ಬೆಂಗಳೂರು: ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ಗುರುವಾರ ಸಂಜೆ ನಡೆದ ಸಮಾರಂಭಕ್ಕೆ ಗೈರಾಗಿದ್ದಕ್ಕೆ ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸುದೀಪ್ ಗೈರು: ಅಭಿಮಾನಿಗಳ ಆಕ್ರೋಶ
ಕಾರ್ಯಕ್ರಮಕ್ಕೆ ಸುದೀಪ್ ಗೈರಾಗಿದ್ದರಿಂದ ಬೇಸರಗೊಂಡ ಅಭಿಮಾನಿಗಳು ವೇದಿಕೆ ಮುಂಭಾಗದ ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ವೇದಿಕೆ ಬಳಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ನೆಲಕ್ಕುರುಳಿಸಿದ ಅಭಿಮಾನಿಗಳನ್ನು ನಿಯಂತ್ರಿಸಲು ಮುಂದಾದ ಪೊಲೀಸರ ಪೈಕಿ ಮೂವರು ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಟ್ವೀಟ್ ಮಾಡಿರುವ ಸುದೀಪ್, ‘ಸ್ನೇಹಿತರಿಗೆ ನಲ್ಮೆಯ ನಮಸ್ಕಾರ -ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ’ ಎಂದು ಹೇಳಿದ್ದಾರೆ.
‘ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ. ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. ಶಾಂತರೀತಿಯಿಂದ ವರ್ತಿಸಿ’ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸುವ ನಿರೀಕ್ಷೆ ಹೊಂದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಮಹರ್ಷಿ ವಾಲ್ಮೀಕಿ ಪೀಠದ ಸಭಾಂಗಣದೆದುರು ನೆರೆದಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಅಭಿಮಾನಿಗಳು ಸುದೀಪ್ ಪರ ಜೈಕಾರ ಕೂಗಿ ಕೇಕೆ ಹಾಕಿದ್ದರು. ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಆಗಾಗ ಎಚ್ಚರಿಕೆ ನೀಡಿ ಅಭಿಮಾನಿಗಳನ್ನು ಸುಮ್ಮನಾಗಿಸುತ್ತಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣ ಪೂರ್ಣಗೊಳಿಸಿ ತೆರಳಿದ ನಂತರವೂ ಸುದೀಪ್ ಬಾರದ್ದರಿಂದ ತಾಳ್ಮೆ ಕಳೆದುಕೊಂಡ ಅಭಿಮಾನಿಗಳು ಬ್ಯಾರಿಕೇಡ್‌ಗಳು ನೆಲಕ್ಕುರುಳಿಸಿ ವೇದಿಕೆಯತ್ತ ನುಗ್ಗತೊಡಗಿದರು. ಪ್ಲಾಸ್ಟಿಕ್ ಕುರ್ಚಿಗಳನ್ನು ಪುಡಿ ಗಟ್ಟಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಬ್ಯಾರಿಕೇಡ್‌ಗಳನ್ನು ಎಸೆದಿದ್ದರಿಂದ ಗಾಯಗೊಂಡ ಮೂವರು ಪೊಲೀಸರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬೆಂಗಳೂರಿನಲ್ಲಿ ಆಯೋಜಿಸಿರುವ ಏರ್‌ಶೋ ಕಾರಣ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶ ದೊರೆಯದೇ ಸುದೀಪ್ ಜಾತ್ರಾ ಸಮಾರಂಭಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಆಯೋಜಕರು ಘೋಷಿಸಿದ್ದರಿಂದ ಅಭಿಮಾನಿಗಳು ನಿರಾಸೆಯಿಂದ ವಾಪಸ್ಸಾದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.