ಬೆಂಗಳೂರು: ಪ್ರಭಾಸ್–ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಸಲಾರ್’ ಸಿನಿಮಾದ ಎರಡನೇ ಭಾಗ 2026ರಲ್ಲಿ ತೆರೆಕಾಣಲಿದೆ. ಇದರ ಜೊತೆಗೆ ನಟ ಪ್ರಭಾಸ್ ಅವರ ಇನ್ನೆರಡು ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್‌ನಿರ್ಮಾಣ ಮಾಡಲಿದೆ. ಈ ಎರಡೂ ಸಿನಿಮಾಗಳು ಕ್ರಮವಾಗಿ 2027 ಹಾಗೂ 2028ರಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಹಾಗೂ ತೆಲುಗಿನಲ್ಲಿ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಹೊಂಬಾಳೆ ಹೊಸ ಘೋಷಣೆ ಮಾಡಿದೆ. ‘ಸಲಾರ್’ ಸಿನಿಮಾವನ್ನು ‘ಕೆ.ಜಿ.ಎಫ್.’ನಂತೆ ಎರಡು ಭಾಗಗಳಲ್ಲಿ ನೀಲ್ ಯೋಜಿಸಿದ್ದರು. ಸಿನಿಮಾದ ಮೊದಲ ಭಾಗ ‘ಸೀಸ್ ಫೈರ್’ 2023ರಲ್ಲಿ ತೆರೆಕಂಡಿತ್ತು.
ಹೊಂಬಾಳೆ ಫಿಲ್ಮ್ಸ್‌ನಡಿ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡಿದ್ದರು. ಸದ್ಯ ನೀಲ್ ನಟ ಜೂನಿಯರ್ ಎನ್‌ಟಿಆರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾ 2026ರ ಜನವರಿ 9ರಂದು ಬಿಡುಗಡೆಯಾಗಲಿದೆ.
ಪ್ರಭಾಸ್ ಅವರೊಂದಿಗೆ ಭಾರತೀಯ ಸಿನಿಮಾವನ್ನು ಸಂಭ್ರಮಿಸುವ ಹಾಗೂ ನಮ್ಮ ಸಿನಿಮಾವನ್ನು ಜಗತ್ತಿನ ಮುಂದೆ ಇಡುವ ಮೂರು ಸಿನಿಮಾಗಳ ಪಯಣಕ್ಕೆ ವೇದಿಕೆ ಸಿದ್ಧವಾಗಿದ್ದು, ಸಲಾರ್–2ನಿಂದ ಇದು ಆರಂಭವಾಗಲಿದೆ ಎಂದು ಹೊಂಬಾಳೆ ತಿಳಿಸಿದೆ.
ಕನ್ನಡದಲ್ಲಿ ‘ಕೆ.ಜಿ.ಎಫ್ ಚಾಪ್ಟರ್ 2’ ಬಳಿಕ ಟಾಲಿವುಡ್‌ಗೆ ನೀಲ್ ಹೆಜ್ಜೆ ಇಟ್ಟಿದ್ದರು. ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಸನ್ ಹೀಗೆ ಎಲ್ಲ ಭಾಷೆಯ ಕಲಾವಿದರನ್ನೊಳಗೊಂಡ ‘ಸಲಾರ್’ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು.
ಸುಮಾರು ₹400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣಗೊಂಡಿತ್ತು. ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದರು. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಚಿತ್ರಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.