ADVERTISEMENT

ಚಂದನವನ: ಎಂದೂ ಮಾಸದ ‘ನಗು’ ನರಸಿಂಹರಾಜು

ಮಂಜುಶ್ರೀ ಎಂ.ಕಡಕೋಳ
Published 19 ಜುಲೈ 2024, 23:10 IST
Last Updated 19 ಜುಲೈ 2024, 23:10 IST
ಮಗ ನರಹರಿ ಜೊತೆಗೆ ನರಸಿಂಹರಾಜು
ಮಗ ನರಹರಿ ಜೊತೆಗೆ ನರಸಿಂಹರಾಜು   

ನಗಬೇಕು, ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ

‘ನಕ್ಕರೆ ಅದೇ ಸ್ವರ್ಗ’ ಸಿನಿಮಾದ ಈ ಹಾಡು ಕನ್ನಡ ಚಿತ್ರರಂಗದ ಹಾಸ್ಯನಟ ಟಿ.ಆರ್. ನರಸಿಂಹರಾಜು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ಈ ಚಿತ್ರ ನರಸಿಂಹರಾಜು ಅವರ ನಟನೆಯ ನೂರನೇ ಚಿತ್ರವೂ ಹೌದು.

ವರನಟ ಡಾ. ರಾಜಕುಮಾರ್ ಅವರಿಲ್ಲದೇ ಕನ್ನಡ ಸಿನಿಮಾದ ಇತಿಹಾಸ ಹೇಗೆ ಅಪೂರ್ಣವೋ, ನರಸಿಂಹರಾಜು ಅವರನ್ನು ಹೊರತುಪಡಿಸಿ ಕನ್ನಡ ಸಿನಿಮಾರಂಗವನ್ನು ನೋಡುವುದೂ ಅಪೂರ್ಣ. ‘ನಂ ನರಸಿಂರಾಜು’ ಎಂಬ ಆಪ್ತಭಾವ ಮೂಡಿಸಿ, ನಗೆ ಹೂವು ಚೆಲ್ಲಿದ್ದ ಅವರ ನೆನಪು ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾಗಿದೆ. ವಿಶಿಷ್ಟ ಶೈಲಿಯ ಹಾಸ್ಯದಿಂದ ಪ್ರೇಕ್ಷಕರನ್ನು ರಂಜಿಸಿದ್ದ ನರಸಿಂಹರಾಜು ಅವರ ನಟನಾ ಬದುಕಿಗೆ ಮುನ್ನುಡಿ ಬರೆದಿದ್ದು ‘ಅಭಿನವ ಶಿರೋಮಣಿ’ ಸಿ.ಬಿ. ಮಲ್ಲಪ್ಪನವರ ಶ್ರೀಚಂದ್ರಮೌಳೇಶ್ವರ ನಾಟಕಸಭಾ. ಬಾಲ್ಯದಲ್ಲೇ ಬಣ್ಣದ ಒಡನಾಟಕ್ಕೆ ಬಿದ್ದ ಅವರು ಶಾಲೆಯಲ್ಲಿ ಕಲಿತದ್ದು ಕಡಿಮೆ. ಆದರೆ, ಅವರ ಸಾಧನೆ ಇಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಕ್ಕೆ ಯೋಗ್ಯವಾಗುವಷ್ಟು ದೊಡ್ಡದು. ಪೌರಾಣಿಕ, ಭಕ್ತಿ ಪ್ರಧಾನ ನಾಟಕಗಳಲ್ಲಿ ತಮ್ಮ ಛಾಪು ಮೂಡಿಸಿದ್ದ ನರಸಿಂಹರಾಜು, ಕೆಲ ಕಾಲ ಸ್ವಂತ ನಾಟಕ ಕಂಪನಿಯನ್ನೂ ನಡೆಸಿದ್ದರು. ವ್ಯವಹಾರ ಜ್ಞಾನವಿಲ್ಲದೇ ಕಂಪನಿ ಮುಚ್ಚಿ, ಗುಬ್ಬಿ ವೀರಣ್ಣ ಅವರ ಕಂಪನಿಗೆ ಸೇರಿದರು. ಅಷ್ಟೊತ್ತಿಗಾಗಲೇ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದ ಅವರು, ನಟನೆಯ ಬದುಕಿಗೆ ತಮ್ಮನ್ನು ಮತ್ತಷ್ಟು ಒಗ್ಗಿಸಿಕೊಂಡರು. ಅವರ ಹಾಸ್ಯಪಾತ್ರವನ್ನು ವೀಕ್ಷಿಸಲೆಂದೇ ಅಭಿಮಾನಿಗಳು ನಾಟಕ ನೋಡಲು ಬರುತ್ತಿದ್ದರಂತೆ.

