ಬೆಂಗಳೂರು: ಚಿತ್ರರಂಗದ ಒಳಿತಿಗಾಗಿ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಿಂದ ಬುಧವಾರ ವಿಶೇಷ ಪೂಜೆ, ಹೋಮ ಮೊದಲಾದ ದೇವತಾ ಕಾರ್ಯಗಳನ್ನು ನಡೆಸಲಾಯಿತು. ಚಿತ್ರರಂಗದ ಅನೇಕ ನಟ–ನಟಿಯರು ಇದರಲ್ಲಿ ಭಾಗಿಯಾಗಿದರು.
ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ ಮಂಗಳವಾರ ಸಂಜೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಸಂಘದ ಅಧ್ಯಕ್ಷ ಮತ್ತು ನಟ ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷಾ ಬಲಿ ಮೊದಲಾದ ದೇವತಾ ಕಾರ್ಯಗಳು ನಡೆದವು.
ಹಿರಿಯ ನಟಿ ಗಿರಿಜಾ ಲೋಕೇಶ್, ನಟರಾದ ಶರಣ್, ಜಗ್ಗೇಶ್, ಲವ್ಲಿ ಸ್ಟಾರ್ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಅಭಿಷೇಕ್ ಅಂಬರೀಶ್, ಗುರುಕಿರಣ್, ಪದ್ಮಜಾ ರಾವ್ ಸೇರಿದಂತೆ ಚಿತ್ರರಂಗದ ಅನೇಕರು ಭಾಗಿಯಾದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಟ ಜಗ್ಗೇಶ್, ‘ನಟ ದರ್ಶನ್ ಬಿಡುಗಡೆಗಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂಬ ತಪ್ಪು ಮಾಹಿತಿ ಹಬ್ಬಿದೆ. ದರ್ಶನ್‌ಗಾಗಿ ಹೋಮ ಮಾಡಿದ್ದರೆ ನಾನು ಭಾಗಿಯಾಗುತ್ತಿರಲಿಲ್ಲ. ಆದರೆ ಇದು ಕಲಾವಿದರು ಹಾಗೂ ಚಿತ್ರರಂಗದ ಒಳಿತಿಗಾಗಿ ನಡೆದಿದ್ದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.