ADVERTISEMENT

ಬೆಳಕು ಹರಿಸುತ್ತಾ ಬದುಕು ಕಳೆದುಕೊಂಡ ಪ್ರೊಜೆಕ್ಟರ್‌ ಆಪರೇಟರ್‌ಗಳ ನೆನೆದ ಬಚ್ಚನ್‌

ಪಿಟಿಐ
Published 24 ಜುಲೈ 2023, 13:33 IST
Last Updated 24 ಜುಲೈ 2023, 13:33 IST
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್   

ನವದೆಹಲಿ: ‘ಭಾರತೀಯ ಚಿತ್ರರಂಗದ ಬೆಳವಣಿಗೆಯಲ್ಲಿ ಪರದೆ ಮೇಲೆ ಚಿತ್ರ ಮೂಡಿಸುವ ಪ್ರೊಜೆಕ್ಟರ್‌ ಆಪರೇಟರ್‌ಗಳ ಕೊಡುಗೆಯನ್ನು ಗುರುತಿಸುವ ಕಾರ್ಯ ಆಗಬೇಕಿದೆ’ ಎಂದು ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅಭಿಪ್ರಾಯಪಟ್ಟಿದ್ದಾರೆ.

ಏಕ ಪರದೆ ಚಿತ್ರಮಂದಿರಗಳ ಧಾರುಣ ಸ್ಥಿತಿಯ ಕುರಿತು ಮುಂಬೈ ಮೂಲದ ಫಿಲ್ಮ್‌ ಹೆರಿಟೇಜ್‌ ಪ್ರತಿಷ್ಠಾನ ಹಾಗೂ ಅದರ ಸಂಸ್ಥಾಪಕ ಶಿವೇಂದರ್‌ ಸಿಂಗ್ ಡುಂಗಾರ್ಪುರ್‌ ಅವರಿಗೆ ಕಳುಹಿಸಿರುವ ವಿಡಿಯೊ ಸಂದೇಶದಲ್ಲಿ, ಚಿತ್ರರಂಗದಲ್ಲಿ ಯಾರೂ ಗುರುತಿಸದ ಸಿನಿಮಾ ಪ್ರೊಜೆಕ್ಟರ್‌ ಆಪರೇಟರ್‌ಗಳಿಗೆ ಪ್ರತಿಷ್ಠಾನ ನೀಡುತ್ತಿರುವ ಜೀವಮಾನ ಸಾಧನೆ ಪ್ರಶಸ್ತಿ ಕುರಿತು ಮಾತನಾಡಿದ್ದಾರೆ.

ಒಂದು ನಿಮಿಷದ ಈ ವಿಡಿಯೊದಲ್ಲಿ ಮಾತನಾಡಿರುವ ಬಚ್ಚನ್, ‘ಕತ್ತಲೆಯ ಥಿಯೇಟರ್‌ನಲ್ಲಿ ಬೆಳಕಿನ ಕಿರಣಗಳ ಮೂಲಕ ಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ಮೂಡಿಸುವವರು ಇವರು. ನನ್ನ ಪಾಲಿಗೆ ಸಿನಿಮಾ ಅಂದರೆ ಅದು ಮಾತ್ರ. ಆದರೆ ದುರದೃಷ್ಟವಶಾತ್ ಅಂಧಕಾರದ ಬದುಕಿನಲ್ಲಿ ಅವರು ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಹಲವರು ಈ ಕತ್ತಲೆಯಲ್ಲೇ ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ. ಈಗಲಾದರೂ ಭಾರತೀಯ ಸಿನಿಮಾದ ಇತಿಹಾಸದಲ್ಲಿ ಇವರ ಅನನ್ಯ ಕೊಡುಗೆಯನ್ನು ಸ್ಮರಿಸುವ ಮತ್ತು ದಾಖಲಿಸುವ ಅಗತ್ಯವಿದೆ‘ ಎಂದಿದ್ದಾರೆ.

