ADVERTISEMENT

ಸಾಂಸ್ಕೃತಿಕ ಆಚರಣೆಗಳನ್ನು ಅಪಹಾಸ್ಯ ಮಾಡದಿರಿ: ಸಂವಾದದಲ್ಲಿ ರಿಷಬ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 3:14 IST
Last Updated 26 ನವೆಂಬರ್ 2022, 3:14 IST
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ   

ಮುಂಬೈ: ಭಾರತಕೃಷಿ ಪ್ರಧಾನ ದೇಶವಾಗಿದೆ.ನಮ್ಮ ಆಚರಣೆಗಳು, ನಂಬಿಕೆಗಳು, ಜೀವನ ವಿಧಾನಗಳು ಹೆಚ್ಚಾಗಿ ಕೃಷಿಯನ್ನು ಆಧರಿಸಿವೆ. ಇದಕ್ಕೆ ಸರಿಯಾಗಿ, ಭಾರತದ ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ಆಚರಣೆಯನ್ನು ಹೊಂದಿದ್ದು ಇಲ್ಲಿನ ಜನರು ಜೀವನೋಪಾಯವನ್ನು ರಕ್ಷಿಸುವ ನೈಸರ್ಗಿಕ ದೇವತೆಯನ್ನು ನಂಬುತ್ತಾರೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದರು.

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿನಿಧಿಸುವುದು ಮತ್ತು ಹೊಸ ಮಾರುಕಟ್ಟೆಗಳನ್ನು ಗುರುತಿಸುವುದು' ವಿಷಯದ ಕುರಿತು ಟಿ. ತ್ಯಾಗರಾಜನ್ ಅವರೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.

ರಿಷಬ್ ಶೆಟ್ಟಿ ಅವರು ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡಿ ಯಶಸ್ಸು ಕಂಡವರು. 'ಉಳಿದವರು ಕಂಡಂತೆ', 'ಕಿರಿಕ್ ಪಾರ್ಟಿ', 'ಕಥಾ ಸಂಗಮ', 'ರಿಕ್ಕಿ' ಮುಂತಾದ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ’ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅವರ ನಿರ್ದೇಶನ, ನಟನೆಯಲ್ಲಿ ಮೂಡಿಬಂದಿರುವ ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಯಶಸ್ಸು ಮತ್ತು ಜನಪ್ರಿಯತೆ ಕಂಡಿರುವ 'ಕಾಂತಾರ' ವಿಮರ್ಶಾತ್ಮಕವಾಗಿ ಕೂಡ ಮೆಚ್ಚುಗೆ ಪಡೆದ ಚಿತ್ರ. ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ.

ಚಲನಚಿತ್ರಗಳಲ್ಲಿ ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿನಿಧಿಸುವ ವಿಷಯದ ಕುರಿತು ರಿಷಬ್ ಶೆಟ್ಟಿ ಮಾತನಾಡುತ್ತಾ, ಕಾಂತಾರ ಚಿತ್ರದ ಮೂಲ ಕಥೆ ಮಾನವರು ಮತ್ತು ಪ್ರಕೃತಿಯ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಸೆರೆಹಿಡಿಯುತ್ತದೆ ಎಂದು ಹೇಳಿದರು. ಇದು ಪ್ರಕೃತಿ, ಸಂಸ್ಕೃತಿ ಮತ್ತು ಕಾದಂಬರಿಗಳ ಸಮ್ಮಿಲನವಾಗಿದೆ. ನಮ್ಮ ನಮ್ಮ ಸಂಸ್ಕೃತಿಗಳು ಮತ್ತು ನಂಬಿಕೆ ವ್ಯವಸ್ಥೆಗಳು ಪ್ರತಿಯೊಬ್ಬರಲ್ಲೂ ಬೇರೂರಿರುತ್ತವೆ ಎಂದು ಅವರು ಹೇಳಿದರು. ತಾವು ಹುಟ್ಟೂರಿನಲ್ಲಿ ಕೇಳಿದ ಜನಪದ ಕಥೆಗಳು ಮತ್ತು ತುಳುನಾಡು ಸಂಸ್ಕೃತಿಯಲ್ಲಿ ತಮ್ಮ ಬಾಲ್ಯದ ಅನುಭವಗಳನ್ನೇ ಕಾಂತಾರ ಚಿತ್ರದಲ್ಲಿ ತಂದಿರುವುದಾಗಿ ಹೇಳಿದರು. ಸಿನಿಮಾ ಎಷ್ಟು ನೈಜತೆಯಿಂದ ಕೂಡಿಬರಬೇಕೋ ಅದೇ ರೀತಿ ಹಿನ್ನೆಲೆ ಸಂಗೀತ ಸಹಜವಾಗಿಯೇ ಸಂಸ್ಕೃತಿಯ ದಾರಿದೀಪವಾಗಬೇಕು ಎಂದರು.

