‘ಡಾಲಿ’ ಖ್ಯಾತಿಯ ನಟ ಧನಂಜಯ್ ಬೆಂಗಳೂರಿನ ಭೂಗತ ಲೋಕದ ದೊರೆಯಾಗಿದ್ದ ಎಂ.ಪಿ. ಜಯರಾಜ್ ಪಾತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಲಾಕ್‌ಡೌನ್‌ಗೂ ಮೊದಲೇ ಈ ಸಿನಿಮಾ ಘೋಷಣೆಯಾಗಿತ್ತು. ಆದರೆ, ಟೈಟಲ್ ಮಾತ್ರ ಅನಾವರಣಗೊಂಡಿರಲಿಲ್ಲ. ಈ ಪಾತ್ರಕ್ಕಾಗಿ ಧನಂಜಯ್ ಅವರು ಉದ್ಯಾನನಗರಿಯ ಗರಡಿ ಮನೆಗಳನ್ನು ಎಡತಾಕಿ ಜಯರಾಜ್ ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸಲು ಕಸರತ್ತು ಆರಂಭಿಸಿದ್ದರು.
ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಪುಸ್ತಕ ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ನೊಗವನ್ನು ಅಗ್ನಿ ಶ್ರೀಧರ್ ಅವರೇ ಹೊತ್ತಿದ್ದಾರೆ. ಕೆ.ಎಂ. ಚೈತನ್ಯ ಆ್ಯಕ್ಷನ್ ಕಟ್ ಹೇಳಿದ್ದ ‘ಆ ದಿನಗಳು’ ಸಿನಿಮಾ ಬೆಂಗಳೂರಿನ ಭೂಗತ ಲೋಕದ ಡಾನ್ ಆಗಿದ್ದ ಕೊತ್ವಾಲ್ ರಾಮಚಂದ್ರನ ಬದುಕನ್ನು ತೆರೆಯ ಮೇಲೆ ತೆರೆದಿಟ್ಟಿತ್ತು. ಜಯರಾಜ್ ಬದುಕನ್ನು ತೆರೆದಿಡಲಿರುವ ಸಿನಿಮಾಕ್ಕೆ ‘ಹೆಡ್ ಬುಷ್’ ಎಂಬ ಟೈಟಲ್ ಇಡಲಾಗಿದೆ. ಇದು ವಾಲ್ಯೂಮ್ 1 ಆಗಿದ್ದು, ಇದರ ಸರಣಿ ಸಿನಿಮಾಗಳು ನಿರ್ಮಾಣವಾಗುವ ಸುಳಿವನ್ನು ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಿರುವ ಹೊಸ ಪೋಸ್ಟರ್ ನೀಡಿದೆ.
ಅಂದಹಾಗೆ ನಟ ಪುನೀತ್ ರಾಜ್‌ಕುಮಾರ್ ಅವರು ಧನಂಜಯ್ ನಟನೆಯ ‘ಹೆಡ್ ಬುಷ್’ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವುದು ವಿಶೇಷ.
‘ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಆಧರಿತ, ಜಯರಾಜ್ ಆಗಿ ನಾನು ನಟಿಸುತ್ತಿರುವ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಿದ ನಮ್ಮ ನೆಚ್ಚಿನ ಪುನೀತ್ ರಾಜಕುಮಾರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಅಶು ಬೇದ್ರ ನಿರ್ಮಾಣ ಹಾಗೂ ಶೂನ್ಯ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ’ ಎಂದು ಧನಂಜಯ್ ಟ್ವೀಟ್ ಮಾಡಿದ್ದಾರೆ.
ಜಯರಾಜ್ ಕಾಲದ ಸಿನಿಮಾ ಇದಾಗಿದೆ. ಸೆಟ್ ಅಳವಡಿಸಿ ಎಲ್ಲವನ್ನೂ ಚಿತ್ರೀಕರಿಸುವ ಮನಸ್ಸು ಚಿತ್ರತಂಡಕ್ಕೆ ಇಲ್ಲವಂತೆ. ನೈಜತೆಗೆ ಹೆಚ್ಚಿನ ಒತ್ತು ನೀಡಲು ಚಿತ್ರತಂಡ ನಿರ್ಧರಿಸಿದೆ. ಹಾಗಾಗಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶೂಟಿಂಗ್ ನಡೆಯಲಿದೆ. ಇದರಲ್ಲಿ ಧನಂಜಯ್ ಅವರು ಜಯರಾಜ್ ಅವರ ಯಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.