ADVERTISEMENT

ಕನ್ನಡ ಸಿನಿಮಾರಂಗ ಆಗಷ್ಟೇ ಬೆಳವಣಿಗೆ ಸಾಧಿಸುತ್ತಿದ್ದ ಹಂತದಲ್ಲಿ ನರಸಿಂಹರಾಜು ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶಿಸಿದ್ದು ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ. ಅದು ರಾಜ್ ಅವರ ಮೊದಲ ಸಿನಿಮಾ ಕೂಡಾ. ಅಂದು ಜತೆಯಾದ ರಾಜಕುಮಾರ್ ಮತ್ತು ನರಸಿಂಹರಾಜು ಜೋಡಿ, ಮುಂದೆ ಸುಮಾರು 94 ಚಿತ್ರಗಳ ತನಕವೂ ಮೋಡಿ ಮಾಡಿತು. ತಮ್ಮ ಸಣಕಲು ಶರೀರ, ಉಬ್ಬುಹಲ್ಲನ್ನೇ ಧನಾತ್ಮಕ ಶಕ್ತಿಯಾಗಿಸಿಕೊಂಡಿದ್ದ ನರಸಿಂಹರಾಜು ಅವರು ತಮ್ಮ ಪಾತ್ರಗಳಿಗೆ ಸಹಜತೆ ತುಂಬಿದವರು. ಪರಿಶುದ್ಧ ಹಾಸ್ಯ ಹೇಗಿರಬೇಕೆಂಬುದಕ್ಕೆ ಮಾದರಿ ಹಾಕಿಕೊಟ್ಟವರು. ತಮ್ಮ ಸಿನಿಮಾಗಳಲ್ಲಿ ಹಾಸ್ಯದಿಂದಲೇ ನಾಯಕನ ಸಂಕಷ್ಟಕ್ಕೆ ಮಿಡಿವ ಗೆಳೆಯನಾಗಿ, ನೊಂದವರಿಗೆ ನ್ಯಾಯ ಒದಗಿಸುವ ವಿಶಿಷ್ಟ ಪಾತ್ರಗಳನ್ನು ಮಾಡಿದ್ದರು. ಕನ್ನಡ ಸಿನಿರಂಗದ ಅಂದಿನ ದಿನಗಳಲ್ಲಿ ನಿರ್ಮಾಪಕರು, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಮೊದಲು ನರಸಿಂಹರಾಜು ಅವರ ಕಾಲ್‌ಶೀಟ್ ಪಡೆದು, ಆನಂತರ ನಾಯಕರ ಕಾಲ್‌ಶೀಟ್ ಪಡೆಯುತ್ತಿದ್ದರು ಎಂಬ ಮಾತು ನರಸಿಂಹರಾಜು ಅವರ ಜನಪ್ರಿಯತೆಗೆ ಇದ್ದ ಸಾಕ್ಷಿ.

ಕನ್ನಡದಲ್ಲಿ ಮೊದಲು ನೂರು ಸಿನಿಮಾಗಳಲ್ಲಿ ನಟಿಸಿದ ಮೊದಲ ನಟ ಎಂಬ ದಾಖಲೆಗೆ ಪಾತ್ರರಾಗಿದ್ದ ಅವರು ಕೆಲ ಚಿತ್ರಗಳಿಗೆ ನಿರ್ಮಾಪಕರೂ ಆಗಿದ್ದರು. ಮುಟ್ಟಿದ್ದೆಲ್ಲ ಚಿನ್ನ, ಆದರ್ಶ ಸತಿ, ಸೋದರಿ, ಭಕ್ತ ಮಾರ್ಕಂಡೇಯ, ಓಹಿಲೇಶ್ವರ, ರೇಣುಕ ಮಹಾತ್ಮೆ, ಸದಾರಮೆ, ನಳದಮಯಂತಿ, ಸ್ಕೂಲ್ ಮಾಸ್ಟರ್, ವರದಕ್ಷಿಣೆ, ರಣಧೀರ ಕಂಠೀರವ, ರತ್ನಮಂಜರಿ, ತಾಯಿಕರುಳು, ಕರುಣೆಯೇ ಕುಟುಂಬದ ಕಣ್ಣು, ಸಾಕುಮಗಳು, ಪ್ರೊಫೆಸರ್ ಹುಚ್ಚುರಾಯ… ಹೀಗೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. . ಹಿಂದಿ ಭಾಷೆಯ ‘ಚೋರಿಚೋರಿ’ ಹಾಗೂ ‘ಮಿಸ್ ಮೇರಿ’ ಸಿನಿಮಾಗಳಲ್ಲೂ ನಟಿಸಿದ್ದರು.

