ಸಂಖ್ಯಾಸಮೃದ್ಧಿಗೆ ಹೆಸರಾದ ಕನ್ನಡ ಚಿತ್ರರಂಗ ಈ ವರ್ಷದ ಬಹುಪಾಲು ಕೋವಿಡ್ ನೆರಳಿನಲ್ಲೇ ಕಳೆಯ ಬೇಕಾಯಿತು. ಎಂಬತ್ತಕ್ಕೂ ಹೆಚ್ಚು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಎಂಟು ಒಟಿಟಿಯಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡವು. ಡ್ರಗ್ಸ್ ಮಾಫಿಯಾ ಜಾಲದಲ್ಲಿರುವ ಕಾರಣಕ್ಕೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜೈಲು ಸೇರಿದ್ದೇ ದೊಡ್ಡ ಸುದ್ದಿ.
ಹದಿನೈದು ವರ್ಷಗಳ ಹಿಂದೆ ಸಿದ್ಧರಾಜ ಕಲ್ಯಾಣ್‌ಕರ್ ಬೆಂಗಳೂರಿನ ಮಂಜುನಾಥ ನಗರದ ಪುಟ್ಟ ರೂಮ್‌ನಲ್ಲಿ ಮೂರು– ನಾಲ್ಕು ಜತೆ ಬಟ್ಟೆಗಳ ಟ್ರಂಕು, ಒಂದು ತಟ್ಟೆ, ಲೋಟ, ಚೊಂಬು ಇಟ್ಟುಕೊಂಡು ಸಿನಿಮಾ ಕನಸನ್ನು ಕಣ್ಣಲ್ಲಿ ಇಟ್ಟುಕೊಂಡು ಕುಳಿತಿದ್ದರು. ಹುಬ್ಬಳ್ಳಿಯಲ್ಲಿ ಸಂಸಾರವನ್ನು ಬಿಟ್ಟು, ಬೆಂಗಳೂರಿನಲ್ಲಿ ಕಿರುತೆರೆ–ಹಿರಿತೆರೆಯ ಅವಕಾಶಗಳ ಆಕಾಶ ದಿಟ್ಟಿಸತೊಡಗಿದ್ದಾಗ ಅವರೇನು ತುಂಬು ಯೌವನಿಗರಾಗಿರಲಿಲ್ಲ. ‘ಟ್ರಂಕು ಎತ್ತುವ ಕಾಲ ಬಂದರೆ ಸುಲಭವಾಗಿ ಊರ ಕಡೆಗೆ ಹೊರಡಬಹುದಲ್ಲ, ಅದಕ್ಕೇ ಇಷ್ಟೇ ವಸ್ತುಗಳನ್ನು ತಂದಿರುವೆ’ ಎಂದು ಅವರು ಹೇಳಿದ್ದಾಗ ಕಣ್ಣಂಚಿನಲ್ಲಿ ಸಣ್ಣ ಹನಿಯಿತ್ತು. ಈ ವರ್ಷ ಸೆಪ್ಟೆಂಬರ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನವೇ ಅವರು ದಿಢೀರನೆ ತೀರಿಹೋದರು. ಟ್ರಂಕನ್ನು ಬೇರೆ ಯಾರೋ ಎತ್ತುವ ಕಾಲ. ಚಿತ್ರರಂಗದ ಈ ವರ್ಷದ ಅನಿಶ್ಚಿತತೆಯ ರೂಪಕದ ಹಾಗೆ ಸಿದ್ಧರಾಜ ಕಲ್ಯಾಣ್‌ಕರ್ ಸಾವು ಕಾಣುತ್ತಿದೆ.
