ADVERTISEMENT

ನಟನೊಳಗಿನ ಇನ್ನೊಂದು ಮುಖ

ರೇಷ್ಮಾ ಶೆಟ್ಟಿ
Published 20 ನವೆಂಬರ್ 2018, 19:46 IST
Last Updated 20 ನವೆಂಬರ್ 2018, 19:46 IST
ರಾಕೇಶ್ ಮಯ್ಯ
ರಾಕೇಶ್ ಮಯ್ಯ   

ಒಮ್ಮೆ ನಟನೆಗೆ ಇಳಿದವರು ನಟನೆಯಷ್ಟೇ ನಮ್ಮ ಬದುಕು ಎಂದುಕೊಂಡು ಬದುಕುತ್ತಿರುತ್ತಾರೆ. ನಟನೆಯ ಹೊರತಾಗಿ ಅವರಿಗೆ ಬೇರೆ ಪ್ರಪಂಚವಿಲ್ಲ. ಹಗಲು, ರಾತ್ರಿ ನಟಿಸುವುದರಲ್ಲೇ ಜೀವನ ಕಳೆಯುತ್ತಾರೆ ಎಂಬುದು ನಟರ ಬಗ್ಗೆ ಜನರಿಗಿರುವ ಅಭಿಪ್ರಾಯ.

ಆದರೆ ಇಲ್ಲೊಬ್ಬ ನಟರಿದ್ದಾರೆ. ಅವರು ನಟನೆಯೊಂದಿಗೆ ಇನ್ನೂ ಅನೇಕ ಚಟುವಟಿಕೆಗಳು, ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲದ್ದಕ್ಕೂ ಸೈ ಎನ್ನಿಸಿಕೊಂಡಿದ್ದಾರೆ. ಅವರೇ ಮಗಳು ಜಾನಕಿ ಧಾರಾವಾಹಿಯ ನಿರಂಜನ.

ಮುಖದಲ್ಲಿ ಸದಾ ಮಂದಹಾಸ, ತುಂಟತನದ ನಗು, ಮಾತಿನಲ್ಲೇ ಮರಳು ಮಾಡುವ ವ್ಯಕ್ತಿತ್ವ, ಸುಳ್ಳು ಹೇಳುವುದು, ಚೆಕ್ ಬೌನ್ಸ್ ಮಾಡುವುದು ಇಷ್ಟೇ ಎಂದುಕೊಂಡಿದ್ದ ನಿರಂಜನನ ನಿಜ ಜೀವನದಲ್ಲಿ ಎಷ್ಟೋ ಜನ ಅರಿಯದ ಇನ್ನೊಂದು ಮುಖವಿದೆ.

ADVERTISEMENT

ನಿರಂಜನನ ನಿಜ ಹೆಸರು ರಾಕೇಶ್ ಮಯ್ಯ. ಪುತ್ತೂರು ಮೂಲದ ಇವರು ಓದಿದ್ದು ಎಂಬಿಎ. ಬಾಲ್ಯದಲ್ಲಿಯೇ ಇವರಿಗೆ ನಟನಾಗುವ ಕನಸಿತ್ತು. ಕನಸನ್ನು ಬೆನ್ನು ಹತ್ತಿದ ಕಾರಣಕ್ಕೆ ಶಾಲಾ–ಕಾಲೇಜು ದಿನಗಳಲ್ಲಿ ಸಾಂಸ್ಕ್ರತಿಕ ಚಟುವಟಿಕೆಯಲ್ಲಿ ಇವರು ಸದಾ ಮುಂದಿದ್ದರು. ಮನೆಯಲ್ಲಿ ತಂದೆ–ತಾಯಿಯೂ ಮಗನ ಆಸೆಗೆ ಅಡ್ಡಿ ಬಂದಿರಲಿಲ್ಲ.

ಆದರೆ ವಿದ್ಯೆಯ ಮಹತ್ವ ಅರಿತಿದ್ದ ಇವರು ಓದು ಮುಗಿಯುವವರೆಗೂ ನಟನೆಯತ್ತ ಗಮನ ನೀಡಿರಲಿಲ್ಲ. ಓದು ಮುಗಿದ ಮೇಲೆ ಕೆಲವೊಂದು ಕಡೆ ಆಡಿಷನ್‌ಗೆ ತೆರಳಿದ್ದರೂ ಅವಕಾಶದ ಬಾಗಿಲು ತೆರೆದಿರಲಿಲ್ಲ. ಆಗ ಅನಿವಾರ್ಯ ಕಾರಣದಿಂದಾಗಿ ಎಂಎನ್‌ಸಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದರು. ಆದರೆ ನಟನಾಗುವ ತುಡಿತ ಅವರನ್ನು ಹೆಚ್ಚು ಕಾಲ ಅಲ್ಲಿ ನೆಲೆಯೂರಲು ಬಿಡಲಿಲ್ಲ. ಹತ್ತು ತಿಂಗಳು ಕೆಲಸ ಮಾಡಿ ಕಂಪನಿಗೆ ಗುಡ್‌ಬಾಯ್‌ ಹೇಳಿ ಊರಿಗೆ ಮರಳಿದ್ದರು.

