ADVERTISEMENT

ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್‌’ಗೆ ಅಮೆರಿಕದ ಭಾರತೀಯರ ಮೆಚ್ಚುಗೆ

ಪಿಟಿಐ
Published 28 ಆಗಸ್ಟ್ 2023, 6:37 IST
Last Updated 28 ಆಗಸ್ಟ್ 2023, 6:37 IST
   

ವಾಷಿಂಗ್ಟನ್: ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ’ದಿ ವ್ಯಾಕ್ಸಿನ್ ವಾರ್’ ಚಿತ್ರಕ್ಕೆ ಅಮೆರಿಕದಲ್ಲಿರುವ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್‌–19ರ ಸಂದರ್ಭದಲ್ಲಿ ದೇಶದ 1.4 ಶತಕೋಟಿ ಜನರ ನೆರವಿಗೆ ಅವಿರತವಾಗಿ ದುಡಿದ ಭಾರತೀಯ ವಿಜ್ಞಾನಿಗಳು, ಅದರಲ್ಲೂ ಮಹಿಳೆಯರ ಕೊಡುಗೆ ಕುರಿತು ಬೆಳಕು ಚೆಲ್ಲಿದ ಚಿತ್ರ’ ಎಂದು ಬಣ್ಣಿಸಿದ್ದಾರೆ.

‘ಇಂಡಿಯಾ ಫಾರ್ ಹ್ಯುಮಾನಿಟಿ ಟೂರ್, ಯುಎಸ್‌ಎ’ ಎಂಬ ಅಭಿಯಾನದಲ್ಲಿ ಅಗ್ನಿಹೋತ್ರಿ ಪಾಲ್ಗೊಂಡಿದ್ದಾರೆ. ಅವರ ಇತ್ತೀಚಿನ ’ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನು ಅಮೆರಿಕದಲ್ಲಿ ಪ್ರದರ್ಶಿಸಲಾಗುತ್ತಿದೆ. ವಾಷಿಂಗ್ಟನ್‌ ಡಿ.ಸಿ.ಯ ಉಪನಗರ ಮೇರಿಲ್ಯಾಂಡ್ ಸೇರಿದಂತೆ ದೇಶದ ವಿವಿಧೆಡೆ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಚಿತ್ರವನ್ನು ಮನಸಾರೆ ಮೆಚ್ಚಿದ್ದಾರೆ’ ಎಂದು ವರದಿಯಾಗಿದೆ.

‘ನಟಿ ಪಲ್ಲವಿ ಜೋಶಿ ಅವರೂ ಅಗ್ನಿಹೋತ್ರಿ ಅವರೊಂದಿಗೆ ಈ ಪ್ರವಾಸದಲ್ಲಿದ್ದಾರೆ. ವಿದೇಶದ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಭಾರತೀಯ ವಿಜ್ಞಾನಿಯೊಬ್ಬರು ಕೋವಿಡ್–19 ಲಸಿಕೆ ಕಂಡುಹಿಡಿಯಲು ಪಡುವ ಪಾಡು, ಎದುರಿಸುವ ಕಷ್ಟಗಳ ಕುರಿತ ಚಿತ್ರ ‘ದಿ ವ್ಯಾಕ್ಸಿನ್ ವಾರ್‌’ ಆಗಿದೆ.

ADVERTISEMENT

‘ಆರೋಗ್ಯ ಕ್ಷೇತ್ರದ ನಿಜವಾದ ಹೀರೊಗಳು ವಿಜ್ಞಾನಿಗಳು. ಇಡೀ ಆರೋಗ್ಯ ವ್ಯವಸ್ಥೆಯ ಹಿಂದೆ ನಿಂತು ರೋಗಿಗಳು ಬೇಗನೆ ಗುಣಮುಖರಾಗಲು ನಿರಂತರವಾಗಿ ಸಂಶೋಧನೆಗಳ ಮೂಲಕ ಹೊಸತನ್ನು ಕಂಡುಹಿಡಿಯುವ ವಿಜ್ಞಾನಿಗಳು, ಎಂದೂ ತೆರೆ ಮೇಲೆ ಬಂದವರಲ್ಲ. ಅದರಲ್ಲೂ ಈ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರಂತೂ ತೆರೆಮರೆಯ ಕಾಯಿಗಳಂತೆಯೇ ಕೆಲಸ ಮಾಡುತ್ತಿದ್ದಾರೆ. ಅದನ್ನು ಈ ಚಿತ್ರ ಉತ್ತಮವಾಗಿ ಹಿಡಿದುಕೊಟ್ಟಿದೆ’ ಎಂದು ಅಮೆರಿಕ ಮೂಲದ ಕಂಪನಿಯಲ್ಲಿ ವಿಜ್ಞಾನಿಯಾಗಿರುವ ಜ್ಯೋತಾ ಹೇಳಿದರು.

ಸ್ಥಳೀಯರು ಮೊದಲಿಗೆ ಒಂದು ಪರದೆಯಲ್ಲಿ ಖಾಸಗಿಯಾಗಿ ಚಿತ್ರವನ್ನು ಪ್ರದರ್ಶಿಸುವ ಯೋಜನೆ ಹೊಂದಿದ್ದರು. ಆದರೆ ಬೇಡಿಕೆ ಹೆಚ್ಚಾಗಿದ್ದರಿಂದ, ಎರಡು ಪರದೆಯನ್ನು ಬಾಡಿಗೆ ಪಡೆದು ಚಿತ್ರ ಪ್ರದರ್ಶಿಸಿದರು. ಚಿತ್ರ ತುಂಬುಗೃಹದ ಪ್ರದರ್ಶನ ಕಂಡಿತು ಎಂದು ಚಿತ್ರತಂಡ ಹೇಳಿದೆ.

2022ರ ಡಿಸೆಂಬರ್‌ನಲ್ಲಿ ಭಾರತ 28.2 ಕೋಟಿ ಕೋವಿಡ್–19 ಲಸಿಕೆಯನ್ನು 101 ರಾಷ್ಟ್ರಗಳಿಗೆ ನೀಡಿತ್ತು. ಜಗತ್ತಿನಲ್ಲಿ ನೋವಲ್ ಕೊರೊನಾ ವೈರಸ್ ಚೀನಾದಲ್ಲಿ ಮೊದಲ ಬಾರಿಗೆ 2019ರಲ್ಲಿ ಕಂಡುಬಂತು. 2023ರ ಆಗಸ್ಟ್ 16ರವರೆಗೂ ಜಗತ್ತಿನಲ್ಲಿ ಒಟ್ಟು 76.98 ಕೋಟಿ ಪ್ರಕರಣಗಳು ದೃಢಪಟ್ಟಿವೆ. 69.55 ಲಕ್ಷ ಜನ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.