ADVERTISEMENT

160 ಭಾಷೆಗಳಲ್ಲಿ ಬರಲಿದೆ ಅವತಾರ್–2: ಬಿಡುಗಡೆ ದಿನಾಂಕ ಘೋಷಿಸಿದ ನಿರ್ದೇಶಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 11:14 IST
Last Updated 28 ಏಪ್ರಿಲ್ 2022, 11:14 IST
'ಅವತಾರ್‌' ಮೊದಲ ಭಾಗದ ಪೋಸ್ಟರ್‌
'ಅವತಾರ್‌' ಮೊದಲ ಭಾಗದ ಪೋಸ್ಟರ್‌   

2009ರಲ್ಲಿ ತೆರೆಕಂಡು ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಲಿವುಡ್‌ ಸಿನಿಮಾ 'ಅವತಾರ್‌'ನ ಎರಡನೇ ಭಾಗಕ್ಕೆ 'ಅವತಾರ್‌: ದಿ ವೇ ಆಫ್‌ ವಾಟರ್‌' ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು 160 ಭಾಷೆಗಳಲ್ಲಿ ಇದೇ ವರ್ಷ (2022) ಡಿಸೆಂಬರ್‌ 16ರಂದು ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಜೇಮ್ಸ್‌ ಕ್ಯಾಮೆರಾನ್‌ ತಿಳಿಸಿದ್ದಾರೆ.

ಜೇಮ್ಸ್‌ ಅವರು, ಚಿತ್ರಮಂದಿರಗಳ ಮಾಲೀಕರ ವಾರ್ಷಿಕ ಸಮಾವೇಶ 'ಸಿನೆಮಾಕಾನ್‌'ನಲ್ಲಿ ಭಾಗವಹಿಸಿ ಮಾತನಾಡಿದರು. ಲಾಸ್‌ ವೆಗಾಸ್‌ನಲ್ಲಿ ಏಪ್ರಿಲ್‌ 25 ಆರಂಭವಾಗಿರುವ ಈ ಸಮಾವೇಶವು ಇಂದು (ಏ.28) ಕೊನೆಗೊಳ್ಳಲಿದೆ.

2009ರಲ್ಲಿ ಬಿಡುಗಡೆಯಾದ ಅವತಾರ್‌, ಜಾಗತಿಕವಾಗಿ ಸಾರ್ವಕಾಲಿಕ ಹೆಚ್ಚು (ಅಂದಾಜು ₹ 21 ಸಾವಿರ ಕೋಟಿ) ಗಳಿಕೆ ಕಂಡ ಸಿನಿಮಾ ಎನಿಸಿದೆ. ಮಾತ್ರವಲ್ಲದೆ ₹ 20 ಸಾವಿರ ಕೋಟಿಗಿಂತ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರವೂ ಹೌದು.

'ಅವತಾರ್‌: ದಿ ವೇ ಆಫ್‌ ವಾಟರ್‌'ಗೆ ಜೇಮ್ಸ್‌ ಕ್ಯಾಮೆರಾನ್‌ ನಿರ್ದೇಶನವಿದೆ. ಜೇಮ್ಸ್‌ ಅವರೊಂದಿಗೆ ಜಾನ್‌ ಲ್ಯಾನ್‌ಡೌ ಬಂಡವಾಳ ಹೂಡಿದ್ದಾರೆ. ಸಿಗೌರ್ನಿ ವೀವರ್‌, ಸ್ಟೇಫನ್‌ ಲ್ಯಾಂಗ್‌, ಕ್ಲಿಫ್‌ ಕರ್ಟೀಸ್‌, ಜೋಲ್‌ ಡೇವಿಡ್‌ ಮೂರ್‌, ಸಿಸಿಎಚ್‌ ಪೌಂಡರ್‌, ಎಡೀ ಫಾಲ್ಕೊ ಮತ್ತಿತರರು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

'ಅವತಾರ್‌' ಸರಣಿಯ ಒಟ್ಟು ಐದು ಸಿನಿಮಾಗಳು ತಯಾರಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.