ಸಂವಾದ ವೇಳೆ ತಮ್ಮ ಆಸಕ್ತಿಗಳ ಬಗ್ಗೆ ಚರ್ಚಿಸಿದ ರಿಷಬ್ ಶೆಟ್ಟಿ,ತಾವು ಬಾಲ್ಯದಿಂದಲೂ ಯಕ್ಷಗಾನ ಕಲಾವಿದನಾಗಿದ್ದೆ ಎಂದರು. ಸಿನಿಮಾ ಉದ್ಯಮಕ್ಕೆ ಕಾಲಿಟ್ಟಾಗಿನಿಂದ ಕರಾವಳಿ, ತುಳುನಾಡಿನ ಕಂಬಳ, ದೈವಾರಾಧನೆ, ಭೂತಕೋಲ ಸಂಸ್ಕೃತಿಯನ್ನು ಚಲನಚಿತ್ರಗಳಲ್ಲಿ ಪ್ರದರ್ಶಿಸಲು ಉತ್ಸುಕರಾಗಿದ್ದರಂತೆ. ತುಳುನಾಡಿನಲ್ಲಿ ದೈವಾರಾಧನೆ ಸಂದರ್ಭದಲ್ಲಿ ಎಲ್ಲ ಜಾತಿಯವರನ್ನು ಸಮಾನರಂತೆ ಪರಿಗಣಿಸುತ್ತೇವೆ. ದೈವಾರಾಧನೆ ಪ್ರಕೃತಿ ಮತ್ತು ಮಾನವನ ನಡುವಿನ ಸೇತುವೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಂತಾರ ಚಿತ್ರದಲ್ಲಿ ಕಂಬಳ ಓಡಿಸಲು, ಅದನ್ನು ಸೊಗಸಾಗಿ ಪ್ರದರ್ಶಿಸಲು ಪ್ರತಿದಿನ ಕಂಬಳವನ್ನು ಅಭ್ಯಾಸ ಮಾಡುತ್ತಿದ್ದೆ ಎನ್ನುತ್ತಾರೆ ರಿಷಬ್ ಶೆಟ್ಟಿ. ನಂಬಿಕೆ, ಆಚರಣೆಗಳು ಆಯಾ ಭಾಗದ ಜನರ ಹೃದಯಕ್ಕೆ ಹತ್ತಿರವಾಗಿರುವುದರಿಂದ ಯಾವುದೇ ಸಾಂಸ್ಕೃತಿಕ ಆಚರಣೆಗಳನ್ನು ಅಪಹಾಸ್ಯ ಮಾಡಬೇಡಿ ಎಂದು ಅವರು ವಿನಂತಿ ಮಾಡಿಕೊಂಡರು.

ಕಾಂತಾರ ಚಿತ್ರದಲ್ಲಿನ ಶಿವನ ಪಾತ್ರದ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ, ತಮಗೆ ಬಾಲ್ಯದಿಂದಲೂ ಅಂತಹ ಪಾತ್ರವನ್ನು ನಿರ್ವಹಿಸುವ ಉತ್ಸಾಹವಿತ್ತು ಎಂದರು. ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಸಮಯದಲ್ಲಿ ಕಾಂತಾರ ಚಿತ್ರದ ಕಲ್ಪನೆ ಹುಟ್ಟಿಕೊಂಡಿತು. ಇಡೀ ಚಿತ್ರವನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ತವರು ಕುಂದಾಪುರದಲ್ಲಿ ಚಿತ್ರೀಕರಿಸಿದ್ದಾರೆ. ಚಿತ್ರತಂಡದ ಆಯ್ಕೆ ಬಗ್ಗೆ ಮಾತನಾಡಿದ ಅವರು ಹೆಚ್ಚಿನವರು ಚಿತ್ರದಲ್ಲಿ ಹೊಸಬರು ಮತ್ತು ಮೂಲತಃ ಬೆಂಗಳೂರು ಮತ್ತು ಮಂಗಳೂರಿನ ರಂಗಭೂಮಿ ಕಲಾವಿದರು ಎಂದರು.

