ADVERTISEMENT

ಗಳಿಕೆಯಲ್ಲಿ ದಾಖಲೆ ನಿರ್ಮಿಸಿದ ಹಾಲಿವುಡ್‌ ಸಿನಿಮಾ 'ಜೋಕರ್ '

ನವೀನ ಕುಮಾರ್ ಜಿ.
Published 26 ಅಕ್ಟೋಬರ್ 2019, 6:56 IST
Last Updated 26 ಅಕ್ಟೋಬರ್ 2019, 6:56 IST
‘ಜೋಕರ್’ ಚಿತ್ರದಲ್ಲಿ ಜಾಕ್ವಿನ್ ಫಿನಿಕ್ಸ್
‘ಜೋಕರ್’ ಚಿತ್ರದಲ್ಲಿ ಜಾಕ್ವಿನ್ ಫಿನಿಕ್ಸ್   

‘ಜೋಕರ್...’

ಈ ಹೆಸರು ಕೇಳಿದರೆ ಹಾಲಿವುಡ್‌ನ ‘ದಿ ಡಾರ್ಕ್ ನೈಟ್’ ಸಿನಿಮಾದ ಖಳನಟ ಹೀತ್ ಲೇಜರ್‌ನ ನೆನಪು ಕಾಡದಿರದು. ಬ್ಯಾಟ್‌ಮ್ಯಾನ್ ಸರಣಿಯ ಚಿತ್ರದಲ್ಲಿ ಜೋಕರ್ ಪಾತ್ರಕ್ಕೆ ಹೊಸ ಆಯಾಮ ನೀಡಿದ ಹೆಗ್ಗಳಿಕೆ ಈತನಿಗೆ ಸಲ್ಲುತ್ತದೆ‌. ಡಿಸಿ ಕಾಮಿಕ್ಸ್‌ನ ಬ್ಯಾಟ್‌ಮ್ಯಾನ್ ಕಥೆಯಲ್ಲಿ ಬರುವ ಖಳನಟನ ಪಾತ್ರದ ಹೆಸರೇ ಜೋಕರ್. ಈ ಕಥೆ ಆಧರಿಸಿ ಹಾಲಿವುಡ್‌ನಲ್ಲಿ ಸರಣಿ ಚಿತ್ರಗಳು ನಿರ್ಮಾಣವಾಗಿವೆ.

2008ರಲ್ಲಿ ಬಿಡುಗಡೆಗೊಂಡಿದ್ದ ‘ದಿ ಡಾರ್ಕ್ ನೈಟ್’ ಕ್ರಿಸ್ಟೋಫರ್ ನೋಲನ್ ನಿರ್ದೇಶನದಡಿ ಮೂಡಿಬಂದಿರುವ ಬ್ಯಾಟ್‌ಮ್ಯಾನ್ ಸರಣಿಯ ಎರಡನೇ ಚಿತ್ರ. ಇದರಲ್ಲಿ ಲೇಜರ್ ಜೀವ ತುಂಬಿದ್ದ ಜೋಕರ್ ಪಾತ್ರ ವಿಶ್ವ ಸಿನಿಮಾದಲ್ಲೇ ಖಳನಟರ ಪಾತ್ರಗಳಿಗೊಂದು ಹೊಸ ಆಯಾಮ ನೀಡಿತು. ವಿಚಿತ್ರ ವೇಷ, ವಿಶಿಷ್ಟ ಶೈಲಿಯ ಮಾತುಗಾರಿಕೆ, ನಗು ನಗುತ್ತಲೇ ಕ್ರೌರ್ಯ ಪ್ರದರ್ಶಿಸುವ ಜೋಕರ್ ಪಾತ್ರದಲ್ಲಿ ಮಿಂಚಿದ್ದ ಲೇಜರ್ ಅಭಿನಯಕ್ಕೆ ಜಗತ್ತಿನಾದ್ಯಂತ ಸಿನಿಪ್ರಿಯರು ತಲೆದೂಗಿದ್ದರು. ಆದರೆ,ಈ ಸಿನಿಮಾ ಬಿಡುಗಡೆಗೂ ಮುನ್ನವೇ ಆಸ್ಟ್ರೇಲಿಯಾ ಮೂಲದ ಈ ನಟ ಬದುಕಿಗೆ ವಿದಾಯ ಹೇಳಿದ್ದು ದುರಂತ. ಈ ಸಿನಿಮಾದಲ್ಲಿ ಪ್ರತಿನಾಯಕ ಜೋಕರ್‌ನ ಅಭಿನಯ ಪ್ರಭೆಗೆ ನಾಯಕ ಬ್ಯಾಟ್‌ಮ್ಯಾನ್‌ನ ಶೋಭೆ ಮಸುಕಾಗಿತ್ತು.

