ಶ್ವೇತಶುಭ್ರ ವೇಷಧಾರಿಯಾಗಿ ಹುಮಾ ಖುರೇಷಿ ಹೆಜ್ಜೆ ಹಾಕುತ್ತಿದ್ದರೆ ನೆರೆದವರಿಂದ ಕರತಾಡನ, ಸಿಳ್ಳೆಗಳ ಸ್ವಾಗತ. ನವದೆಹಲಿಯಲ್ಲಿ ಭಾನುವಾರ ನಡೆದ ಫ್ಯಾಷನ್ ಶೋ ಒಂದರಲ್ಲಿ ಹುಮಾ ಕ್ಯಾಟ್ ವಾಕ್ ಮಾಡಿದರು.
ಸಲಿಂಗ ಕಾಮಿಗಳಿಗಾಗಿ (ಎಲ್‌ಜಿಬಿಟಿಕ್ಯು) ಸಮುದಾಯಕ್ಕಾಗಿ ಲೋಟಸ್ ಪ್ರಸಾಧನ ಕಂಪನಿ ‘ಕಾಮನಬಿಲ್ಲು’ ಶೋನಲ್ಲಿ ಅವರು ಭಾಗವಹಿಸಿದ್ದರು. ನಲ್ವತ್ತು ವಸ್ತ್ರವಿನ್ಯಾಸಕರು ಈ ಶೋನಲ್ಲಿ ತಮ್ಮ ಸಂಗ್ರಹವನ್ನು ಪ್ರದರ್ಶಿಸಿದರು. ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಲೋಟಸ್ ಮೇಕಪ್ ಇಂಡಿಯಾ ಫ್ಯಾಷನ್ ವೀಕ್ ಸ್ಪ್ರಿಂಗ್ ಸಮ್ಮರ್ 2019 ಶೋ ಆಯೋಜಿಸಿತ್ತು. ಈ ಶೋನಲ್ಲಿ ಹುಮಾ ನಡಿಗೆ ಹಾಕಿ, ಮುಗುಳ್ನಕ್ಕು ಎಲ್ಲರ ಗಮನಸೆಳೆದರು.
‘ಡೇಢ್ ಇಷ್ಕಿಯಾಂ’ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಸರಿಸಮವಾಗಿ ನಟಿಸಿದ್ದ ಈ ಸುಂದರಿ, ಇದೀಗ ಜಾಹೀರಾತು ಹಾಗೂ ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಟೂ ಚಳವಳಿಯನ್ನು ಬೆಂಬಲಿಸಿದವರಲ್ಲಿ ಹುಮಾ ಸಹ ಒಬ್ಬರಾಗಿದ್ದರು. ‘ಗ್ಯಾಂಗ್ ಆಫ್ ವಾಸೇಪುರ’ ಚಿತ್ರದಲ್ಲಿ ನವಾಜುದ್ದಿನ್ ಸಿದ್ದಿಖಿಯನ್ನು ಚುಂಬಿಸುವುದಿಲ್ಲ ಎಂದು ಹೇಳಿ ಸುದ್ದಿಯಾಗಿದ್ದರು ಹುಮಾ.
ತುಟಿಗೆ ತುಟಿ ಬೆಸೆಯುವುದಿಲ್ಲ ಎಂದು ಆ ಪಾತ್ರಕ್ಕೆ ಈ ಮುತ್ತು ಅಗತ್ಯವಿದ್ದರೂ ನಿರ್ದೇಶಕ ಅನುರಾಗ್ ಬಳಿ ನಿಷ್ಠುರವಾಗಿಯೇ ಹೇಳಿದ್ದರು ಹುಮಾ. ಇದಾದ ನಂತರ ನವಾಜುದ್ದಿನ್, ನಾನು ಮುತ್ತಿಡುವಂತಿಲ್ಲ ಎಂಬುದನ್ನು ಒಪ್ಪುತ್ತೇನೆ ಎಂಬ ಹೇಳಿಕೆಯನ್ನೂ ನೀಡಿದ್ದರು. ಅದೆಲ್ಲಕ್ಕೂ ಗಾಢಮೌನ ವಹಿಸಿದ್ದ ಹುಮಾ ತಮ್ಮ ನಿಲುವಿನಲ್ಲಿ ಬದಲಾವಣೆಯನ್ನೇನೂ ತಂದಿರಲಿಲ್ಲ.
