‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮನಸೂರೆಗೈದ ನಿರ್ದೇಶಕ ಹೇಮಂತ್ ರಾವ್ ಈಗ ವೀಕ್ಷಕರ ಎದುರು ‘ಕವಲುದಾರಿ’ಯನ್ನು ತೆರೆದು ಇಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಾಣದ ಈ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಈ ಹೊತ್ತಿನಲ್ಲಿ ಹೇಮಂತ್ ರಾವ್ ಜೊತೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
* ‘ಗೋಧಿ ಬಣ್ಣ...’ ಸಿನಿಮಾ ನಂತರ ಬರುತ್ತಿರುವ ನಿಮ್ಮ ಮೊದಲ ಸಿನಿಮಾ ಇದು. ಆ ಸಿನಿಮಾ ನಂತರ ಇದನ್ನೇ ಆಯ್ಕೆ ಮಾಡಿಕೊಳ್ಳಬೇಕು ಅನ್ನುವಂಥದ್ದು ಏನಿತ್ತು?
ನಾನು ಒಂದು ಸಿನಿಮಾ ಮಾಡಬೇಕು ಅಂದರೆ, ಸಿನಿಮಾದ ವಸ್ತುವಿನ ಜೊತೆ ಒಂದು ವರ್ಷ ಇರಲು ಬಯಸುತ್ತೇನೆ. ಅಂದರೆ ಸಿನಿಮಾ ಕಥೆ ಬರೆಯಲು ಆರಂಭಿಸಿದ ದಿನದಿಂದ ಅದು ಬಿಡುಗಡೆ ಕಾಣುವವರೆಗೆ ನನಗೆ ಒಂದು ವರ್ಷ ಬೇಕಾಗುತ್ತದೆ. ಕೆಲವರು ಆರೇ ತಿಂಗಳುಗಳಲ್ಲಿ ಚೆನ್ನಾಗಿ ಸಿನಿಮಾ ಮಾಡಬಲ್ಲರು. ನನ್ನಿಂದ ಅದು ಸಾಧ್ಯವಿಲ್ಲ. ನಾನು ಆಯ್ಕೆ ಮಾಡಿಕೊಳ್ಳುವ ವಸ್ತು ನನ್ನನ್ನು ತೀವ್ರವಾಗಿ ಕಾಡಬೇಕು. ಆ ಕಾಡುವಿಕೆಯೇ ನನಗೊಂದು ಸ್ಫೂರ್ತಿ, ಕಾಡುವಷ್ಟು ಶಕ್ತಿ ಆ ವಸ್ತುವಿಗೆ ಇದ್ದಾಗ ನನಗೂ ತಾಕತ್ತು ಬರುತ್ತದೆ. ‘ಗೋಧಿ ಬಣ್ಣ...’ ಸಿನಿಮಾ ಮಾಡುವಾಗ ನನಗೆ ನನ್ನ ತಂದೆಯ ಜೊತೆಗಿನ ಸಂಬಂಧ, ನನ್ನ ಸುತ್ತಲಿನವರು ಅವರ ತಂದೆ ಜೊತೆ ಹೊಂದಿದ್ದ ಸಂಬಂಧ, ಹತ್ತಿರದವರು ಕಾಣೆಯಾದಾಗ ಕೆಲವರು ಅನುಭವಿಸಿದ್ದ ಸಂಕಟದ ಬಗ್ಗೆ ಆಲೋಚಿಸಿ ಕಥೆಗೆ ಇನ್ನಷ್ಟು ಗಟ್ಟಿತನ ದೊರಕಿಸಿಕೊಳ್ಳಲು ಸಾಧ್ಯವಾಯಿತು.
ಇಂಥದ್ದೊಂದು ಸಿನಿಮಾ ಮಾಡಿದ ನಂತರ, ‘ಕವಲುದಾರಿ’ ಆಯ್ಕೆ ಮಾಡಿಕೊಂಡಿದ್ದಕ್ಕೆ ಕೆಲವು ನಿರ್ದಿಷ್ಟ ಕಾರಣಗಳಿವೆ. ಮೊದಲನೆಯದು, ನನಗೆ ಪೊಲೀಸರ ಬಗ್ಗೆ ಇರುವ ಗೌರವ.