ಹೃದಯಾಘಾತದಿಂದ ತೀರಿಕೊಂಡಾಗ ನರಸಿಂಹರಾಜು ಅವರಿಗೆ 55 ವರ್ಷವಾಗಿತ್ತು. ಅವರು ಭೌತಿಕವಾಗಿ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಉತ್ಕೃಷ್ಟ ಹಾಸ್ಯಪರಂಪರೆ ಚಿರಸ್ಥಾಯಿಯಾಗಿದೆ.

ನರಸಿಂಹರಾಜು ಬದುಕಿದ್ದರೆ ಇದೇ ಜುಲೈ 24ಕ್ಕೆ ನೂರು ವರ್ಷ ತುಂಬುತ್ತಿತ್ತು. ಅವರ ಜನ್ಮಶತಾಬ್ದಿಯ ನೆನಪಿಗಾಗಿ ಜುಲೈ 24ರ ಮಧ್ಯಾಹ್ನ 1.30ಕ್ಕೆ ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ಅಪರೂಪದ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ನಟಿ ಸುಧಾ ನರಸಿಂಹರಾಜು, ನಿರ್ದೇಶಕ ಅರವಿಂದ ನರಸಿಂಹರಾಜು, ಬರಹಗಾರ ಕೆ. ಪುಟ್ಟಸ್ವಾಮಿ, ಸಚಿವಾಲಯ ಕ್ಲಬ್‌ನ ಗೌರವ ಕಾರ್ಯದರ್ಶಿ ಎಲ್‌.ಎನ್. ನಾಗಭೂಷಣ, ಕಾರ್ಯದರ್ಶಿ ಎಂ.ವಿ. ಮಹೇಂದ್ರ ಮತ್ತಿತರರು ಉಪಸ್ಥಿತರಿರುವರು. ನರಸಿಂಹರಾಜು ಅವರ ಹಾಡುಗಳನ್ನು ಕ್ಲಬ್‌ನ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ನರಸಿಂಹರಾಜು ವ್ಯಕ್ತಿಚಿತ್ರದ ಕುರಿತು ರಂಗಕರ್ಮಿ ಮಂಜುನಾಥ್ ಎಲ್. ಬಡಿಗೇರ ನಿರ್ದೇಶಕನ ಕಿರುನಾಟಕ ಪ್ರದರ್ಶನವಾಗಲಿದೆ.

‘ನಗುವಿನ ರುಜು ನರಸಿಂಹರಾಜು’ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಲಿದೆ.

ಸ್ಥಳ: ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್‌ನ ಸಭಾಂಗಣ, ಕಬ್ಬನ್ ಪಾರ್ಕ್. ಜುಲೈ 24. ಮಧ್ಯಾಹ್ನ 1.30ಕ್ಕೆ.

ಭಾವುಕ ಕ್ಷಣದಲ್ಲಿ ರಾಜ್‌ಕುಮಾರ್‌ ನರಸಿಂಹರಾಜು
ನರಸಿಂಹರಾಜು
ಬೆಂಗಳೂರಿನಲ್ಲಿ 1964ರಲ್ಲಿ ನಡೆದ ಸಿನಿಮಾನೋತ್ಸವದಲ್ಲಿ ಕಲಾವಿದರಾದ ಬಾಲಕೃಷ್ಣ ಹೊನ್ನಪ್ಪ ಭಾಗವತರ್‌ ಕಲ್ಯಾಣ್‌ಕುಮಾರ್ ಕೆಂಪರಾಜ ಅರಸ್‌ ಜೆಮಿನಿ ಗಣೇಶನ್‌ ಭಕ್ತವತ್ಸಲ ನರ್ಗೀಸ್‌ ಜಯಮ್ಮ ನರಸಿಂಹರಾಜು ಇತರರು ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.