ಲಾಸ್ ಏಂಜಲೀಸ್: ನಟಿ ಆ್ಯಂಬರ್ ಹರ್ಡ್ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಹಾಲಿವುಡ್ ಸ್ಟಾರ್ ಜಾನಿ ಡೆಪ್ ಅವರ ಪರವಾಗಿ ತೀರ್ಪು ಬಂದಿದೆ. ಮಾಜಿ ಪತಿ ಡೆಪ್‌ನಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ಆ್ಯಂಬರ್ 2018ರಲ್ಲಿ 'ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯಲ್ಲಿ ಬರೆದಿದ್ದರು.
ವಿಚಾರಣೆ ನಡೆಸಿದ ವರ್ಜಿನಿಯಾ ನ್ಯಾಯಾಧೀಶರು, ನಟ ಡೆಪ್‌ಗೆ ಮಾನಹಾನಿಯಾಗಿರುವುದು ಹಾಗೂ ಆ್ಯಂಬರ್ ಹರ್ಡ್ ಮಾಡಿದ ಆರೋಪಗಳ ವಿರುದ್ಧ ನಡೆಸಿದ ಹೋರಾಟದಲ್ಲಿ ಡೆಪ್ ಆಕೆಗೂ ಅವಮಾನ ಆಗುವ ರೀತಿ ಮಾಡಿರುವುದನ್ನೂ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಡೆಪ್‌ಗೆ ಪರಿಹಾರವಾಗಿ 10 ಮಿಲಿಯನ್ ಡಾಲರ್ ಮತ್ತು ದಂಡನೆಗೆ ಪರಿಹಾರವಾಗಿ 5 ಮಿಲಿಯನ್ ಡಾಲರ್ ನೀಡುವಂತೆ ಸೂಚಿಸಿದ್ದಾರೆ.
ಆ್ಯಂಬರ್ ಹರ್ಡ್ ಅವರಿಗೆ 2 ಮಿಲಿಯನ್ ಡಾಲರ್ ಪರಿಹಾರ ನೀಡಲು ಸೂಚಿಸಲಾಗಿದೆ.
ತೀರ್ಪಿನ ಕುರಿತು ಡೆಪ್, 'ಆರು ವರ್ಷಗಳ ನಂತರ ನ್ಯಾಯಾಧೀಶರು ನನ್ನ ಬದುಕನ್ನು ನನಗೆ ಮರಳಿಸಿದ್ದಾರೆ...' ಎಂದಿದ್ದಾರೆ. 'ಹೃದಯಕ್ಕೆ ಘಾಸಿಯಾಗಿದೆ' ಮತ್ತು 'ನಿರಾಶೆಯಾಗಿದೆ', ಇದು ಮಹಿಳೆಗೆ ಆಗಿರುವ ಹಿನ್ನಡೆಯಾಗಿದೆ ಎಂದು ಹರ್ಡ್ ಪ್ರತಿಕ್ರಿಯಿಸಿದ್ದಾರೆ.
'ದಿ ಸನ್' ಸುದ್ದಿ ಪತ್ರಿಕೆಯು ಡೆಪ್ ಅವರನ್ನು 'ಹೆಂಡತಿಯನ್ನು ಹೊಡೆಯುವವನು' ಎಂದು ಕರೆದಿತ್ತು. ಆ ಬಳಿಕ ಡೆಪ್ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
2009ರಲ್ಲಿ ಶುರುವಾದ ಪ್ರಣಯ...
ಪೈರೆಟ್ಸ್ ಆಫ್ ಕೆರಿಬಿಯನ್ ಚಿತ್ರ ಸರಣಿಯಲ್ಲಿ ಕ್ಯಾಪ್ಟನ್ ಜ್ಯಾಕ್ ಸ್ಪ್ಯಾರೊ ಪಾತ್ರದ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿದ ನಟ ಜಾನಿ ಡೆಪ್‌ಗೆ 2009ರಲ್ಲಿ ದಿ ರಮ್ ಡೈರಿ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ನಟಿ ಆ್ಯಂಬರ್ ಹರ್ಡ್ ಪರಿಚಯವಾಗಿತ್ತು. ಕೆಲವು ವರ್ಷಗಳ ನಂತರ ಜೊತೆಯಾಗಿ ಓಡಾಟ ನಡೆಸಿದ್ದ ಅವರು 2015ರಲ್ಲಿ ಮದುವೆಯಾದರು. ಆದರೆ, ಒಂದೇ ವರ್ಷದ ಅಂತರದಲ್ಲಿ ಮದುವೆಯು ವಿಚ್ಛೇದನಕ್ಕೆ ತಿರುಗಿತು. ಡ್ರಗ್ಸ್ ಮತ್ತು ಮದ್ಯದ ನಶೆಯಲ್ಲಿ ಡೆಪ್ ತನ್ನ ಮೇಲೆ ದೈಹಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ ಹರ್ಡ್, ವಿಚ್ಛೇದನ ನೀಡುವಂತೆ 2016ರಲ್ಲಿ ಅರ್ಜಿ ಹಾಕಿದ್ದರು.
2017ರಲ್ಲಿ ಅವರಿಗೆ ವಿಚ್ಛೇದನ ಸಿಕ್ಕಿತು. ತಾನು ಅನುಭವಿಸಿದ ಸಂಕಷ್ಟದ ಕುರಿತು ಹರ್ಡ್ 2018ರಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಯಲ್ಲಿ ಒಪೆಡ್ ಪುಟಕ್ಕಾಗಿ ಲೇಖನ ಬರೆದಿದ್ದರು. ಆ ಬಗ್ಗೆ ಆಕ್ಷೇಪಿಸಿದ್ದ ಡೆಪ್, ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.