ಕಾಂತಾರ ಚಿತ್ರದ ಅಂತಿಮ ಕ್ಲೈಮ್ಯಾಕ್ಸ್‌ ದೃಶ್ಯ ಅವರ ಉಸಿರು ಹಿಡಿದಿಟ್ಟುಕೊಳ್ಳುವಂತಹ ಅಭಿನಯವನ್ನು ಮೆಚ್ಚದವರು, ಕೊಂಡಾಡದವರು ಇರಲಿಕ್ಕಿಲ್ಲ. ಆ ಬಗ್ಗೆ ಮಾತನಾಡಿದ ಅವರು, ಕ್ಲೈಮ್ಯಾಕ್ಸ್ ದೃಶ್ಯ ವಿಧಿರೂಪವಾಗಿದ್ದು, ಅದು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಪ್ರಕೃತಿ, ಮನುಷ್ಯ ಮತ್ತು ಸಾಮರಸ್ಯದ ಸಹಬಾಳ್ವೆ ಇಂದಿನ ಅಗತ್ಯವಾಗಿದೆ ಎಂಬ ಸಂದೇಶ ಸಿನಿಮಾದಲ್ಲಿದೆ ಎಂದರು.

ಸಿನಿಮಾರಂಗದಲ್ಲಿ ಹೊಸ ಮಾರುಕಟ್ಟೆಗಳನ್ನು ಗುರುತಿಸುವ ಕುರಿತು ಚಿಂತನೆಗಳನ್ನು ಹಂಚಿಕೊಂಡ ರಿಷಬ್ ಶೆಟ್ಟಿ, ಇಂದು ಚಲನಚಿತ್ರಗಳು, ಸಿನಿಮಾ ಜಗತ್ತು ಭಾಷೆಯ ಗಡಿಯನ್ನು ದಾಟುತ್ತಿವೆ. ವಿವಿಧ ಭಾಷೆಗಳಲ್ಲಿ ಭಾರತೀಯ ಚಿತ್ರಗಳು ಬರುತ್ತಿವೆ. ಚಿತ್ರದ ಕಥೆ- ವಿಷಯವು ಪ್ರೇಕ್ಷಕರಿಗೆ ಹತ್ತಿರವಾದರೆ ಚಿತ್ರವನ್ನು ಇಡೀ ದೇಶದ ಜನರು ಸ್ವೀಕರಿಸುತ್ತಾರೆ. ಒಂದು ಚಲನಚಿತ್ರವು ಹೆಚ್ಚು ಸ್ಥಳೀಯ ಮತ್ತು ತನ್ನ ಮೂಲ ನೆಲಕ್ಕೆ ಹತ್ತಿರವಾಗಿದ್ದಷ್ಟು ಅದು ಹೆಚ್ಚು ಮಂದಿಗೆ ಇಷ್ಟವಾಗಿ ಜನ ಚಿತ್ರವನ್ನು ಸ್ವೀಕರಿಸುತ್ತಾರೆ ಎಂಬ ಮಂತ್ರ ತತ್ವವನ್ನು ನಾನು ನಂಬುತ್ತೇನೆ, ನಂತರ ಅದು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತದೆ ಎಂದರು.

90 ರ ದಶಕದ ಉತ್ತರಾರ್ಧದಲ್ಲಿ ಪ್ರಾದೇಶಿಕ ಚಿತ್ರಮಂದಿರಗಳು ಪಾಶ್ಚಿಮಾತ್ಯ ಚಲನಚಿತ್ರಗಳ ಪ್ರಭಾವವನ್ನು ಹೊಂದಿದ್ದವು.ಇಂದು ಪಾಶ್ಚಾತ್ಯರು ಸ್ಥಳೀಯ ಸಂಸ್ಕೃತಿಯನ್ನು ಸಂಯೋಜಿಸುತ್ತಿದ್ದಾರೆ. ವೈವಿಧ್ಯವು ಅವರಿಗೆ ಹೆಚ್ಚು ಅಗತ್ಯವಿರುವ ಚೈತನ್ಯ ನೀಡಿದೆ ಅದನ್ನು ಪ್ರೇಕ್ಷಕರು ಸ್ವೀಕರಿಸಿದ್ದಾರೆ. ತಮ್ಮ ಮಾತನ್ನು ಪುಷ್ಟೀಕರಿಸಲು, ಭಾಷೆಯ ಅಡ್ಡಿ, ತಡೆಗೋಡೆಯ ಹೊರತಾಗಿಯೂ ಭಾರತದಾದ್ಯಂತ ಜನರು ಕಾಂತಾರ ಚಿತ್ರವನ್ನು ಒಪ್ಪಿಕೊಂಡಿರುವುದೇ ಇದಕ್ಕೆ ಸಾಕ್ಷಿ, ಏಕೆಂದರೆ ಪ್ರೇಕ್ಷಕರಿಗೆ ಕಾಂತಾರ ಚಿತ್ರದ ವಿಷಯ, ಕಥೆ ಇಷ್ಟವಾಯಿತು ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ಜನರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗಾಗಿ ಕಾಯಬೇಕಾಗಿದ್ದರೆ, ಇಂದು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಚಿತ್ರಪ್ರೇಮಿಗಳಿಗೆ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಅವರು ಹಂಬಲಿಸುವ ರೀತಿಯ ವಿಷಯವನ್ನು ನೀಡುತ್ತದೆ. ಒಟಿಟಿಪ್ಲಾಟ್ ಫಾರ್ಮ್‌ಗಳು ವಿಷಯ-ಯೋಗ್ಯ ಚಲನಚಿತ್ರಗಳ ವ್ಯಾಪ್ತಿಯನ್ನು ಬಹುಪಟ್ಟು ಹೆಚ್ಚಿಸಿದೆ, ಜನರಿಗೆ ಅವರ ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಲು ಸಾಕಷ್ಟು ಚಲನಚಿತ್ರಗಳನ್ನು ನೀಡುತ್ತದೆ ಎಂದರು.