ದುರಿತ ಕಾಲದ ಸಂಕೇತ
ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ‘ರಾಜೀವ ಐಎಎಸ್’ ಹಾಗೂ ಶಿವಾನಂದ ಭೂಷಿ ಸಾರಥ್ಯದ ‘ವೇಷಧಾರಿ’ ಚಿತ್ರಗಳ ಬಿಡುಗಡೆಯೊಂದಿಗೆ ವರ್ಷ ಶುರುವಾಯಿತು. ದುರಿತ ಕಾಲದ ಸಂಕೇತದಂತೆ ಅವು ಮಕಾಡೆಯಾದವು. ಜನವರಿ ಮೂರನೇ ವಾರ ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ತೆರೆಕಂಡಾಗ ಸ್ವಲ್ಪ ನಿರೀಕ್ಷೆ ಹುಟ್ಟಿತು. ಅದೂ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಅದರ ಮರುವಾರ ರಾಜ್ ಪತ್ತಿಪಾಟಿ ನಿರ್ದೇಶಿಸಿದ್ದ ‘ಕಾಣದಂತೆ ಮಾಯವಾದನು’ ಎನ್ನುವ ದೆವ್ವದ ಸಿನಿಮಾ ತೆರೆಕಂಡಿತು. ಸಾಮಾನ್ಯವಾಗಿ ದೆವ್ವಗಳು ಹೆದರಿಸುತ್ತವೆ. ಈ ಚಿತ್ರದಲ್ಲಿ ಇರುವುದು ಒಳ್ಳೆಯ ದೆವ್ವ. ಪ್ರಯೋಗಕ್ಕೆ ಸಣ್ಣ ಮುನ್ನುಡಿಯಂತೆ ಕಂಡ ಈ ಚಿತ್ರದ ಕುರಿತು ಉತ್ತಮ ಅಭಿಪ್ರಾಯಗಳು ವ್ಯಕ್ತವಾದವಷ್ಟೆ. ಕಲೆಕ್ಷನ್ ಬರಲಿಲ್ಲ. ‘ಹಾಲು ಜೇನು’ ತರಹದ ‘ಜಾನರ್’ನ ಚಿತ್ರ ಎನಿಸಿಕೊಂಡ ‘ಲವ್ ಮಾಕ್ಟೇಲ್’ ಅದೇ ವಾರ ಬಿಡುಗಡೆಯಾದರೂ ಸದ್ದು ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ; ಅದೂ ಪೈರಸಿ ವರ್ಷನ್ ಮೂಲಕ. ಡಾರ್ಲಿಂಗ್ ಕೃಷ್ಣ ನಾಯಕನಾಗಿ, ನಿರ್ದೇಶಕನೂ ಆಗಿದ್ದ ಚಿತ್ರ ಇದು. ಮಿಲನಾ ನಾಗರಾಜ್ ನಾಯಕಿ. ಅವರಿಬ್ಬರ ಸಿನಿಮಾದ ವಿಷಾದ ಎಷ್ಟು ಚರ್ಚೆಯಾಯಿತೋ ನಿಜ ಬದುಕಿನ ಪ್ರೇಮವೂ ಅಷ್ಟೇ ಮಾತಿಗೆ ಪಕ್ಕಾಯಿತು.
‘ದಿಯಾ’ ಫೆಬ್ರುವರಿಯಲ್ಲಿ ತೆರೆಕಂಡಾಗ ಸದ್ದು ಮಾಡಲಿಲ್ಲ. ಕೆ.ಎಸ್. ಅಶೋಕ ಆ್ಯಕ್ಷನ್–ಕಟ್ ಹೇಳಿದ ಈ ಚಿತ್ರವೂ ‘ಲವ್ ಮಾಕ್ಟೇಲ್’ನಂತೆ ಸಂಚಲನ ಸೃಷ್ಟಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ. ಪೈರಸಿಗೇ ಮತ್ತೊಮ್ಮೆ ಜೈ. ಅಮೆಜಾನ್ ಪ್ರೈಮ್‌ನವರು ಅದನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲೇ ಕಳ್ಳಸರಕು ಜನಪ್ರಿಯವಾಗಿತ್ತು. ಅದರ ನಾಯಕ ಪೃಥ್ವಿ ಅಂಬರ್ ಹಾಗೂ ನಾಯಕಿ ಖುಷಿ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದರಷ್ಟೇ ಅಲ್ಲ, ಅವರನ್ನು ಅನೇಕ ಅವಕಾಶಗಳೂ ಹುಡುಕಿಕೊಂಡು ಬಂದವು.
ದುನಿಯಾ ಸೂರಿ ಕೊಲಾಜ್ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರವು ಅವರದ್ದೇ ಹಿಂದಿನ ‘ಟಗರು’ ಯಶಸ್ಸಿನ ಬ್ಯಾಂಕಿಂಗ್ ಮೇಲೆ ಒಂದಿಷ್ಟು ಹಣ ಮಾಡುವ ಸೂಚನೆ ಕೊಡುತ್ತಿತ್ತು. ಡಾಲಿ ಧನಂಜಯ ಅಭಿನಯದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಮೂರೇ ವಾರಗಳಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಅದಕ್ಕೂ ಮೊದಲು ಬಿಡುಗಡೆಯಾಗಿದ್ದ, ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‌ಮನ್’ ನಿದ್ರಾರೋಗದ ನಾಯಕ ಸಿಕ್ಕುಗಳನ್ನು ಬಿಡಿಸುವ ಥ್ರಿಲ್ಲರ್ ರೂಪದಲ್ಲಿ ಉತ್ತಮ ವಿಮರ್ಶೆ ಗಳಿಸಿತ್ತು. ‘ಮರಳಿ ಮರೆಯಾಗಿದೆ...’ ಎಂಬ ಆ ಚಿತ್ರದ ಹಾಡು ಕೂಡ ಸಹೃದಯರ ಮನ ಗೆದ್ದಿತ್ತು. ಸಂಚಿತ್ ಹೆಗಡೆ ಕಂಠದ ಮೋಡಿ, ಪ್ರಜ್ವಲ್ ಚುರುಕುತನದ ಅಭಿನಯದ ಹೊರತಾಗಿಯೂ ಸಿನಿಮಾ ಗೆಲ್ಲಲಿಲ್ಲ.
