ಅಬುಧಾಬಿ: ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಶೇರ್‌ಷಾ’ ಚಿತ್ರವು 22ನೇ ಸಾಲಿನಅಂತರರಾಷ್ಟ್ರೀಯ ಭಾರತೀಯ ಚಿತ್ರ ಅಕಾಡೆಮಿ(ಐಫಾ) ಪ್ರಶಸ್ತಿ ಸಮಾರಂಭದಲ್ಲಿ ಅತಿಹೆಚ್ಚು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ನಟರಾದ ವಿಕ್ಕಿ ಕೌಶಲ್ ಮತ್ತು ಕೃತಿ ಸನಾನ್ ಅವರು ಸಹ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ವಿಕ್ಕಿ ಕೌಶಲ್ ಅವರು ‘ಸರ್ದಾರ್ ಉಧಮ್’ ಚಿತ್ರದಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಉಧಮ್ ಸಿಂಗ್ ಅವರ ಪಾತ್ರಕ್ಕಾಗಿ ಉತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಪ್ರಶಸ್ತಿಯನ್ನು ಕ್ಯಾನ್ಸರ್‌ನಿಂದ ಇಹಲೋಕ ತ್ಯಜಿಸಿದ ನಟ ಇರ್ಫಾನ್ ಖಾನ್ ಅವರಿಗೆ ಸಮರ್ಪಿಸಿದ್ದಾರೆ.
ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ನಿರ್ಮಾಣದ ಶೇರ್‌ಷಾ ಚಿತ್ರವು ಉತ್ತಮ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾದರೆ, ವಿಷ್ಣುವರ್ಧನ ಚಿತ್ರವು ಉತ್ತಮ ನಿರ್ದೇಶನದ ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಕಾರ್ಗಿಲ್ ಯುದ್ಧದ ವೀರ ಯೋಧ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಜೀವನ ಆಧಾರಿತ ಚಿತ್ರವಾದ‘ಶೇರ್‌ಷಾ’ ಉತ್ತಮ ಸಂಗೀತ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ರಾತಾನ್ ಲಂಬಿಯಾನ್ ಚಿತ್ರದ ಹಾಡುಗಾರರಾದ ಜುಬಿನ್ ನೌತಿಯಾಲ್ ಮತ್ತು ಆಸೀಸ್ ಕೌರ್ ಅವರು ಕ್ರಮವಾಗಿಅವರು ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗದ ಹಾಡುಗಾರರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉತ್ತಮ ಸಂಗೀತ ನಿರ್ದೇಶನದ ವಿಭಾಗದಲ್ಲಿ ‘ಅತರಂಗಿ ರೇ’ ಸಿನಿಮಾದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಶೇರ್‌ಷಾ ಸಂಗೀತ ನಿರ್ದೇಶಕರಾದ ತಾನಿಷ್ಕ್ ಬಾಗ್ಚಿ, ಜಸ್ಲೀನ್ ರಾಯಲ್, ಜಾವೇದ್-ಮೊಹ್ಸಿನ್, ವಿಕ್ರಂ ಮೊಂಟ್ರೊಸೆ, ಬಿ. ಪ್ರಾಕ್ ಮತ್ತು ಜಾನಿ ಅವರ ಮಧ್ಯೆ ಟೈ ಆಗಿದೆ.
2020ರಲ್ಲಿ ಬಿಡುಗಡೆಯಾದ ‘ಲುಡೊ’ ಚಿತ್ರಕ್ಕಾಗಿ ಅನುರಾಗ್ ಬಾಸು ಅವರು ಉತ್ತಮ ಮೂಲ ಚಿತ್ರಕತೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
1983ರಲ್ಲಿ ಭಾರತ ವಿಶ್ವಕಪ್ ಗೆಲುವು ಸಾಧಿಸಿದ ಘಟನಾವಳಿ ಆಧರಿಸಿದ 83 ಚಿತ್ರದ ಕಬೀರ್ ಖಾನ್ ಮತ್ತು ಸಂಜಯ್ ಪುರಾನ್ ಸಿಂಗ್ ಚೌಹಾನ್ ಅವರು ಅಳವಡಿಸಿಕೊಂಡ ಉತ್ತಮಕಥೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.
ಸರ್ದಾರ್ ಉಧಮ್ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಉಧಮ್ ಸಿಂಗ್ ಅವರ ಪಾತ್ರ ನಿರ್ವಹಿಸಿದ ವಿಕ್ಕಿ ಕೌಶಲ್ ಅವರು ಉತ್ತಮ ನಟ ಎಂಬ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಕ್ಕಿ ಕೌಶಲ್ ಅವರು, ‘ಇದು ನನ್ನ ಮೊದಲ ಉತ್ತಮ ನಟ ಪ್ರಶಸ್ತಿಯಾಗಿದೆ’ ಎಂದರು. ಅಲ್ಲದೆ, ತಮ್ಮ ಕುಟುಂಬ ಸದಸ್ಯರು, ಪತ್ನಿ ಕತ್ರಿನಾ, ನಿರ್ದೇಶಕ ಶೂಜಿತ್ ಸಿರ್ಕಾರ್ ಮತ್ತು ಚಿತ್ರದ ನಿರ್ಮಾಪಕ ರೊನ್ನೀ ಲಹಿರಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.