1988ರಲ್ಲಿ ಬಿಡುಗಡೆಯಾದ ‘ರಣಧೀರ’ ಸಿನಿಮಾದಿಂದ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಸ್ಥಾನ ಗಿಟ್ಟಿಸಿಕೊಂಡ ಚೆಲುವೆ ನಟಿ ಖುಷ್ಬೂ. ‘ಅಂಜದ ಗಂಡು, ಯುಗಪುರುಷ, ಪ್ರೇಮಾಗ್ನಿ, ಹೃದಯಗೀತೆ, ಪಾಳೇಗಾರ, ಜೀವನದಿ’ ಸೇರಿದಂತೆ 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಈ ಬೆಡಗಿ ಕನ್ನಡಿಗರ ಹೃದಯದಲ್ಲಿ ಇಂದಿಗೂ ‘ರಣಧೀರ’ನ ರಾಧಾಳಾಗಿಯೇ ಜೀವಂತ.
ಚುನಾವಣಾ ಪ್ರಚಾರಕ್ಕಾಗಿ ಕಳೆದ ವಾರ ಬೆಂಗಳೂರಿನಲ್ಲಿದ್ದರು ಖುಷ್ಬೂ. ಈ ವೇಳೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರುಕನ್ನಡ ಸಿನಿಮಾ ಕ್ಷೇತ್ರ ಹಾಗೂ ನಟ ರವಿಚಂದ್ರನ್ ಅವರ ಬಗ್ಗೆ ಅಭಿಮಾನ ಹಾಗೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಮೊದಲ ಸಿನಿಮಾದಿಂದಲೇ ಕನ್ನಡದಲ್ಲಿ ಇಷ್ಟೊಂದು ಪ್ರೀತಿ ಗಳಿಸುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ.ನಾನು ತಮಿಳು ಸಿನಿಕ್ಷೇತ್ರದಲ್ಲಿ ಕೆಲಸ ಮಾಡುವ ಮೊದಲಿನಿಂದಲೇ ಕನ್ನಡ ಸಿನಿರಂಗದ ಭಾಗವಾಗಿದ್ದೆ. ಬೆಂಗಳೂರಿನ ನನ್ನ ನೆನಪುಗಳು ಸದಾ ಜೀವಂತವಾಗಿರುತ್ತದೆ. ಈಗಲೂ ನಾನು ಎಂ.ಜಿ. ರಸ್ತೆಗೆ ಐಸ್‌ಕ್ರೀಂ ತಿನ್ನಲು ಹೋಗುತ್ತಿದ್ದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಇವೆಲ್ಲವನ್ನೂ ಹೊರತು ಪಡಿಸಿ ನನ್ನ ಖಜಾನೆಯಲ್ಲಿ ಬತ್ತಲಾರದ ಆಸ್ತಿ ಎಂದರೆ ರವಿಚಂದ್ರನ್ ಸರ್ ಹಾಗೂ ಅವರ ಕುಟುಂಬದೊಂದಿಗಿನ ಸ್ನೇಹ. ಅನೇಕ ವರ್ಷಗಳಿಂದ ನಮ್ಮ ನಡುವಿನ ಸ್ನೇಹ ಹಾಗೇ ಇದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮತ್ತೆ ರವಿಚಂದ್ರನ್ ಅವರ ಜೊತೆ ನಟಿಸುವ ಬಗ್ಗೆ ಮಾತನಾಡಿದ್ದ ಖುಷ್ಬೂ ‘ನನಗೆೆ ಹಾಗೂ ರವಿ ಸರ್‌ಗೆ ಈಗ ಹೊಂದುವಂತಹ, ಉತ್ತಮ ಕಥೆ ಸಿಕ್ಕರೆ ಖಂಡಿತ ನನಗೆ ಮರಳಿ ಅವರೊಂದಿಗೆ ಕೆಲಸ ಮಾಡುವ ಬಯಕೆ ಇದೆ. ಈಗಲೂ ಜನರು ನಮ್ಮನ್ನು ಬೆಸ್ಟ್ ಜೋಡಿ ಎಂದೇ ಸ್ಮರಿಸುತ್ತಾರೆ. ಆ ಕಾರಣಕ್ಕೆ ನಾವು ಮಾಡುವ ಸಿನಿಮಾ ಜನರಲ್ಲಿ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಾಗಬೇಕೇ ಹೊರತು ಅಭಿಮಾನಿಗಳನ್ನು ನಿರಾಶೆಗೊಳಿಸುವಂತಿರಬಾರದು. ಒಂದು ಅಸಮಾನ್ಯ ಕಥೆ ಸಿಗುವವರೆಗೂ ನಾವು ಕಾಯುತ್ತೇವೆ’ ಎಂದಿದ್ದಾರೆ.
‘ರಣಧೀರ ಸಿನಿಮಾ ಬಂದು 3 ದಶಕಗಳಾಗಿವೆ. ಈಗಲೂ ಜನರು ನಮ್ಮನ್ನು ಪ್ರೀತಿಸುವುದು ಹಾಗೂ ಗೌರವ ನೀಡುತ್ತಿರುವುದನ್ನು ನೋಡಿದರೆ ಖುಷಿ ಎನ್ನಿಸುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.