ಪುನೀತ್ ರಾಜ್‌ಕುಮಾರ್ ಮಾಲೀಕತ್ವದ ‘ಪಿಕೆಆರ್’ ಬ್ಯಾನರ್‌ನ ‘ಮಾಯಾಬಜಾರ್’ ವಸ್ತುವೈವಿಧ್ಯದ ಕಾರಣಕ್ಕೆ ಮುಖ್ಯವಾದ ಚಿತ್ರ. ಹಾಸ್ಯದ ಲೇಪವಿದ್ದರೂ ಭಾವುಕ ನೆಲೆಗಟ್ಟಿನಲ್ಲಿ ಹೊಸಕಾಲದ ಭಿನ್ನ ತಲ್ಲಣಗಳನ್ನು ಅದು ಸ್ಪರ್ಶಿಸಿತ್ತು. ಮಾರ್ಚ್ ಹೊತ್ತಿಗಾಗಲೇ 60ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಅಪ್ಪಳಿಸಿದ್ದು ಗೊತ್ತೇ ಆಗಲಿಲ್ಲ. ಅವುಗಳಲ್ಲಿ ಕಾಳುಗಳು ಇಷ್ಟು, ಜೊಳ್ಳುಗಳು ಅಷ್ಟು.
ಹೊಸ ವರ್ಷಕ್ಕೆ ಬೆಳ್ಳಿಗೆರೆ
ವರ್ಷದ ಕೊನೆಯಲ್ಲಿ ನಿರ್ವಾತದ ನಡುವೆ ಚಿತ್ರಮಂದಿರಗಳಲ್ಲಿ ತೆರೆಕಂಡು, ಅನಿರೀಕ್ಷಿತ ಯಶಸ್ಸು ಪಡೆದದ್ದು ‘ಆ್ಯಕ್ಟ್–1978’. ಭ್ರಷ್ಟತೆಯ ವಿರುದ್ಧ ಸಿಡಿದೇಳುವ ತುಂಬುಗರ್ಭಿಣಿಯ ಭಾವುಕ ಚಿತ್ರಕಥೆಯು ‘ಒತ್ತೆಯಾಳುಗಳ ಥ್ರಿಲ್ಲರ್’ ಆಗಿಯೂ ಹೊಸತನ ತುಳುಕಿಸಿತು. ಯಾರೂ ಇಲ್ಲದ ಸಂದರ್ಭದಲ್ಲಿ ಚಿತ್ರಮಂದಿರ ಹೊಕ್ಕುವ ದಿಟ್ಟತನದ ನಿರ್ಧಾರ ಮಾಡಿ ಗೆದ್ದು, ಇನ್ನೊಂದು ದೊಡ್ಡ ಬಜೆಟ್‌ನ ಚಿತ್ರವನ್ನು (ಅಬ್ಬಕ್ಕ) ಘೋಷಿಸುವಷ್ಟು ಆತ್ಮವಿಶ್ವಾಸವನ್ನು ಪಡೆದ ನಿರ್ದೇಶಕ ಮಂಸೋರೆ ಹೊಸ ವರ್ಷಕ್ಕೆ ಅಗತ್ಯವಿದ್ದ ಬೆಳ್ಳಿಗೆರೆಯನ್ನು ಮೂಡಿಸಿದರು.
ಅರವಿಂದ್ ಕಾಮತ್ ನಿರ್ದೇಶನದ ‘ಅರಿಷಡ್ವರ್ಗ’ ಕೂಡ ಪ್ರಯೋಗದ ದೃಷ್ಟಿಯಿಂದ ಮುಖ್ಯವಾದ, ವರ್ಷದ ಕೊನೆಯ ಘಟ್ಟದಲ್ಲಿ ಬಿಡುಗಡೆಯಾದ ಚಿತ್ರ.