ಇನ್ನು ನಟನೆ ಮತ್ತು ನಿರ್ದೇಶನದ ಕುರಿತು ಅವರ ಅಭಿಪ್ರಾಯಗಳನ್ನು ಕೇಳಿದಾಗ, 'ನಿರ್ದೇಶನ ನನ್ನ ಆದ್ಯತೆ' ಎಂದರು, 'ನಾನು ಸಮಾಜಕ್ಕೆ ಸಾಕಷ್ಟು ಹತ್ತಿರವಾಗಿದ್ದೇನೆ. ನನ್ನ ಸಿನಿಮಾದಲ್ಲಿ ಪರಿಕಲ್ಪನೆಗಳು ಸಮಾಜದಿಂದಲೇ ಬರುತ್ತವೆ ಎಂದು ನಾನು ನಂಬುತ್ತೇನೆ” ಎಂದು ಚಲನಚಿತ್ರಗಳಿಗೆ ವಿಷಯಗಳ ಆಯ್ಕೆಯ ಬಗ್ಗೆ ಕೇಳಿದಾಗ ಉತ್ತರಿಸಿದರು.

ನಿರ್ಮಾಪಕರಾಗಿ, ಚಿತ್ರದ ಸ್ಕ್ರಿಪ್ಟ್ ಆಧಾರದ ಮೇಲೆ ಬಂಡವಾಳ ಅಥವಾ ಬಜೆಟ್ ನಿರ್ಧಾರವಾಗುತ್ತದೆ ಎಂದು ಹೇಳಿದರು. ಚಿತ್ರ ನಿರ್ಮಾಣದ ಸೆಟ್‌ಗಳು, ಸ್ಥಳ ಮತ್ತು ಇತರ ಪರಿಕರಗಳ ಮೇಲೆ ಅನಗತ್ಯ ಖರ್ಚು ಮಾಡುವ ಬದಲು ವಿಷಯವು ಸಾರ್ವತ್ರಿಕವಾಗಿ ಆಕರ್ಷಕವಾಗಿರಬೇಕು ಎಂದರು.

53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI 53)ರಲ್ಲಿ ಮಾಸ್ಟರ್‌ಕ್ಲಾಸ್‌ ಮತ್ತು ಸಂವಾದದ ಅವಧಿಗಳನ್ನು ಸತ್ಯಜಿತ್ ರೇ ಫಿಲ್ಮ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್ (SRFTI), NFDC, ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಮತ್ತು ESG ಜಂಟಿಯಾಗಿ ಆಯೋಜಿಸುತ್ತಿವೆ. ಚಲನಚಿತ್ರ ನಿರ್ಮಾಣದ ಪ್ರತಿಯೊಂದು ಅಂಶಗಳಲ್ಲಿ ಚಲನಚಿತ್ರದ ವಿದ್ಯಾರ್ಥಿಗಳು ಮತ್ತು ಉತ್ಸಾಹಿಗಳನ್ನು ಪ್ರೋತ್ಸಾಹಿಸಲು ಈ ವರ್ಷ ಮಾಸ್ಟರ್‌ಕ್ಲಾಸ್‌ಗಳು ಮತ್ತು ಸಂಭಾಷಣೆಗಳನ್ನು ಒಳಗೊಂಡ ಒಟ್ಟು 23 ಸೆಷನ್‌ಗಳನ್ನು ನಡೆಸಲಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.