* ಗೌರವ ಅಂದರೆ? ಯಾವ ರೀತಿಯ ಗೌರವ?
ನಾನು ಪೊಲೀಸರ ಜೊತೆ ಬಹಳಷ್ಟು ಸಲ ಜಗಳ ಕೂಡ ಆಡಿದ್ದೇನೆ. ನಾವು ಏನೋ ಚರ್ಚೆ ಮಾಡುತ್ತ ರಾತ್ರಿ ಹೊತ್ತಿನಲ್ಲಿ ಚಹಾ ಕುಡಿಯಲು ಹೊರಗಡೆ ಹೋಗುತ್ತಿದ್ದೆವು. ಆಗ ಪೊಲೀಸರು ಬಂದು, ‘ಯಾಕಿಲ್ಲಿ ನಿಂತಿದ್ದೀರಾ’ ಎಂದು ಏರುದನಿಯಲ್ಲಿ ಪ್ರಶ್ನಿಸುತ್ತಿದ್ದರು. ‘ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ಬಂತು. ನೀವ್ಯಾಕೆ ನಮ್ಮನ್ನು ಓಡಿಸುತ್ತೀರಾ, ನಿಮಗೆ ಬೇರೆ ಕೆಲಸ ಇಲ್ವಾ’ ಎಂದು ನಾನು ಪ್ರಶ್ನಿಸಿದ್ದೂ ಇದೆ. ಹಾಗೆಯೇ, ಪೊಲೀಸರು ಮಾಡುತ್ತಿದ್ದ ಕೆಲವು ಕೆಲಸಗಳು ತಪ್ಪಲ್ವಾ ಎಂದು ನನಗೆ ಅನಿಸಿದ್ದೂ ಇದೆ. ಆದರೆ, ಪೊಲೀಸರ ಕಣ್ಣಿನಿಂದ ಹೊರಜಗತ್ತನ್ನು ನೋಡಿದಾಗ, ನಮ್ಮ ಸಮಾಜ ಅವರ ವಿಚಾರದಲ್ಲಿ ಅದೆಷ್ಟು ತಪ್ಪುಗಳನ್ನು ಮಾಡಿದೆ ಎಂದು ಅನಿಸಿತು. ನಮಗಾಗಿ ಬದುಕುತ್ತಿರುವ ಪೊಲೀಸರನ್ನು ಕಾಳಜಿಯಿಂದ ನೋಡಿಕೊಳ್ಳುವಲ್ಲಿ ನಾವು ಸೋತಿದ್ದೇವೆ.
ಅವರು ಮಾಡುವ ಕೆಲಸ ಬಹಳ ಜವಾಬ್ದಾರಿಯುತವಾದದ್ದು. ಪೊಲೀಸರು ಎದುರಿಸುತ್ತಿರುವ ತೀರಾ ಸಂಕೀರ್ಣ ಸಮಸ್ಯೆಗಳನ್ನು ನಾವು ಬಗೆಹರಿಸಿಲ್ಲ. ‘ಇಪ್ಪತ್ತೈದು ವರ್ಷಗಳಲ್ಲಿ ಅಕ್ಕಿ ಬೆಲೆ ಹೆಚ್ಚಾದಷ್ಟು ಪೊಲೀಸರ ಸಂಬಳ ಜಾಸ್ತಿಯಾಗಿಲ್ಲ’ ಎಂಬ ಮಾತೊಂದು ಸಿನಿಮಾದಲ್ಲಿ ಇತ್ತು. ಆದರೆ ಸಂಕಲನದ ಸಂದರ್ಭದಲ್ಲಿ ಅದನ್ನು ತೆಗೆದೆವು. ಇದು ಒಂದು ಸಮಸ್ಯೆ. ಸಮವಸ್ತ್ರದಲ್ಲಿ ಇರುವವನ ಮಾನವೀಯ ಮುಖವನ್ನು ಹುಡುಕುವುದು ನನ್ನ ಉದ್ದೇಶವಾಗಿತ್ತು. ಪರಿಸ್ಥಿತಿ ಸುಲಭವಿಲ್ಲ ಎಂಬುದು ಗೊತ್ತಿದ್ದೂ ಪೊಲೀಸ್ ಕೆಲಸ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಮನಸ್ಸು ಹೇಗಿರುತ್ತದೆ ಎಂಬುದನ್ನು ತೋರಿಸುವ ಹಂಬಲ ಇತ್ತು.