‘ಎಷ್ಟೋ ಜನ ಹೆದರಿಸಿದರೂ ನಾನು ಯಾರೂ ಇಲ್ಲದ ಹೊತ್ತಿನಲ್ಲಿ ಚಿತ್ರ ಬಿಡುಗಡೆ ಮಾಡುವ ಅವಕಾಶ ಇದೆಂದು ಭಾವಿಸಿದೆ. ಸಿನಿಮಾ ಮೇಲೆ ನಮಗೆಲ್ಲ ಆತ್ಮವಿಶ್ವಾಸವಿತ್ತು’ ಎಂಬ ಮಂಸೋರೆ ಪ್ರತಿಕ್ರಿಯೆ ಮುರಿದು ಕಟ್ಟುವ ಧೋರಣೆಗೂ ಕನ್ನಡಿ ಹಿಡಿಯುತ್ತದೆ.
ಒಟಿಟಿ ಚಿತ್ರಗಳಲ್ಲಿ ‘ಭೀಮಸೇನ’ನ ಬೀಸು
ಲಾ, ಫ್ರೆಂಚ್ ಬಿರಿಯಾನಿ (ಎರಡೂ ಪುನೀತ್ ಬ್ಯಾನರ್‌ನ ಚಿತ್ರಗಳು), ಭೀಮಸೇನ ನಳಮಹಾರಾಜ, ಮನೆ 13, ಭ್ರಮೆ, ಪೇಂಟರ್, ಭೂಮಿಕಾ, ತನಿಖೆ ಇವು ಒಟಿಟಿಯಲ್ಲಿ ತೆರೆಕಂಡ ಚಿತ್ರಗಳು. ‘ಲಾ’ ಗಟ್ಟಿ ವಸ್ತುವಿದ್ದರೂ ಜಾಳುಜಾಳು ನಿರೂಪಣೆಯಿಂದ ಸೊರಗಿದರೆ, ‘ಫ್ರೆಂಚ್ ಬಿರಿಯಾನಿ’ಯ ಈ ಕಾಲದ ಹಾಸ್ಯವಲ್ಲರಿ ನೋಡಿ ನಕ್ಕವರು ಕಡಿಮೆ. ಕಾರ್ತಿಕ್ ಸರಗೂರು ನಿರ್ದೇಶಿಸಿದ ‘ಭೀಮಸೇನ ನಳಮಹಾರಾಜ’ ನಿರೂಪಣಾ ವೈವಿಧ್ಯದ ಕಾರಣಕ್ಕೆ ಗುರುತಿಸಬೇಕಾದ ಚಿತ್ರ. ಅಮೆಜಾನ್ ಪ್ರೈಮ್‌ನಲ್ಲಿ ಇದು ಬಿಡುಗಡೆಯಾಗಿತ್ತು.
ಅಗಲಿದವರು
ನಟ ಚಿರಂಜೀವಿ ಸರ್ಜಾ ಅಕಾಲಿಕ ಸಾವು ಕಾಡಿತು. ಬುಲೆಟ್ ಪ್ರಕಾಶ್, ರಾಕ್‌ಲೈನ್ ಸುಧಾಕರ್, ಎಸ್.ಜಿ. ಸೋಮಶೇಖರ್, ಸುಶೀಲ್ ಗೌಡ, ಸಿದ್ಧರಾಜ ಕಲ್ಯಾಣ್‌ಕರ್, ಮಿಮಿಕ್ರಿ ರಾಜಗೋಪಾಲ್, ಹುಲಿವಾನ್ ಗಂಗಾಧರಯ್ಯ, ಬೂದಾಳ್ ಕೃಷ್ಣಮೂರ್ತಿ ಇವರೆಲ್ಲರೂ ಮೃತಪಟ್ಟ ವರ್ಷವಿದು. ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ನಿರ್ದೇಶಕ ವಿಜಯ ರೆಡ್ಡಿ, ಸಂಗೀತ ನಿರ್ದೇಶಕ ರಾಜನ್ ಅವರ ಸಾವು ಸುದೀರ್ಘ ಕಾಲ ಕಾಡಿತು. ಅವರಷ್ಟೇ ಅಲ್ಲದೆ ಹಿರಿಯ ನಟಿಯರಾದ ಕಿಶೋರಿ ಬಲ್ಲಾಳ್, ಶಾಂತಮ್ಮ, ನಿರ್ದೇಶಕ ಜಿ. ಮೂರ್ತಿ, ಶಾಹುರಾಜ್ ಶಿಂಧೆ, ಮೇಕಪ್ ಕೃಷ್ಣ, ಕೊಡಗನೂರು ಜಯಕುಮಾರ್, ಕಪಾಲಿ ಮೋಹನ್, ಛಾಯಾಗ್ರಾಹಕ ಎಸ್.ವಿ. ಶ್ರೀಕಾಂತ್, ನಿರ್ದೇಶಕ ಭರತ್, ನಿರ್ಮಾಪಕ ಬೇಕರಿ ಶ್ರೀನಿವಾಸ್ ಅಗಲಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.