ಕೋವಿಡ್–19 ಪರಿಣಾಮ ನವೆಂಬರ್ ಅಂತ್ಯದಲ್ಲಿ ಗೋವಾದಲ್ಲಿ ನಿಗದಿಯಾಗಿದ್ದ ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಮುಂದಿನ ವರ್ಷದ ಜನವರಿ ತಿಂಗಳಿಗೆ ಮುಂದೂಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಪ್ರತಿವರ್ಷವೂ ನವೆಂಬರ್ ಅಂತ್ಯದಲ್ಲಿಯೇ ಪಣಜಿಯಲ್ಲಿ ಸಿನಿಮೋತ್ಸವ ನಡೆಯುತ್ತಿತ್ತು. ಈ ಬಾರಿ ನವೆಂಬರ್ 20ರಿಂದ 28ರವರೆಗೆ ನಿಗದಿಯಾಗಿತ್ತು. ಕೋವಿಡ್ ಪರಿಣಾಮ ಜನವರಿ 16ರಿಂದ 24ರವರೆಗೆ ಸಿನಿಮೋತ್ಸವ ನಡೆಯಲಿದೆ.
‘51ನೇ ಅಂತರರಾಷ್ಟ್ರೀಯ ಸಿನಿಮೋತ್ಸವ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಕೋವಿಡ್ ಪರಿಣಾಮ 2021ರ ಜನವರಿ 16ರಿಂದ 24ರವರೆಗೆ ಆಯೋಜಿಸಲಾಗಿದೆ. ಹೈಬ್ರೀಡ್ ಫಾರ್ಮೆಟ್‌ನಡಿ ಚಿತ್ರೋತ್ಸವ ನಡೆಯಲಿದೆ. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಟ್ಟಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಅವರು ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಚಿವಾಲಯ ಟ್ವೀಟ್ ಮಾಡಿದೆ.
ಗೋವಾ ಸಿನಿಮೋತ್ಸವಕ್ಕೆ ಮೊದಲೇ ಕೋಲ್ಕತ್ತ ಚಿತ್ರೋತ್ಸವ ನಡೆಯುತ್ತದೆ. ಬಳಿಕ ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ, ಪುಣೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುವುದು ವಾಡಿಕೆ. ಇವೆಲ್ಲಾ ಆಯಾ ರಾಜ್ಯ ಸರ್ಕಾರಗಳು ಸಂಘಟಿಸುವ ಚಿತ್ರೋತ್ಸವಗಳಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದು ಮಾತ್ರ ಪಣಜಿ ಚಿತ್ರೋತ್ಸವ. ಇದು ದೇಶದ ಪ್ರತಿಷ್ಠೆಯ ಸಿನಿಮಾ ಉತ್ಸವವೂ ಹೌದು. ಈ ಬಾರಿ ಕೋವಿಡ್–19 ದೇಶದ ಪ್ರಮುಖ ನಗರಗಳಲ್ಲಿ ನಡೆಯುವ ಸಿನಿಮೋತ್ಸವಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
2004ಕ್ಕಿಂತ ಮೊದಲು ಪ್ರತಿವರ್ಷ ದೇಶದ ಒಂದೊಂದು ಪ್ರಮುಖ ನಗರಗಳಲ್ಲಿ ಸಿನಿಮೋತ್ಸವ ನಡೆಯುತ್ತಿತ್ತು. ಈ ಸಂಚಾರಿ ವ್ಯವಸ್ಥೆಯ ಸಂಘಟನೆಯಲ್ಲಿ ಏರುಪೇರಾಗಿ ಕೆಲವು ವರ್ಷ ಚಿತ್ರೋತ್ಸವವೇ ರದ್ದಾದ ನಿದರ್ಶನಗಳೂ ಉಂಟು. 2004ರಲ್ಲಿ ಕೇಂದ್ರ ಸರ್ಕಾರ ಪಣಜಿಯಲ್ಲಿ ಕಾಯಂ ಆಗಿ ಚಿತ್ರೋತ್ಸವ ನಡೆಸಲು ನಿರ್ಧರಿಸಿತು. ಹಾಗಾಗಿ, ಪ್ರತಿವರ್ಷ ನವೆಂಬರ್‌ನಲ್ಲಿ ನಿಗದಿತ ದಿನಗಳಂದು ಚಿತ್ರೋತ್ಸವ ನಡೆಯುತ್ತ ಬಂದಿದೆ. ಈ ಬಾರಿ ಮಾತ್ರ ಜನವರಿಗೆ ಮುಂದೂಡಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.