ADVERTISEMENT

ಟಾಡ್ ಫಿಲಿಪ್ಸ್ ನಿರ್ದೇಶನದಡಿ ಈಚೆಗೆ ಬಿಡುಗಡೆಗೊಂಡಿರುವ ಹಾಲಿವುಡ್‌ನ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ‘ಜೋಕರ್’ ಮತ್ತೆ ಹೀತ್ ಲೇಜರ್‌ನ ಗತಕಾಲವನ್ನು ನೆನಪು ಮಾಡುತ್ತಿದೆ. ಇದರಲ್ಲಿ ಜೋಕರ್ ಪಾತ್ರಧಾರಿಯಾಗಿ ನಟಿಸಿರುವುದು ಅಮೆರಿಕದ ನಟ ಜಾಕ್ವಿನ್ ಫಿನಿಕ್ಸ್. ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ ಜಾಕ್ವಿನ್ ಅವರು ಲೇಜರ್‌ಗೆ ಸರಿಸಮನಾಗಿ ಅಭಿನಯಿಸಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ‌‌.

ಸಾಮಾನ್ಯವಾಗಿ ಜೋಕರ್ ಕಥಾಪಾತ್ರವು ಹಾಲಿವುಡ್‌ನ ಸೂಪರ್ ಹೀರೊ ಸಿನಿಮಾಗಳಲ್ಲಿ ಕಂಡುಬಂದರೂ ಇಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಇಲ್ಲಿನ ಜೋಕರ್ ಪಾತ್ರಕ್ಕೂ, ಬ್ಯಾಟ್‌ಮ್ಯಾನ್ ಸಿನಿಮಾಗಳ ಜೋಕರ್‌ಗೂ ಯಾವುದೇ ಸಂಬಂಧವಿಲ್ಲ. ಆದರೂ, ಡಿಸಿ ಕಾಮಿಕ್ಸ್ ಪ್ರೇರಣೆಯಿಂದಲೇ ಈ ಚಿತ್ರ ನಿರ್ಮಿಸಲಾಗಿದೆ ಎಂಬುದು ನಿರ್ದೇಶಕರ ಅಂಬೋಣ. ಸ್ಟ್ಯಾಂಡ್ ಅಪ್ ಕಾಮಿಡಿಯನ್‌ ತನ್ನ ವೃತ್ತಿಬದುಕಿನಲ್ಲಿ ವಿಫಲನಾಗುತ್ತಾನೆ. ಮುಂದೆ ಜೋಕರ್ ಪಾತ್ರ ಧರಿಸಿ ಕ್ರೌರ್ಯ ಕೃತ್ಯಗಳಿಗೆ ಇಳಿಯುತ್ತಾನೆ.‘ನಾನು ಚಿಕ್ಕವನಿದ್ದಾಗ ಜೋಕರ್ ಆಗುತ್ತೇನೆಂದು ಹೇಳುತ್ತಿದ್ದೆ. ಆಗ ಎಲ್ಲರೂ ನಗುತ್ತಿದ್ದರು. ಈಗ ಜೋಕರ್ ಆಗಿದ್ದೇನೆ. ನನ್ನ ಮಾತು ಕೇಳಿ ಯಾರೂ ನಗುವವರಿಲ್ಲ’ ಎಂದು ಜೋಕರ್ ಪಾತ್ರಧಾರಿ ವಿಷಾದದಿಂದ ಹೇಳುವ ಡೈಲಾಗ್ ಇಡೀ ಚಿತ್ರದ ಕಥನ ಕೇಂದ್ರವೂ ಆಗಿದೆ.

