ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ ಮೇಲೆ ಹಲ್ಲೆ ಹಾಗೂ ಅವರ ಕಾರಿನ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೋಜಪುರಿ ನಟಿ ಹಾಗೂ ಡಿಜಿಟಲ್ ಕ್ರಿಯೇಟರ್ ಸಪ್ನಾ ಗಿಲ್ ಹಾಗೂ ಇತರ ಮೂವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಮಂಗಳವಾರ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿರುವ ಸಪ್ನಾ ಗಿಲ್, ಗಲಾಟೆ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.
ಕಳೆದ ಬುಧವಾರ ರಾತ್ರಿ ನಾನು ನನ್ನ ಸ್ನೇಹಿತರು ಘಟನಾ ಸ್ಥಳದಲ್ಲಿ ರೀಲ್ಸ್ ಮಾಡಲು ಡ್ಯಾನ್ಸ್ ಮಾಡುತ್ತಿದ್ದೇವು. ನಾವು ಯಾರೊಂದಿಗೂ ಗಲಾಟೆ ಮಾಡಿಲ್ಲ. ಪೃಥ್ವಿ ಶಾ ಅವರೇ ನಾವು ವಿಡಿಯೊ ಮಾಡುತ್ತಿರುವ ಬಗ್ಗೆ ಜಗಳ ತೆಗೆದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
''ಈ ವೇಳೆ ಒಬ್ಬ ಅಥವಾ ಇಬ್ಬರು ನನ್ನ ದೇಹದ ಖಾಸಗಿ ಅಂಗಗಳನ್ನು ಬಲವಾಗಿ ಸ್ಪರ್ಶಿಸಿದ್ದಾರೆ. ಅದು ಯಾರೆಂಬುದು ಗೊತ್ತಾಗಿಲ್ಲ. ನನ್ನ ಮೇಲೆ ಹಲ್ಲೆ ಕೂಡ ಮಾಡಲಾಗಿದೆ. ಗಲಾಟೆ ನಡೆದ ವೇಳೆ ನಾವು ಯಾರಿಗೂ ಹಣಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಪೃಥ್ವಿ ಶಾ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನನ್ನ ಮೇಲೆ ನಡೆದಿರುವ ಕಿರುಕುಳಕ್ಕೆ ವಿರುದ್ಧವಾಗಿ ಪ್ರತಿ ದೂರು ನೀಡಲು ತಯಾರಿ ನಡೆಸಿದ್ದೇನೆ" ಎಂದು ಹೇಳಿದ್ದಾರೆ.
ಘಟನೆ ವಿವರ
ಭಾರತ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ ಹಾಗೂ ಅವರ ಕಾರಿನ ಮೇಲೆ ಕೆಲವರು ದಾಳಿ ಮಾಡಿದ ಘಟನೆ ಕಳೆದ ಬುಧವಾರ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಯಲು ಪ್ರಮುಖ ಕಾರಣಿಭೂತಳು ಎಂದು ಹೇಳಲಾದ ನಟಿ ಹಾಗೂ ಡಿಜಿಟಲ್ ಕ್ರಿಯೇಟರ್ ಸಪ್ನಾ ಗಿಲ್ ಅವರನ್ನು ಮುಂಬೈ ಪೊಲೀಸರು ಶುಕ್ರವಾರ ಬಂಧಿಸಿದ್ದರು.
ಸಪ್ನಾ ಗಿಲ್ ಬಾಯ್‌ಫ್ರೆಂಡ್, ಪೃಥ್ವಿ ಶಾ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ವಿಷಯವಾಗಿ ಗಲಾಟೆ ನಡೆದಿತ್ತು. ಬಳಿಕ ಪಾನಮತ್ತರಾಗಿದ್ದ ಸಪ್ನಾ ಹಾಗೂ ಆಕೆಯ ಸ್ನೇಹಿತರು ಪೃಥ್ವಿ ಶಾ ಜೊತೆ ಜಗಳ ತೆಗೆದು ಶಾ ಕಾರಿನ ಮೇಲೆ ದಾಳಿ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ‘ಅಲ್ಲದೇ ಅಪಘಾತ ಮಾಡಿದ್ದಿರಾ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿತ್ತು. ಈ ಕುರಿತು ಸಾಂತಾಕ್ರೂಜ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಭೋಜಪುರಿ ನಟಿಯಾಗಿರುವ ಸಪ್ನಾ ಗಿಲ್ ಕೆಲ ಭೋಜಪುರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಭೋಜಪುರಿ ಖ್ಯಾತನಾಮ ನಟರಾದ ರವಿ ಕಿಶನ್ ಹಾಗೂ ದಿನೇಶ್ ಲಾಲ್ ಯಾದವ್ ಜೊತೆಗೂ ನಟಿಸಿದ್ದಾರೆ.
ಸದ್ಯ ಮುಂಬೈನಲ್ಲಿ ನೆಲೆಸಿರುವ ಸಪ್ನಾ ಗಿಲ್ ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್‌ನಲ್ಲಿ ಸಕ್ರಿಯರಾಗಿದ್ದು 3 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.