ನವದೆಹಲಿ: ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗಿನ ‘ಆರ್‌ಆರ್‌ಆರ್’ ಚಿತ್ರದ ‘ನಾಟು.. ನಾಟು...’ ಗೀತೆ ಮತ್ತು ಭಾರತದ ‘ಆಲ್ ದಟ್ ಬ್ರೀತ್ಸ್’, ‘ದಿ ಎಲಿಫೆಂಟ್ ವಿಸ್ಪರ್ಸ್’ ಸಾಕ್ಷ್ಯಚಿತ್ರಗಳು ಈ ಬಾರಿಯ ‘ಆಸ್ಕರ್’ನ 95ನೇ ಅಕಾಡೆಮಿ ಅವಾರ್ಡ್ಸ್ ಸ್ಪರ್ಧೆಯಲ್ಲಿ ಮಿಂಚುವ ನಿರೀಕ್ಷೆಗಳು ಗರಿಗೆದರಿವೆ.
ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಸೋಮವಾರ ಮುಂಜಾನೆ (ಭಾರತೀಯ ಕಾಲಮಾನ) ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಭಾರತದ ಈ ಗೀತೆ ಮತ್ತು ಸಾಕ್ಷ್ಯಚಿತ್ರಗಳು ಸ್ಪರ್ಧೆಯಲ್ಲಿವೆ.
ಅತ್ಯುತ್ತಮ ಮೂಲಗೀತೆ (ಒರಿಜಿನಲ್) ವರ್ಗದಲ್ಲಿ ‘ನಾಟು.. ನಾಟು...’ ಮತ್ತು ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ಆಲ್ ದಟ್ ಬ್ರೀತ್ಸ್’ ಹಾಗೂ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ ಸ್ಪರ್ಧೆಯಲ್ಲಿವೆ. ಇದೇ ಮೊದಲಿಗೆ ಭಾರತ ನಿರ್ಮಿತ ಸಿನಿಮಾಗಳು ಆಸ್ಕರ್‌ನ ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವುದು ವಿಶೇಷ.
‘ನಾಟು ನಾಟು’ ಗೀತೆಯ ಸಂಯೋಜಕ ಎಂ.ಎಂ.ಕೀರವಾಣಿ ಮತ್ತು ಗಾಯಕರಾದ ರಾಹುಲ್ ಸಿಪ್ಲಿಗುಂಜ್– ಕಾಲ ಭೈರವ ಅವರು ವೇದಿಕೆಯಲ್ಲಿ ನೇರಪ್ರದರ್ಶನ ನೀಡಲಿದ್ದಾರೆ. ಈ ವಿಭಾಗದಲ್ಲಿ ನಾಮಕರಣಗೊಂಡಿರುವ ಎಲ್ಲ ಐದು ಮೂಲ ಗೀತೆಗಳ ನೇರ ಪ್ರದರ್ಶನವು ನಡೆಯಲಿದೆ.
ಈ ಸಮಾರಂಭದಲ್ಲಿ ಪ್ರಶಸ್ತಿಯೊಂದನ್ನು ಪ್ರದಾನ ಮಾಡುವ ಅವಕಾಶ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ದೊರೆತಿದೆ.
ಆರ್‌ಆರ್‌ಆರ್ ಸಿನಿಮಾದ ಪ್ರಮುಖ ಪಾತ್ರದಲ್ಲಿರುವ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರೂ ಪ್ರೇಕ್ಷಕರಾಗಿ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ‘ನಾಟು ನಾಟು’ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.