ದಾವಣಗೆರೆ: ತುಂತುರು ಮಳೆಯ ನಡುವೆಯೂ ಕುಂದದ ಉತ್ಸಾಹ, ಪ್ರೇಕ್ಷಕರು ಮೊಬೈಲ್ ಫೋನ್‌ಗಳ ಟಾರ್ಚ್ ಬೆಳಗಿಸಿ ‘ಅಪ್ಪು’ವಿಗೆ ನಮನ. ತಾರೆಯರ ನೃತ್ಯಕ್ಕೆ ಮನಸೋತ ಪ್ರೇಕ್ಷಕರು...
ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ನಟ ಡಾಲಿ ಧನಂಜಯ್ ನಟಿಸಿ, ನಿರ್ಮಿಸಿರುವ ‘ಹೆಡ್ ಬುಷ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಭಾನುವಾರ ಕಂಡುಬಂದ ದೃಶ್ಯಗಳು ಇವು...
ಕಾರ್ಯಕ್ರಮದ ಆರಂಭದಲ್ಲಿ ಮಳೆ ಬಂದರೂ ಅಭಿಮಾನಿಗಳು ಕೊನೆಯವರೆಗೂ ಕಾರ್ಯಕ್ರಮವನ್ನು ವೀಕ್ಷಿಸಿದರು.
ನಟಿ ರಮ್ಯಾ ವೇದಿಕೆ ಮೇಲೆ ಬರುತ್ತಿದ್ದಂತೆಯೇ ‘ಅಪ್ಪು ಅಪ್ಪು’ ಎಂದು ಕೂಗಿದರು. ವೇಳೆ ರಮ್ಯಾ ಒಂದು ಕ್ಷಣ ಭಾವುಕರಾದರು. ಆಕಾಶ್ ಚಿತ್ರದ ‘ನೀನೇ ನೀನೆ’ ಹಾಡಿಗೆ ನೃತ್ಯ ಮಾಡಿದರು.
‘ಊಟ ಆಯಿತಾ, ತುಂಬಾ ಖುಷಿಯಾಯಿತು. ಮಳೆ ಬಂದರೂ ನೀವು ಕಾದು ಕಾರ್ಯಕ್ರಮ ವೀಕ್ಷಿಸುತ್ತಿದ್ದೀರಾ ನಿಮಗೆ ಧನ್ಯವಾದಗಳು. ನನಗೆ ದಾವಣಗೆರೆಯ ಬೆಣ್ಣೆ ದೋಸೆ ತುಂಬಾ ಇಷ್ಟ’ ಎಂದು ರಮ್ಯಾ ಹೇಳಿದರು.
ಹೆಡ್ ಬುಷ್ ಚಿತ್ರದ ‘ರೌಡಿಗಳು ನಾವು ರೌಡಿಗಳು’ ಹಾಡಿಗೆ ಲಾಂಗ್ ಹಿಡಿದು ವೇದಿಕೆಗೆ ಬಂದ ನಟ ಡಾಲಿ ಧನಂಜಯ್ ಅಭಿಮಾನಿಗಳನ್ನು ರಂಜಿಸಿದರು.
‘ಹೊಸಬರಿಗೆ ಅವಕಾಶ ನೀಡುವುದಾಗಿ ನನ್ನ ಜನ್ಮದಿನದ ದಿವಸ ಪ್ರಮಾಣ ಮಾಡಿದ್ದೆ. ಸೆಟ್ ಬಾಯ್ ಆಗಿದ್ದವರು ನನ್ನ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಡವರ ಮಕ್ಕಳು ಬಾಳಬೇಕು ಎನ್ನುವ ಉದ್ದೇಶ ನನ್ನದು’ ಎಂದರು.
‘ಈಗ ಇಡೀ ವಿಶ್ವವೇ ಕನ್ನಡ ಕನ್ನಡ ಎಂದು ಹೇಳುತ್ತಿದೆ. ‘ಹೆಡ್ ಬುಷ್’ ಚಿತ್ರ ಅದೇ ಮಟ್ಟಕ್ಕೆ ಏರಬೇಕು. ಚಿತ್ರ ಮಾಡುವುದೇ ಕಷ್ಟ. ಜಯರಾಜ್ ಪಾತ್ರವನ್ನು ಧನಂಜಯ ಚೆನ್ನಾಗಿ ಅಭಿನಯಿಸಿದ್ದಾರೆ. ನಾನೊಬ್ಬ ಈ ಚಿತ್ರದಲ್ಲಿ ನಟಿಸಿಲ್ಲ. ಚಿತ್ರ ನೋಡಿ ಗೆಲ್ಲಿಸಬೇಕು’ ಎಂದು ನಟ ನೀನಾಸಂ ಸತೀಶ್ ಮನವಿ ಮಾಡಿದರು.
'ಅಬೀಬಿ...ಅಬೀಬಿ...ಹಾಡಿಗೆ ಹೆಜ್ಜೆ ಹಾಕಿ ವೇದಿಕೆ ಏರಿದ ಚಿತ್ರ ನಟಿ ಪಾಯಲ್ ರಜಪೂತ್, ‘ಕನ್ನಡದ ನೆಲ, ಸಂಸ್ಕೃತಿ ನನಗೆ ಇಷ್ಟ. ಸ್ಯಾಂಡಲ್ ವುಡ್ ನನ್ನನ್ನು ಅದ್ದೂರಿಯಾಗಿ ಸ್ವಾಗತಿಸಿದೆ. ‘ಹೆಡ್ ಬುಷ್’ ಚಿತ್ರ ನನ್ನ ಪಾಲಿಗೆ ಬಹಳ ಮುಖ್ಯ ಚಿತ್ರ. ಇದೇ ಮೊದಲ ಬಾರಿಗೆ ಕನ್ನಡದಲ್ಲೇ ಡಬ್ ಮಾಡಿರುವೆ’ ಎಂದರು.
ಚಿತ್ರ ನಟಿಯರಾದ ರಚಿತಾರಾಮ್, ಶೃತಿ ಹರಿಹರನ್, ಸಂಜನಾ, ಅಮೃತಾ ಹಾಗೂ ಕಾಂತಾರ ಚಿತ್ರದ ನಾಯಕಿ ಸಪ್ತಮಿಗೌಡ ಅವರು ವೇದಿಕೆಗೆ ರಂಗು ತುಂಬಿದರು. ನಟರಾದ ಲೂಸ್ ಮಾದ ಖ್ಯಾತಿಯ ಯೋಗಿ, ರಘು ಮುಖರ್ಜಿ, ಗಾಯಕ ವಾಸುಕಿ ವೈಭವ್ ಚಿತ್ರದ ಯಶಸ್ಸಿಗೆ ಶುಭ ಎಂದು ಹಾರೈಸಿದರು.
ರಾಹುಲ್ ಡೀಟೋ ರ್ಯಾಪ್ ಸಾಂಗ್ ಹಾಡಿ ರಂಜಿಸಿದರು. ಪ್ರಿಯಾ ಅವರು ಮಾದಕ ನೃತ್ಯದ ಮೂಲಕ ಗಮನ ಸೆಳೆದರು. ಕಾವ್ಯ ಕಾರ್ಯಕ್ರಮನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.