ಕಾಲೇಜು ದಿನಗಳಲ್ಲಿ ಫೋಟೊಗ್ರಫಿ ಹವ್ಯಾಸ ಇದ್ದ ಕಾರಣಕ್ಕೆ ಊರಿಗೆ ಹೋದ ಮೇಲೆ ಊರಿನ ಕೆಲವು ನುರಿತ ಫೋಟೊಗ್ರಾಫರ್‌ಗಳ ಜೊತೆ ಸೇರಿ ಕ್ಯಾಮೆರಾದ ಒಳ–ಹೊರಗನ್ನು ಕಲಿತರು. ಅಲ್ಲಿಂದ ಅವರ ಫೋಟೊಗ್ರಫಿ ಜರ್ನಿ ಆರಂಭವಾಯಿತು. ಮೊದ ಮೊದಲು ಮದುವೆ, ಸಮಾರಂಭ ಗಳಲ್ಲಿ ಫೋಟೊಗ್ರಫಿ ಮಾಡುತ್ತಿದ್ದ ಇವರು ನಂತರ ಫ್ಯಾಷನ್‌ ಫೋಟೊಗ್ರಫಿ, ಆ್ಯಡ್‌ ಶೂಟ್‌ಗಳನ್ನು ಮಾಡಲು ಆರಂಭಿಸಿದರು.

ಅದೃಷ್ಟವೋ ಅವಕಾಶವೋ ಎಂಬಂತೆ ಕನ್ನಡ ದಿನಪತ್ರಿಕೆಯೊಂದಕ್ಕೆ ಫೋಟೊ ಜರ್ನಲಿಸ್ಟ್ ಹುದ್ದೆಗೆ ಕರೆ ಬಂದಿತ್ತು. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡ ಇವರು ಪತ್ರಿಕೆಗೆ ಸೇರಿದರು. ಫೋಟೊ ಜರ್ನಲಿಸ್ಟ್ ವೃತ್ತಿಯಾದರೂ ಆಗಾಗ ಲೇಖನಗಳನ್ನು ಬರೆಯುತ್ತಿದ್ದರು. ಪತ್ರಕರ್ತನಾಗಿ ಒಂದಷ್ಟು ಹೆಸರು ಗಳಿಸಿದರೂ ನಟನೆಯ ಮೇಲಿನ ಒಲವು ಕಡಿಮೆಯಾಗಿರಲಿಲ್ಲ.

‘ನಾನು ಇಂದು ನಟನಾಗಲು ಕಾರಣ ವಿನು ಬಳಂಜ ಅವರು. ಅವರೇ ನನ್ನನ್ನು ಮೊದಲ ಬಾರಿ ನಟನೆಗೆ ಅವಕಾಶ ನೀಡಿದ್ದು. ಅವರು ಅಂದು ಕೊಟ್ಟ ಅವಕಾಶದಿಂದ ನಾನು ಇಂದು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು’ ಎಂದು ತುಂಬು ಅಭಿಮಾನದಿಂದ ಹೇಳುವ ರಾಕೇಶ್ ಮೊದಲು ನಟಿಸಿದ ಧಾರಾವಾಹಿ ಪ್ರೀತಿ–ಪ್ರೇಮ. ನಂತರದ ದಿನಗಳಲ್ಲಿ ಲವ್‌ಲವಿಕೆ, ನಿಹಾರಿಕಾ, ಅವಳು ಧಾರಾವಾಹಿಗಳಲ್ಲಿ ನಟಿಸಿದ್ದರೂ ಹೆಸರು ಗಳಿಸಿಕೊಟ್ಟಿದ್ದು ಮಾತ್ರ ನಿರಂಜನ ಪಾತ್ರ.

’ಸಿಲ್ಕ್ ಬೋರ್ಡ್’ ಎಂಬ ಕಿರುಚಿತ್ರದ ಮೂಲಕ ಹೆಚ್ಚು ಜನಮನ್ನಣೆ ಗಳಿಸಿದ್ದ ಇವರು ಈವರೆಗೆ 15 ಕಿರುಚಿತ್ರಗಳನ್ನು ಮಾಡಿದ್ದಾರೆ. ಮರೀಚಿ, ಮೌನೇಶ, ಹಸ್ಬೆಂಡ್ ಓನ್ಲಿ ಹೀಗೆ ಪ್ರತಿಕಿರುಚಿತ್ರದಲ್ಲೂ ಸಾಮಾಜಿಕ ಸಂದೇಶದೊಂದಿಗೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವ ಮೂಲಕ ನಟನೆಯ ಛಾಪಿಗೆ ಇನ್ನಷ್ಟು ಒತ್ತು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.