‘ಸೈಕೊ’ ಹಾಗೂ ‘ಟಗರು’ ಸಿನಿಮಾ ಮೂಲಕ ಹೆಸರಾದ ನಟಿ ಅನಿತಾ ಭಟ್ ಅವರು ಮುಖ್ಯಪಾತ್ರದಲ್ಲಿ ನಟಿಸಿ, ನಿರ್ಮಿಸಿರುವ ‘ಇಂದಿರಾ’ ಸಿನಿಮಾ ಶುಕ್ರವಾರ (ಜು.8) ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಕಲಾವಿದ ರಿಷಿಕೇಶ್ ಅವರ ನಿರ್ದೇಶನ, ಛಾಯಾಗ್ರಹಣ ಹಾಗೂ ಸಂಕಲನ ಚಿತ್ರಕ್ಕಿದೆ. ‘ಇಂದಿರಾ’ ಪಾತ್ರದ ಮೂಲಕ ಅನಿತಾ ಅವರು ಅಂಧೆಯಾಗಿ ಮೊದಲ ಬಾರಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಇದು ಅವರ 16ನೇ ಸಿನಿಮಾ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದ್ದು, ಹಾಡುಗಳನ್ನು ಚಿಕ್ಕಮಗಳೂರು, ಮಡಿಕೇರಿಯಲ್ಲಿ ಮಾಡಲಾಗಿದೆ.
‘ಪ್ರೊಡಕ್ಷನ್ ಹೌಸ್ ಮಾಡಬೇಕೆಂಬ ಬಯಕೆ ಇತ್ತು. ಆದರೆ, ಯೋಗ ವೆಲ್‌ನೆಸ್ ಸೆಂಟರ್ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ನಷ್ಟವಾಗಿ ಅದನ್ನು ಮುಚ್ಚಬೇಕಾಯಿತು. ಮುಂದೆ ಏನು ಮಾಡಬೇಕೆಂಬ ಪ್ರಶ್ನೆ ಕಾಡುತ್ತಿತ್ತು. ಆಗ ಮೂಡಿದ್ದೇ ಸಿನಿಮಾ ನಿರ್ಮಾಣದ ಯೋಚನೆ. ಡಾಟ್ ಟಾಕೀಸ್ ಪ್ರೊಡಕ್ಷನ್ ಹೌಸ್‌ನೊಂದಿಗೆ ಸೇರಿಕೊಂಡು ಸಿನಿಮಾ ಮಾಡಲು ಮುಂದಾದೆವು. ಆಗ ಹುಟ್ಟಿಕೊಂಡಿದ್ದೇ ಇಂದಿರಾ ಕಥೆ’ ಎಂದು ಹೇಳುತ್ತಾರೆ ನಟಿ ಅನಿತಾ ಭಟ್.
‘ಈ ಮುಂಚೆ ‘ಬಳೇಪೇಟೆ’, ‘ಸಮುದ್ರಂ’ ಸಿನಿಮಾಗಳನ್ನು ಮಾಡಿದ್ದೆವು. ಒಟಿಟಿಗಾಗಿಯೇ ಕಥೆ ಸಿದ್ಧಪಡಿಸಬೇಕು ಎಂದುಕೊಂಡು ಸೈಕಾಲಜಿಕಲ್ ಥ್ರಿಲ್ಲರ್ ಹಂದರದ ಸಿನಿಮಾ ಮಾಡಿದೆವು. ನೀತು ಮತ್ತು ಶಫಿ ಅವರಿಗೆ ಸೂಕ್ತವಾಗುವ ಪಾತ್ರಗಳನ್ನು ನೀಡಿದೆವು. ಇನ್‌ಸ್ಪೆಕ್ಟರ್ ಪಾತ್ರವನ್ನು ಚಕ್ರವರ್ತಿ ಚಂದ್ರಚೂಡ್ ನಿಭಾಯಿಸಿದ್ದಾರೆ. ಪತಿಯ ಪಾತ್ರಕ್ಕೆ ಬಹಳ ಹುಡುಕಾಟ ನಡೆಸಿದಾಗ ಕೊನೆಗೆ ರೆಹಮಾನ್ ಸಿಕ್ಕರು. ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಇರಬೇಕೆಂಬ ಉದ್ದೇಶದಿಂದ ಎರಡು ಕಥೆಗಳನ್ನು ಹೆಣೆದಿದ್ದೇವೆ. ಯಾವ ಕಥೆ ನಿಜ ಎಂಬುದು ಕೊನೆಯಲ್ಲಿ ಗೊತ್ತಾಗುತ್ತದೆ. ಆ ರೀತಿ ವಿಭಿನ್ನವಾಗಿದೆ’ ಎಂದು ಅವರು ಚಿತ್ರದ ಬಗ್ಗೆ ಮಾಹಿತಿ ನೀಡಿದರು.
‘ಅನಿತಾ ಭಟ್ ಕ್ರಿಯೇಷನ್ಸ್’ನಡಿ ಒಟಿಟಿ (voot select) ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಪ್ರಜ್ಞಾನಂದ ಸ್ವರೂಪ್ ಸಹ ನಿರ್ಮಾಪಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.