ಬೆಂಗಳೂರು: ನಟ ಹೃತಿಕ್ ರೋಷನ್ ತಂದೆ, ಚಿತ್ರ ನಿರ್ಮಾಪಕ ರಾಕೇಶ್ ರೋಷನ್(69) ಅವರಿಗೆ ಗಂಟಲು ಕ್ಯಾನ್ಸರ್ ಪತ್ತೆಯಾಗಿದ್ದು, ಮಂಗಳವಾರ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಹೃತಿಕ್ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಸಹಿತ ಸಂದೇಶ ಹಂಚಿಕೊಂಡಿದ್ದಾರೆ.
‘ಶಸ್ತ್ರ ಚಿಕಿತ್ಸೆಯ ದಿನವೂ ಜಿಮ್ ತಪ್ಪಿಸಿಕೊಂಡಿಲ್ಲ’ ಎಂಬುದನ್ನು ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ‘ಇಂದು ಬೆಳಿಗ್ಗೆ ಒಂದು ಚಿತ್ರಕ್ಕಾಗಿ ಅಪ್ಪನನ್ನು ಕೇಳಿದೆ..ಶಸ್ತ್ರ ಚಿಕಿತ್ಸೆಯ ದಿನವೂ ಅವರು ಜಿಮ್ ತಪ್ಪಿಸಿಕೊಳ್ಳುವುದಿಲ್ಲ ಎಂದು ತಿಳಿದಿತ್ತು. ನನಗೆ ತಿಳಿದಿರುವವರಲ್ಲಿ ಅವರೇ ಅತ್ಯಂತ ಬಲಶಾಲಿ ವ್ಯಕ್ತಿ. ಪ್ರಾಥಮಿಕ ಹಂತದಲ್ಲಿರುವ ಗಂಟಲು ಕ್ಯಾನ್ಸರ್‌ಕೆಲವು ದಿನಗಳ ಹಿಂದಷ್ಟೇ ಪತ್ತೆಯಾಗಿತ್ತು. ಅದರ ವಿರುದ್ಧದ ಹೋರಾಟಕ್ಕೆ ಪೂರ್ಣ ವಿಶ್ವಾಸದೊಂದಿಗೆ ಅವರು ಅಣಿಯಾಗಿದ್ದಾರೆ,...’ ಎಂದಿದ್ದಾರೆ.
ರಾಕೇಶ್ ರೋಷನ್ ಸಿನಿಮಾ ಪಯಣ: 1970ರಲ್ಲಿ ಘರ್ ಘರ್ ಕಿ ಕಹಾನಿ ಚಿತ್ರದೊಂದಿಗೆ ನಟನಾಗಿ ರಾಕೇಶ್ ರೋಷನ್ ಸಿನಿಮಾ ಪಯಣ ಆರಂಭಿಸಿದರು. ಬುನಿಯಾದ್, ಖೂಬ್‌ಸುರತ್, ಕಾಮ್‌ಚೋರ್ ಹಾಗೂ ಭಗವಾನ್ ದಾದಾ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 1987ರಲ್ಲಿ ಖುದ್‌ಗರ್ಜ್ ಸಿನಿಮಾ ಮೂಲಕ ನಿರ್ದೇಶಕರಾದರು. ಖೂನ್ ಭಾರಿ ಮಾಂಗ್, ಕಿಂಗ್ ಅಂಕಲ್, ಕೋಯಲಾ ಹಾಗೂ ಕರಣ್ ಅರ್ಜುನ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ತನ್ನ ಪುತ್ರ ಹೃತಿಕ್‌ನನ್ನು 2000ರಲ್ಲಿ ’ಕಹೋ ನಾ..ಪ್ಯಾರ್ ಹೇ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು. ಮುಂದೆ, ಕೋಯಿ ಮಿಲ್ ಗಯಾ, ಕ್ರಿಷ್ ಸರಣಿಯ ಚಿತ್ರಗಳಲ್ಲಿ ತಂದೆ ಮಗನಿಗೆ ಆಕ್ಷನ್ ಕಟ್ ಹೇಳಿದರು. ’ಕಾಬಿಲ್’ ಹೃತಿಕ್‌ಗಾಗಿ ನಿರ್ಮಿಸಿದ ಕೊನೆಯ ಚಿತ್ರ. ಅವರ ಮುಂದಿನ ಸಿನಿಮಾ ಹೃತಿಕ್ ಪ್ರಮುಖ ಪಾತ್ರದಲ್ಲಿರುವ ’ಕ್ರಿಷ್ 4’. ಅದಕ್ಕೂ ಮುನ್ನ ಸೂಪರ್ 30 ಚಿತ್ರದ ಬಿಡುಗಡೆಗೆ ಹೃತಿಕ್ ಎದುರು ನೋಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.