರಲ್ಲಿ ತಮ್ಮ ನಿರ್ದೇಶನದ ‘ಬೂಮ್’ ಚಿತ್ರಕ್ಕೆ ಗುಸ್ತಾದ್, ಲಂಡನ್‌ನಿಂದ ಕತ್ರಿನಾಳನ್ನು ಬಾಲಿವುಡ್‌ಗೆ ಕರೆತಂದರು. ಚಿತ್ರ ನೆಲಕಚ್ಚಿದರೂ, ಗ್ಲಾಮರಸ್ ಲುಕ್‌ನಿಂದ ಎಲ್ಲರ ಗಮನ ಸೆಳೆದರು.
ಸುಲಭವಾಗಿ ಬಾಲಿವುಡ್ ಒಪ್ಪಿಕೊಳ್ಳದ ಕಾರಣ ಟಾಲಿವುಡ್‌ಗೆ ಹಾರಿದ ಈ ಬೆಡಗಿ, ಅಲ್ಲಿ ಕೆಲವು ಯಶಸ್ವಿ ತೆಲುಗು ಚಿತ್ರಗಳಲ್ಲಿ ಅಭಿನಯಿಸಿ, ಮುಂಬೈ ಮರಳಿದರು. ಸಲ್ಮಾನ್ ಖಾನ್ ಜತೆ ‘ಮೈನೆ ಪ್ಯಾರ್ ಕ್ಯೂಂ ಕಿಯಾ’ ಮತ್ತು ಅಕ್ಷಯ್ ಕುಮಾರ್ ಜತೆ ‘ಹಮ್ಕೊ ದಿವಾನಾ ಕರ್‌ಗಯಾ’ ಚಿತ್ರದಲ್ಲಿ ನಟಿಸಿದ ನಂತರ ಆಕೆಯ ಅದೃಷ್ಟ ಖುಲಾಯಿಸಿತು.
‘ಹೊರಗಿನವಳು‘ ಎಂಬ ಮೈಚಳಿ ಬಿಟ್ಟು ಬಾಲಿವುಡ್ ಮಂದಿ ಜತೆಗೆ ಬೆರೆತ ಕತ್ರಿನಾ, ಎಲ್ಲ ತಲೆಮಾರಿನ ನಾಯಕ ನಟರ ಜತೆ ನಟಿಸಿದ ನಾಯಕಿ ನಟಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳ ಟ್ರೆಂಡ್
ಅಕ್ಷಯ್ ಕುಮಾರ್ ಜತೆ ನಮಸ್ತೆ ಲಂಡನ್, ವೆಲ್‌ಕಮ್, ಸಿಂಗ್ ಈಸ್ ಕಿಂಗ್ ಮುಂತಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲಿ ನಟಿಸಿದರು. ರೇಸ್, ನ್ಯೂಯಾರ್ಕ್, ಮೇರಿ ಬ್ರದರ್ ಕಿ ದುಲ್ಹನ್, ಜಿಂದಗಿ ನಾ ಮಿಲೇಗಿ ದೋಬಾರಾ, ರಾಜನೀತಿ, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ, ಧೂಮ್ 3, ಜಬ್ ತಕ್ ಹೈ ಜಾನ್, ಏಕ್ ಥಾ ಟೈಗರ್, ಬ್ಯಾಂಗ್–ಬ್ಯಾಂಗ್ ಚಿತ್ರಗಳು ಯಶಸ್ವಿಯಾದವು.
ಆದರೆ, ಸಲ್ಮಾನ್ ಜತೆ ನಟಿಸಿದ 'ಟೈಗರ್ ಜಿಂದಾ ಹೈ' ನಂತರ ಕತ್ರಿನಾ ಚಿತ್ರಗಳು ಸೋಲು ಕಾಣುತ್ತಿವೆ. ಶಾರುಖ್ ಖಾನ್ ಜತೆ ನಟಿಸಿದ 'ಜೀರೊ', ಸಲ್ಮಾನ್ ಜತೆಗಿನ 'ಭಾರತ್', ಆಮೀರ್ ಖಾನ್ ಜತೆ ತೆರೆಹಂಚಿಕೊಂಡ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಗಳು ನೆಲಕಚ್ಚಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.