ನವದೆಹಲಿ: ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ತಪ್ಪಿಸಿಕೊಳ್ಳಬೇಡಿ. ಹೋಗಿ ನೋಡಿ’ ಎಂದು ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.
ನಟ ಆಮೀರ್ ಖಾನ್ ಅಭಿನಯದ ಚಿತ್ರ ‘ಲಾಲ್ ಸಿಂಗ್ ಚಡ್ಡಾ’, ಆ 11ರಂದು ಜಗತ್ತಿನಾದ್ಯಂತ ಬಿಡುಗಡೆಗೊಂಡಿತ್ತು. ಸಿನಿಮಾನಕ್ಕೆ ‘ಇಂಟರ್‌ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ)’ ಕಂಪನಿಯ ವೆಬ್‌ಸೈಟ್‌ನಲ್ಲೂ ಕಡಿಮೆ ರೇಟಿಂಗ್ ದೊರೆತಿತ್ತು.
ಅಲ್ಲದೇ, ದೇಶದ ಹಲವೆಡೆ ಸಿನಿಮಾ ಪ್ರದರ್ಶನ ರದ್ದಾದ ಬಗ್ಗೆಯೂ ಶುಕ್ರವಾರ ವರದಿಯಾಗಿತ್ತು. ಈ ಮಧ್ಯೆ ಸಿನಿಮಾ ಬಗ್ಗೆ ನಟ ಹೃತಿಕ್ ರೋಷನ್ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಈಗಷ್ಟೇ ಲಾಲ್ ಸಿಂಗ್ ಚಡ್ಡಾ ವೀಕ್ಷಿಸಿದೆ. ಈ ಚಿತ್ರ ಹೃದಯ ಸ್ಪರ್ಶಿ ಅನುಭವ ನೀಡಿದೆ. ಪ್ಲಸ್– ಮೈನಸ್ ಏನೇ ಇರಬಹುದು. ಅದನ್ನು ಪಕ್ಕಕ್ಕಿಟ್ಟರೆ ಈ ಚಿತ್ರ ಭವ್ಯವಾದದ್ದು. ಇಂಥ ರತ್ನವನ್ನು ಕಳೆದುಕೊಳ್ಳಬೇಡಿ. ಹೋಗಿ, ಈಗಲೇ ಹೋಗಿ ನೋಡಿ. ಚಿತ್ರವನ್ನು ನೋಡಿ. ಸಿನಿಮಾ ಸುಂದರವಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನೊಂದಡೆ ‘ಲಾಲ್ ಸಿಂಗ್ ಚಡ್ಡಾ‘ ಚಲನಚಿತ್ರದ ವಿರುದ್ಧ ಹಿಂದೂ ಸಂಘಟನೆಯ ಸದಸ್ಯರು ಗುರುವಾರ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು. ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಆಮೀರ್ ಖಾನ್ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದಲ್ಲಿ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ನಿರ್ಮಾಣ ಘೋಷಣೆಯಾದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಒಳಗಾಗುತ್ತಲೇ ಬಂದಿದೆ. ಸಿನಿಮಾವನ್ನು ಬಹಿಷ್ಕರಿಸುವಂತೆ ಬಿಡುಗಡೆಗೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆದಿತ್ತು. ಅಭಿಯಾನಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಆಮೀರ್ ಖಾನ್ ‘ದಯವಿಟ್ಟು ಸಿನಿಮಾ ನೋಡಿ’ ಎಂದು ಪ್ರೇಕ್ಷಕರನ್ನು ವಿನಂತಿಸಿದ್ದರು. ಚಿತ್ರ ಬಿಡುಗಡೆಯ ನಂತರವೂ ಅದರ ಸುತ್ತ ಪರ, ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.