* ಈ ಸಿನಿಮಾಕ್ಕಾಗಿ ಪೊಲೀಸರ ಜೊತೆ ನೇರವಾಗಿ ಒಡನಾಟ ಇಟ್ಟುಕೊಂಡಿದ್ದಿರಾ?
ಈ ಸಿನಿಮಾಕ್ಕಾಗಿ ನಾನು ಹಲವು ಜನ ಪೊಲೀಸರ ಜೊತೆ ಮಾತನಾಡಿದೆ. ಅವರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಅವರೆಲ್ಲರ ವ್ಯಕ್ತಿತ್ವದಲ್ಲಿ ಇರುವ ಸಮಾನ ಅಂಶವೊಂದನ್ನು ಕಂಡುಕೊಂಡೆ. ಒಂದು ಪ್ರಕರಣದ ಬೆನ್ನುಹತ್ತಿದರೆ, ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು ಎಂಬ ಹಟ ಅವರಲ್ಲಿ ಇರುತ್ತದೆ. ಯಾರಿಗೋ ಅನ್ಯಾಯ ಆದಾಗ, ಪೊಲೀಸರು ಹೋಗಿ ಅದನ್ನು ಸರಿಪಡಿಸುವುದು ಬಹಳ ಒಳ್ಳೆಯ ಅಂಶ ಅನಿಸಿತು. ಪೊಲೀಸರ ಜೀವನ ಕೂಡ ಒಂದು ಕವಲುದಾರಿ – ಸತ್ಯ, ಸುಳ್ಳು, ಸಾವು, ಬದುಕು ಇವುಗಳು ಅವರ ಜೀವನದ ಕವಲುದಾರಿಗಳನ್ನು ಸೂಚಿಸುತ್ತವೆ. ಇವು ನನ್ನನ್ನು ಕಾಡಿದವು. ಇವುಗಳ ಜೊತೆಗೆ ಥ್ರಿಲ್ಲರ್ ಅಂಶವನ್ನು ಆಧಾರವಾಗಿ ಇರಿಸಿಕೊಂಡು ಈ ಸಿನಿಮಾ ಮಾಡಿದೆ.
* ಪಿಆರ್‌ಕೆ ಪ್ರೊಡಕ್ಷನ್ ಸಂಸ್ಥೆಯ ಮೊದಲ ನಿರ್ಮಾಣದ ಸಿನಿಮಾಕ್ಕೆ ನಿಮ್ಮನ್ನು ಯಾಕೆ ಆಯ್ಕೆ ಮಾಡಿಕೊಂಡಿರಬಹುದು?
ನನಗೆ ಪುನೀತ್ ರಾಜ್‌ಕುಮಾರ್ ಹೊಸ ಪರಿಚಯವೇನೂ ಅಲ್ಲ. ಅವರ ಅಭಿನಯದ ಪೃಥ್ವಿ ಸಿನಿಮಾದಲ್ಲಿ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅದು ಕೂಡ ಮಾಮೂಲಿ ಸಿನಿಮಾ ಅಲ್ಲ. ಆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅವರ ಜೊತೆ ಸಾಕಷ್ಟು ಚರ್ಚೆ ಮಾಡುತ್ತಿದ್ದೆ. ಜೋರ್ಡಾನ್‌ಗೆ ಒಂದು ಹಾಡಿನ ಚಿತ್ರೀಕರಣಕ್ಕೆ ಹೋಗಿದ್ದಾಗ ಬಹಳಷ್ಟು ಚರ್ಚಿಸಿದ್ದೇವೆ. ನಾನು ನನ್ನ ಸಂಗ್ರಹದಲ್ಲಿರುವ ಸಿನಿಮಾಗಳನ್ನು ಅವರಿಗೆ ಕೊಡುತ್ತಿದ್ದೆ, ಅವರಲ್ಲಿ ಇರುವುದನ್ನು ನಾನು ಪಡೆದುಕೊಳ್ಳುತ್ತಿದ್ದೆ. ನನಗೆ ಯಾವ ರೀತಿಯ ಸಿನಿಮಾ ಮಾಡಬೇಕು ಎಂಬ ಆಸೆ ಇದೆ ಎಂಬುದು ಆ ದಿನಗಳಿಂದಲೂ ಪುನೀತ್ ಅವರಿಗೆ ಗೊತ್ತಿತ್ತು. ‘ಗೋಧಿ ಬಣ್ಣ...’ ಸಿನಿಮಾ ಮಾಡುವಾಗ ಕೂಡ ‘ನಿನಗೆ ಯಾವ ಸಂದರ್ಭದಲ್ಲಿ ಸಹಾಯ ಬೇಕಿದ್ದರೂ ಕೇಳು, ನಾನಿದ್ದೇನೆ’ ಎಂದು ಅವರು ಹೇಳಿದ್ದರು. ಆ ಸಿನಿಮಾ ನೋಡಿ, ಖುಷಿಪಟ್ಟಿದ್ದರು. ಯಾವುದಾದರೂ ಕಥೆ ಇದ್ದರೆ ಹೇಳು, ಸಿನಿಮಾ ಮಾಡೋಣ ಎಂದಿದ್ದರು. ಸಿನಿಮಾ ಬಗ್ಗೆ ನನಗೆಷ್ಟು ಪ್ರೀತಿ ಇದೆ ಎಂಬುದು ಅವರಿಗೆ, ಅವರಿಗೆಷ್ಟು ಪ್ರೀತಿ ಇದೆ ಎಂಬುದು ನನಗೆ ಗೊತ್ತಾಗಿದೆ. ಅದರ ಆಧಾರದ ಮೇಲೆಯೇ ಈ ಸಿನಿಮಾ ಆಗಿದೆ.
* ಮಾಮೂಲಿ ಅಲ್ಲದ, ಕೆಲವು ಸೂಕ್ಷ್ಮಗಳನ್ನು ಒಳಗೊಂಡಿರುವ ಸಿನಿಮಾ ಅನಿಸುತ್ತಿದೆ ಇದು. ಇಂತಹ ಸಿನಿಮಾಗಳಿಗೆ ಕನ್ನಡದಲ್ಲಿ ಎಷ್ಟು ವೀಕ್ಷಕರಿದ್ದಾರೆ ಎಂದು ವಿಶ್ವಾಸದಿಂದ ಹೇಳಬಲ್ಲಿರಿ?
ಪ್ರತಿ ಕನ್ನಡಿಗನೂ ಇಂತಹ ಸಿನಿಮಾಗಳಿಗೆ ವೀಕ್ಷಕನೇ. ಎಲ್ಲ ಕನ್ನಡಿಗರೂ ಸಿನಿಮಾ ನೋಡುವುದಿಲ್ಲ ಎಂಬುದು ನಿಜ. ಆದರೆ, ಹಿಂದೆ ಬೇರೆ ಭಾಷೆಗಳಿಂದ ಇಲ್ಲಿಗೆ ಬಂದು, ಇಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿ, ಅಲ್ಲಿಗೆ ಹೋಗಿ ಸಿನಿಮಾ ಮಾಡುತ್ತಿದ್ದ ಕಾಲ ಇತ್ತು. ಆದರೆ ಆ ಕಾಲ ಹೋಗಿಬಿಟ್ಟಿತ್ತು. ಈಗ ಪುನಃ ಅಂತಹ ಕಾಲ ಬರುತ್ತಿದೆ. ಕನ್ನಡಿಗರಿಗೆ ಪ್ರತಿ ಸಿನಿಮಾವನ್ನೂ ಗೆಲ್ಲಿಸಬೇಕು ಎಂಬ ಹಂಬಲ ಇದೆ. ಇದನ್ನು ನಾನು ನೇರವಾಗಿ ಗಮನಿಸಿದ್ದೇನೆ. ‘ಕವಲುದಾರಿ’ ಎಲ್ಲರಿಗೂ ಮಾಡಿರುವ ಸಿನಿಮಾ. ಯಾರು ಸೂಕ್ಷ್ಮಗಳನ್ನು ಹುಡುಕಬಲ್ಲರೋ, ಅವರಿಗೆ ಅದು ಕಾಣಿಸುತ್ತದೆ. ಅದನ್ನು ಕಾಣದಿರುವವರಿಗೆ ಇದು ಪಕ್ಕಾ ಕಮರ್ಷಿಯಲ್ ಸಿನಿಮಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.