ನವದೆಹಲಿ: ಆಸ್ಕರ್ ಪ್ರಶಸ್ತಿಗೆ ಅಂತರರಾಷ್ಟ್ರೀಯ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶ ಪಡೆದಿದ್ದ ಮಲಯಾಳ ಭಾಷೆಯ ಚಿತ್ರ ‘2018: ಎವರಿಒನ್ ಇಸ್ ಎ ಹೀರೊ’ ಚಿತ್ರ, ಅಂತಿಮ 15 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.
ಅಂತಿಮ 15ರ ಚಿತ್ರಗಳ ಪಟ್ಟಿಯನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ (ಎಎಂಪಿಎಎಸ್) ಶುಕ್ರವಾರ ಪ್ರಕಟಿಸಿದೆ. ಈ ಚಿತ್ರಗಳು ಮತದಾನದ ಹಂತವನ್ನು ಪ್ರವೇಶಿಸಲಿವೆ. 88 ದೇಶಗಳ ಚಲನಚಿತ್ರಗಳು ಸ್ಪರ್ಧೆಗೆ ಅರ್ಹವಾಗಿದ್ದವು.
ಜ್ಯೂಡ್ ಆ್ಯಂಟನಿ ಜೋಸೆಫ್ ನಿರ್ದೇಶನದ ‘2018: ಎವರಿಒನ್ ಇಸ್ ಎ ಹೀರೊ’ ಚಿತ್ರದ ಮುಖ್ಯಪಾತ್ರದಲ್ಲಿ ಟೊವಿನೊ ಥಾಮಸ್ ಇದ್ದಾರೆ. 2018ರಲ್ಲಿ ಕೇರಳದಲ್ಲಿ ಕಂಡುಬಂದಿದ್ದ ಪ್ರವಾಹ ಪರಿಸ್ಥಿತಿಯನ್ನು ಆಧರಿಸಿದ್ದ ಚಿತ್ರ ಇದಾಗಿತ್ತು.
ನಿರ್ಮಾಪಕರ ಪ್ರಕಾರ, ಈ ಚಿತ್ರ ₹ 200 ಕೋಟಿ ವಹಿವಾಟು ನಡೆಸಿದ್ದು, ಹೆಚ್ಚು ಗಳಿಕೆಯ ಮಲಯಾಳ ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು.
ಈ ಕುರಿತ ಇನ್ಸ್‌ಸ್ಟಾದಲ್ಲಿ ಸಂದೇಶ ಹಂಚಿಕೊಂಡಿರುವ ಜೋಸೆಫ್, ನಿರಾಸೆ ಉಂಟುಮಾಡಿದ್ದಕ್ಕಾಗಿ ಹಿತೈಷಿಗಳ ಕ್ಷಮೆ ಕೋರುತ್ತೇನೆ. ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದು, ಜೀವನಪರ್ಯಂತ ಮೆಲುಕು ಹಾಕುವಂತಾಗಿದೆ ಎಂದು ಹೇಳಿದ್ದಾರೆ.
ಅತ್ಯಧಿಕ ಗಳಿಕೆಯ ಮತ್ತು ಆಸ್ಕರ್‌ಗೆ ಅಧಿಕೃತ ಪ್ರವೇಶ ಚಿತ್ರವಾಗಿ, ಚಿತ್ರನಿರ್ಮಾಪಕನಾಗಿ ಇದು ಅಪರೂಪದ ಸಾಧನೆ. ಇಂತಹ ಪ್ರಯಾಣಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಹಿಂದೆ 2001ರಲ್ಲಿ ಅಮೀರ್ ಖಾನ್ ನಾಯಕತ್ವದ ‘ಲಗಾನ್’ ಈ ವಿಭಾಗದ ಅಂತಿಮ ಪಟ್ಟಿಯ ಐದು ಚಿತ್ರಗಳಲ್ಲಿ ಸ್ಥಾನ ಪಡೆದಿತ್ತು. 96ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 10, 2024ರಂದು ಲಾಲ್ ಏಂಜಲೀಸ್‌ನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.