ನವದೆಹಲಿ: ದೌರ್ಜನ್ಯಕ್ಕೊಳಗಾದ ಮಗಳಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತಂದೆಯ ಪಯಣ ಕುರಿತ ‘ಟು ಕಿಲ್ ಎ ಟೈಗರ್’ ಚಿತ್ರವು 2024ರ ಆಸ್ಕರ್‌ನ ಅತ್ಯುತ್ತಮ ಡಾಕ್ಯುಮೆಂಟ್ರಿ ಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ.
ಕೆನಡಾದ ಟೊರೆಂಟೊದಲ್ಲಿ ನೆಲೆಸಿರುವ ದೆಹಲಿ ಮೂಲದ ನಿಶಾ ಪಹೂಜಾ ಅವರು To Kill a Tiger ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ 2022ರಲ್ಲಿ ನಡೆದ ಟೊರೆಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು.
ಭಾರತದ ಒಂದು ಗ್ರಾಮದಲ್ಲಿ 13 ವರ್ಷದ ಮಗಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಅಪರಾಧಿಗಳ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ತಂದೆಯ ಪಯಣದ ಚಿತ್ರಕಥೆಯನ್ನು ಇದು ಆಧರಿಸಿದೆ.
‘ಮಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧ ತಂದೆ ರಂಜಿತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆರೋಪಿಗಳ ಬಂಧನವೂ ಆಗುತ್ತದೆ. ಆದರೆ ದೂರು ಹಿಂಪಡೆಯುವಂತೆ ಇಡೀ ಊರು ಹಾಗೂ ಮುಖಂಡರು ಕುಟುಂಬದ ಮೇಲೆ ಒತ್ತಡ ಹೇರುತ್ತಾರೆ. ಇವೆಲ್ಲದರ ನಡುವೆ ತನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಲು ತಂದೆಯ ಹೋರಾಟದ ಪ್ರತಿ ಹಂತವನ್ನೂ ಇದರಲ್ಲಿ ದಾಖಲಿಸಲಾಗಿದೆ’ ಎಂದು To Kill a Tiger ಚಿತ್ರದ ಅಂತರ್ಜಾಲ ಪುಟದಲ್ಲಿ ವಿವರಿಸಲಾಗಿದೆ.
ಚಿತ್ರವನ್ನು ಕಾರ್ನಿಲಿಯಾ ಪ್ರನ್ಸಿಪೆ ಮತ್ತು ಡೇವಿಡ್ ಒಪ್ಪೆನ್‌ಹೀಮ್ ನಿರ್ಮಿಸಿದ್ದಾರೆ.
ಈ ವಿಭಾಗಕ್ಕೆ ನಾಮನಿರ್ದೇಶನಗೊಂಡ ಇತರ ಚಿತ್ರಗಳು: ಬಾಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್, ದ ಎಟರ್ನಲ್ ಮೆಮೊರಿ, ಫೋರ್ ಡಾಟರ್ಸ್ ಮತ್ತು 20 ಡೇಸ್ ಇನ್ ಮರಿಯೊಪಾಲ್.
96ನೇ ಆವೃತ್ತಿಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 10ರಂದು ಲಾಸ್ ಏಂಜಲೀಸ್‌ನ ಒವೇಷನ್ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಯೋಜನೆಗೊಂಡಿದೆ. ಸತತ 2ನೇ ವರ್ಷವನ್ನೂ ಜಿಮ್ಮಿ ಕಿಮ್ಮೆಲ್ ನಿರೂಪಿಸುತ್ತಿದ್ದಾರೆ. ಇದು ನಾಲ್ಕನೇ ಬಾರಿ ಅವರು ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.