ADVERTISEMENT

ಶಿವೇಂದರ್‌ ಸಿಂಗ್ ಡುಂಗಾರ್ಪುರ್‌ ಅವರು ಪ್ರತಿಕ್ರಿಯಿಸಿ, ‘ಪ್ರತಿಷ್ಠಾನವು ಈ ಬಾರಿ ಮೂವರು ಪ್ರೊಜೆಕ್ಟರ್‌ ಆಪರೇಟರ್‌ಗಳಿಗೆ ವಿಶೇಷ ಪ್ರಶಸ್ತಿ ನೀಡುತ್ತಿದೆ. ಈ ಕಾರ್ಯಕ್ರಮವು 1933ರಲ್ಲಿ ಸ್ಥಾಪನೆಗೊಂಡ ರೀಗಲ್ ಸಿನಿಮಾದಲ್ಲಿ ಬುಧವಾರ ಆಯೋಜಿಸಲಾಗಿದೆ. ಇದು ಸಂಸ್ಥೆಯ ವಾರ್ಷಿಕ ಕಾರ್ಯಕ್ರಮವಾಗಿದೆ’ ಎಂದು ತಿಳಿಸಿದ್ದಾರೆ.

‘ಭಾರತ ಚಿತ್ರರಂಗದ ಮೇರು ನಟ ತಮ್ಮ ಸಂದೇಶವನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಬಚ್ಚನ್ ಅವರ ಬೆಂಬಲ ಸಿನಿಮಾ ಪರಂಪರೆಯನ್ನು ಉಳಿಸಿ ಬೆಳೆಸಲು ನಮಗೆ ಇನ್ನಷ್ಟು ಶಕ್ತಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟ ನಸಿರುದ್ದೀನ್ ಶಾ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಮುಂಬೈನ ರೀಗಲ್ ಚಿತ್ರಮಂದಿರದ ಮಹಮ್ಮದ್ ಅಸ್ಲಮ್ ಫಖೀ, ಪುಣೆಯಲ್ಲಿರುವ ನ್ಯಾಷನಲ್ ಫಿಲ್ಮ್‌ ಆರ್ಕೈವ್‌ ಆಫ್ ಇಂಡಿಯಾದ ಪಿ.ಎ.ಸಲಾಮ್ ಹಾಗೂ ರಾಯ್‌ಪುರದ ಅಮರ್‌ದೀಪ್ ಸಿನಿಮಾ ಹಾಗೂ ರಾಜ್‌ ಟಾಕೀಸ್‌ನ ಲಖನ್ ಲಾಲ್‌ ಯಾದವ್‌ ಅವರಿಗೆ ಪ್ರೊಜೆಕ್ಟರ್‌ ಆಪರೇಟರ್‌ ಆಗಿ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. 

ಇವರು ಕಳೆದ 50 ವರ್ಷಗಳಿಂದ ಸೆಲ್ಯುಲಾಯ್ಡ್ ಹಾಗೂ ಡಿಜಿಟಲ್‌ ಮಾಧ್ಯಗಳಲ್ಲಿ ಪ್ರೊಜೆಕ್ಟರ್‌ ಆಪರೇಟರ್‌ ಆಗಿ ದುಡಿದಿದ್ದಾರೆ. ಈ ಪ್ರಶಸ್ತಿಯು ₹50 ಸಾವಿರ ನಗದು ಒಳಗೊಂಡಿದೆ. ಕಾರ್ಯಕ್ರಮದ ಪೂರ್ವದಲ್ಲಿ ಮೂರು ದಿನಗಳ ಫಿಲ್ಮ್ ಪ್ರೊಜೆಕ್ಷನ್‌ ತರಬೇತಿ ಶಿಬಿರವನ್ನು ಪ್ರತಿಷ್ಠಾನ ಆಯೋಜಿಸಿದೆ. ಕೊನೆಯ ದಿನ 1949ರ ಚಿತ್ರ ಕಮಲ್ ಅಮ್ರೋಹಿ ಅವರ 35 ಮಿ.ಮೀ. ಚಿತ್ರ ‘ಮಹಲ್‘ ಅನ್ನು ಪ್ರದರ್ಶಿಸಲಿದೆ. ಪೂರ್ವ ಸ್ಥಿತಿಗೆ ತರಲಾದ 1922ರ ನೋಸ್‌ಫೆರಾತು ಹಾಗೂ ಹಾರಾರ್ಸ್‌ ಮತ್ತು 1938ರಲ್ಲಿ ತೆರೆಕಂಡ ‘ಟೈಗರ್‌ ಆಫ್‌ ಈಶ್ಚನಾಪುರ್’ ಚಿತ್ರಗಳೂ ಈ ಅವಧಿಯಲ್ಲಿ ಪ್ರಸಾರಗೊಳ್ಳಲಿದೆ ಎಂದು ಡುಂಗಾರ್ಪುರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.