2019ರಲ್ಲಿ ಬಿಡುಗಡೆಯಾದ ಭಾರತದ ಸಿನಿಮಾಗಳ ಟಾಪ್ ಟೆನ್ ಪಟ್ಟಿಯಲ್ಲಿ ತಮಿಳು ಸಿನಿಮಾ ‘ಪೆರನ್ಬು’ ಮೊದಲ ಸ್ಥಾನ ಪಡೆದಿದೆ. ರಾಮ್ ನಿರ್ದೇಶನದ ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಮಮ್ಮೂಟ್ಟಿ, ಅಂಜಲಿ, ಸಾಧನಾ ಮತ್ತು ಅಂಜಲಿ ಅಮೀರ್ ನಟಿಸಿದ್ದಾರೆ.
ಈ ಟಾಪ್ ಟೆನ್ ಪಟ್ಟಿಯನ್ನು ಇಂಟರ್‌ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಕಂಪನಿ ಸಿದ್ಧಪಡಿಸಿದೆ. ಇದು ಅಮೆಜಾನ್ ಮಾಲೀಕತ್ವದಲ್ಲಿರುವ ಕಂಪನಿ. ಸಿನಿಮಾ ಪ್ರೇಮಿಗಳು ನೀಡಿದ ಅಂಕವನ್ನು ಆಧರಿಸಿ ಐಎಂಡಿಬಿ ಈ ಪಟ್ಟಿ ಸಿದ್ಧಪಡಿಸಿದೆ.
‘ಉರಿ’ ಮತ್ತು ‘ಗಲ್ಲಿ ಬಾಯ್’ ಸಿನಿಮಾಗಳು ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನದಲ್ಲಿ ಇವೆ. ಆಯುಷ್ಮಾನ್ ಖುರಾನಾ ಅವರ ‘ಆರ್ಟಿಕಲ್ 15’, ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರದ್ಧಾ ಕಪೂರ್ ನಟನೆಯ ‘ಛಿಛೋರೆ’ ಸಿನಿಮಾಗಳು ಕ್ರಮವಾಗಿ ನಾಲ್ಕು ಮತ್ತು ಐದನೆಯ ಸ್ಥಾನದಲ್ಲಿ ಇವೆ.
ಹೃತಿಕ್ ರೋಷನ್ ಅಭಿನಯದ ‘ಸೂಪರ್ 30’ ಸಿನಿಮಾ ಆರನೆಯ ಸ್ಥಾನದಲ್ಲಿ, ತಾಪ್ಸಿ ಪನ್ನು ಮತ್ತು ಅಮಿತಾಭ್ ಬಚ್ಚನ್ ಅಭಿನಯದ ಥ್ರಿಲ್ಲರ್ ಸಿನಿಮಾ ‘ಬದ್ಲಾ’ ಏಳನೆಯ ಸ್ಥಾನದಲ್ಲಿ ಇದೆ. ಎಂಟು ಮತ್ತು ಒಂಬತ್ತನೆಯ ಸ್ಥಾನವನ್ನು ‘ದಿ ತಾಷ್ಕೆಂಟ್ ಫೈಲ್ಸ್’ (ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಕಥಾಹಂದರ ಇರುವ ಸಿನಿಮಾ) ಮತ್ತು ಅಕ್ಷಯ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ ‘ಕೇಸರಿ’ ಪಡೆದಿವೆ. ಮೋಹನ್‌ಲಾಲ್ ಅಭಿನಯದ ಮಲಯಾಳ ಸಿನಿಮಾ ‘ಲೂಸಿಫರ್’ ಹತ್ತನೆಯ ಸ್ಥಾನ ಪಡೆದಿದೆ. ಕನ್ನಡದ ಯಾವುದೇ ಸಿನಿಮಾ ಈ ಪಟ್ಟಿಯಲ್ಲಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.