ಜೋಕರ್ ವೇಷತೊಟ್ಟು, ರಸ್ತೆಬದಿಯಲ್ಲಿ ಜಾಹೀರಾತು ಫಲಕ ಹಿಡಿದು ಜನರನ್ನು ಆಕರ್ಷಿಸುವ ಮೂಲಕ ಚಿತ್ರದ ನಾಯಕ ಹೊಟ್ಟೆ ಹೊರೆಯುತ್ತಿರುತ್ತಾನೆ. ಆತನಿಗೆ ದೊಡ್ಡ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಬೇಕೆಂಬ ಹಂಬಲ. ಅದಕ್ಕಾಗಿ ಸಾಕಷ್ಟು ಕಷ್ಟಪಟ್ಟರೂ ಯಶಸ್ಸು ಮರೀಚಿಕೆ. ಮುಂದೆ ಆತನ ಬದುಕಿನಲ್ಲಿ ಘಟಿಸುವ ಘಟನೆಗಳೇ ಆತನನ್ನು ಕ್ರೂರಿಯನ್ನಾಗಿಸುತ್ತವೆ.

ಅನಾರೋಗ್ಯಕ್ಕೆ ತುತ್ತಾದ ತಾಯಿಯನ್ನು ಮಗುವಿನಂತೆ ಆರೈಕೆ ಮಾಡುವ ನಾಯಕ ಸ್ನೇಹಮಯಿಯಾಗಿ ಕಂಡುಬರುತ್ತಾನೆ. ಆದರೆ, ಆತ ಜೋಕರ್ ವೇಷತೊಟ್ಟು ಹಿಂಸಾಕೃತ್ಯ ನಡೆಸಿ ಯಾವುದೇ ಪಶ್ಚಾತ್ತಾಪವಿಲ್ಲದೆ ನಿರಾಳಭಾವದಿಂದ ನಗುವಾಗ ಅಷ್ಟೇ ಭಯ ಹುಟ್ಟಿಸುತ್ತಾನೆ. ಹಾಸ್ಯಗಾರ, ಸೈಕೊ ಹೀಗೆ ಎರಡು ಶೇಡ್‌ಗಳಿರುವ ಜೋಕರ್ ಪಾತ್ರದಲ್ಲಿ ಜಾಕ್ವಿನ್ ಅವರದು ಮನೋಜ್ಞ ನಟನೆ.

ಇದುವರೆಗೆ ಜಗತ್ತಿನಲ್ಲಿ ಬಿಡುಗಡೆಗೊಂಡಿರುವ ಸೈಕಲಾಜಿಕಲ್‌ ಥ್ರಿಲ್ಲರ್ ಸಿನಿಮಾನಗಳ ಪೈಕಿ ಗಲ್ಲಾಪೆಟ್ಟಿಗೆಯಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಜೊತೆಗೆ, ಅತಿಹೆಚ್ಚು ಗಳಿಕೆ ಕಂಡಿರುವ ಜಗತ್ತಿನ ಏಳನೇ ಸಿನಿಮಾವೂ ಹೌದು. ಎರಡೂವರೆ ವಾರದಲ್ಲಿ ಈ ಸಿನಿಮಾ ಒಟ್ಟಾರೆ 737 ದಶಲಕ್ಷ ಡಾಲರ್‌ ಲಾಭ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.