ADVERTISEMENT

ಲಾಕ್‌ಡೌನ್‌ ವೇಳೆ ಬಂದ ‘ಇಕ್ಕಟ್ಟಿ’ನ ಅವಕಾಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 7:09 IST
Last Updated 21 ಜುಲೈ 2021, 7:09 IST
‘ಇಕ್ಕಟ್‌’ ಚಿತ್ರದಲ್ಲಿ ಭೂಮಿಶೆಟ್ಟಿ, ನಾಗಭೂಷಣ
‘ಇಕ್ಕಟ್‌’ ಚಿತ್ರದಲ್ಲಿ ಭೂಮಿಶೆಟ್ಟಿ, ನಾಗಭೂಷಣ   

‘ಲಾಕ್‌ಡೌನ್‌ ಅವಧಿಯಲ್ಲಿ ಈ ರೀತಿ ಅವಕಾಶ ಹುಡುಕಿಕೊಂಡು ಬರುತ್ತದೆ ಎಂದು ಊಹಿಸಿರಲಿಲ್ಲ’ ಭೂಮಿ ಶೆಟ್ಟಿ ಖುಷಿ ಮತ್ತು ಅಚ್ಚರಿ ವ್ಯಕ್ತಪಡಿಸಿದರು.

‘ಇಕ್ಕಟ್‌’ ಚಿತ್ರ ಇಂದು (ಜುಲೈ 21) ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಗೊಂಡಿದೆ. ನಾಗಭೂಷಣ ಮತ್ತು ಭೂಮಿಶೆಟ್ಟಿ ಅಭಿನಯದ ಚಿತ್ರವಿದು. ಪವನ್ ಕುಮಾರ್ ಸ್ಟುಡಿಯೋಸ್ ಮತ್ತು ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣಗೊಂಡಿದೆ.

ನಿರ್ದೇಶಕರಾದ ಇಶಮ್ ಖಾನ್, ಹಸೀನ್ ಖಾನ್ ಹೇಳುವುದು ಹೀಗೆ, ‘ನಾವು ಒಂದು ಚಿತ್ರ ಮಾಡಬೇಕು ಎಂಬ ಉದ್ದೇಶದಿಂದಲಷ್ಟೇ ಮುಂದುವರಿದೆವು. ಇದಕ್ಕೂ ಮೊದಲು ಬೇರೆ ಚಿತ್ರಗಳನ್ನು ಹಾಗೂ ಯುಟ್ಯೂಬ್‌ನಲ್ಲಿ ಹಾಸ್ಯ ಸರಣಿಗಳನ್ನು ಮಾಡುತ್ತಿದ್ದೆವು. ನಾನೂ ಸಾಕಷ್ಟು ಹಾಸ್ಯ ಚಿತ್ರಗಳನ್ನು ವೀಕ್ಷಿಸುತ್ತಿದ್ದೆ. ಲಾಕ್‌ಡೌನ್‌ನಂತಹ ಪ್ರತಿಕೂಲ ಸನ್ನಿವೇಶದಲ್ಲಿ ಒಂದೇ ಲೋಕೇಶನ್‌ನಲ್ಲಿ ಕನಿಷ್ಠ ಪಾತ್ರಗಳಲ್ಲಿ ಚಿತ್ರವನ್ನು ನಿರ್ಮಿಸಿದ್ದೇವೆ’ ಎಂದರು.

ADVERTISEMENT

ಭೂಮಿಶೆಟ್ಟಿ ಮಾತು ಮುಂದುವರಿಸಿದರು.

‘ಚಿತ್ರದ ಬಗ್ಗೆ ನನಗೆ ಕರೆ ಬಂದಾಗ, ಲಾಕ್‌ಡೌನ್‌ನಿಂದಾಗಿ ನಾನೂ ಮನೆಯಲ್ಲೇ ಉಳಿದಿದ್ದೆ. ಮುಖ್ಯ ಪಾತ್ರಕ್ಕಾಗಿ ಆಡಿಷನ್ ನೀಡಲು ಕೇಳಿದರು. ಕಥಾವಸ್ತು ಇಷ್ಟವಾಯಿತು. ಕೂಡಲೇ ನನ್ನ ಆಡಿಷನ್ ವೀಡಿಯೊ ಕಳುಹಿಸಿದೆ. ನಂತರ ಬೆಂಗಳೂರಿಗೆ ಬರಲು ಹೇಳಿದರು. ಹಾಗೆಯೇ ಆಯ್ಕೆಯೂ ನಡೆಯಿತು. ಚಿತ್ರದಲ್ಲಿ ನನ್ನದು ‘ಜಾನ್ವಿ’ ಎಂಬ ಪಾತ್ರ. ಆ ಪರಿಶ್ರಮವೆಲ್ಲಾ ಈಗ ಚಿತ್ರವಾಗಿ ತಮ್ಮ ಮುಂದಿದೆ’ ಎಂದು ಖುಷಿ ಹಂಚಿಕೊಂಡರು.

‘ನಾಗಭೂಷಣ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ. ನಾನು ಅವರ ಚಿತ್ರ ‘ಫ್ರೆಂಚ್ ಬಿರಿಯಾನಿ’ ನೋಡಿದ್ದೇನೆ ಮತ್ತು ಅದನ್ನು ಬಹಳೇ ಇಷ್ಟಪಟ್ಟಿದ್ದೇನೆ. ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ಬಹಳ ಸಂತಸ ತಂದಿದೆ’ ಎಂದರು.

ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನದ ಹಂತದಲ್ಲಿದ್ದ ದಂಪತಿ ಲಾಕ್‌ಡೌನ್‌ ಕಾರಣದಿಂದಾಗಿ ಜೊತೆಗಿರಬೇಕಾದ ಸಂದರ್ಭ ಬರುತ್ತದೆ. ಆ ಸಂದರ್ಭ ಹೇಗಿರುತ್ತದೆ ಎಂಬುದನ್ನು ಹಾಸ್ಯಮಯ ಶೈಲಿಯಲ್ಲಿ ಚಿತ್ರದಲ್ಲಿ ನಿರೂಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.