ಬಾಲಿವುಡ್‌ನಲ್ಲಿ ಹುಮಾ ನೆಲೆಯೂರಲು ಕಾರಣವಾದ ಚಿತ್ರ ಅದು. ಅರ್ಜುನ್ ಕಪೂರ್ ಜೊತೆಗಿನ ಬೋಲ್ಡ್ ದೃಶ್ಯದಲ್ಲಿ ಹುಮಾ ಕಾಣಿಸಿಕೊಂಡಾಗಲೂ ಈ ಹಳೆಯ ವಾದ ಮತ್ತೆ ಹೊಗೆಯೆಬ್ಬಿಸಿತ್ತು. ಯಾವುದಕ್ಕೂ ಸೊಪ್ಪು ಹಾಕದ ಹುಮಾ ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದರು.
‘ಏಕ್ ಥಿ ಡಾಯನ್‘, ‘ಬದಲಾಪುರ’, ‘ಜಾಲಿ ಎಲ್‌ಎಲ್‌ಬಿ 2’ ಮಂತಾದ ಚಿತ್ರಗಳಲ್ಲಿ ನಟಿಸಿರುವ ಹುಮಾ ಪಾತ್ರಗಳ ಆಯ್ಕೆಯನ್ನು ತಾವೇ ಮಾಡಿಕೊಳ್ಳುತ್ತಾರೆ. ‘ಲವ್‌ಶವ್ ಚಿಕನ್ ದಿ ಖುರಾನಾ’, ‘ಡಿ ಡೇ‘ ಹೀಗೆ ಆರು ವರ್ಷಗಳಲ್ಲಿ ಡಜನ್ ಚಿತ್ರಗಳನ್ನು ಮಾಡಿರುವ ಹುಮಾಗೆ ‘ಗ್ಯಾಂಗ್ ಆಫ್ ವಾಸೇಪುರ್’ ಲೈಫ್ ಚೇಂಜಿಂಗ್ ಚಿತ್ರ ಎಂದು ಒಪ್ಪಿಕೊಳ್ಳುತ್ತಾರೆ.
ಮೇಕಪ್‌ನಲ್ಲಿ ಯಾವಾಗಲೂ ರಾಜಿಯಾಗದ ಹುಮಾ ತಮ್ಮ ಕಣ್ಣು ಹಾಗೂ ತುಟಿಗಳಿಗೆ ವಿಶೇಷ ಗಮನ ನೀಡುತ್ತಾರೆ. ಕಣ್ಣಿಗೆ ಕಾಡಿಗೆ, ಐಲೈನರ್‌ಗಳಿಂದ ಎದ್ದು ಕಾಣುವಂತೆ ಮಾಡುವ ಹುಮಾ, ತುಟಿಗಳಿಗೂ ಗಾಢ ಬಣ್ಣವನ್ನೇ ಬಳಸುತ್ತಾರೆ. ಚಲನಚಿತ್ರಗಳಲ್ಲಿಯೂ ಅಗಲದ ತಂಪು ಕನ್ನಡಕ, ಬಣ್ಣಬಣ್ಣದ ಉಡುಗೆಗಳಲ್ಲಿ ಮಿಂಚುವ ಹುಮಾ ನಿಜಜೀವನದಲ್ಲಿ ಮಾತ್ರ ಆರಾಮದಾಯಕ ಉಡುಗೆಯೇ ತಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಎಂದು ದಾಖಲಿಸುತ್ತಾರೆ.
ಸದಾ ತಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್ ಇರಿಸಿಕೊಳ್ಳುವ ಈ ಚೆಲುವೆ ಆಗಾಗ ತುಟಿ ಸವರಿಕೊಳ್ಳುವುದನ್ನು ಮರೆಯುವುದಿಲ್ಲ. ಇಂತಿಪ್ಪ ಹುಮಾ ಇದೀಗ ರೆಟ್ರೊ ಶೈಲಿಯಲ್ಲಿ ಮೇಕಪ್ ಮಾಡಿಕೊಂಡು ದಂತವರ್ಣದ ಗೌನ್‌ನಲ್ಲಿ ಮಿಂಚಿದ್ದಾರೆ.
⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.