ADVERTISEMENT

ಓದಿನ ಸುಖವೂ ಕೂರುವ ಕಷ್ಟವೂ: ನಟಿ ನಿಮಿಕಾ ರತ್ನಾಕರ್ ಮನದಾಳ

ಸತೀಶ ಬೆಳ್ಳಕ್ಕಿ
Published 26 ಮಾರ್ಚ್ 2020, 17:42 IST
Last Updated 26 ಮಾರ್ಚ್ 2020, 17:42 IST
nimika rathnakar
nimika rathnakar   

ಅಭಿನಯ ಮತ್ತು ಗಾಯನ ಇವೆರಡರಿಂದಲೂ ಗಮನ ಸೆಳೆಯುವ ಚೆಲುವೆ ನಿಮಿಕಾ ರತ್ನಾಕರ್‌. ಈಕೆ ಮೋಹಕ ಚೆಲುವಿನ ಒಡತಿಯಷ್ಟೇ ಅಲ್ಲ; ಜೇನಿನ ಸಿಹಿ ಇರುವ ಧ್ವನಿಯ ಗಾಯಕಿಯೂ ಹೌದು. ಮಾಡೆಲಿಂಗ್‌ನಲ್ಲಿ ಮಿಂಚಿ, ಚಿತ್ರರಂಗಕ್ಕೆ ಬಂದಿರುವ ನಿಮಿಕಾರದ್ದು ಚಲನಶೀಲ ವ್ಯಕ್ತಿತ್ವ. ಆದರೆ, ಲಾಕ್‌ಡೌನ್‌ ಘೋಷಣೆ ಅವರನ್ನು ಮನೆಯಲ್ಲೇ ಕಟ್ಟಿಹಾಕಿದೆಯಂತೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚಿತ್ರಗಳ ಚಿತ್ರೀಕರಣ ಸಂಪೂರ್ಣ ನಿಂತುಹೋಗಿದೆ. ಹಾಗಾಗಿ, ಬೆಂಗಳೂರಿನಿಂದ ಮಂಗಳೂರಿಗೆ ಬಂದಿರುವ ನಿಮಿಕಾ ಈಗ ಮನೆಯಲ್ಲಿ ಕುಳಿತು ಓದಿನ ಸುಖ ಅನುಭವಿಸುತ್ತಿದ್ದಾರೆ. ಜತೆಗೆ ಅಮ್ಮ ಮಾಡಿಕೊಡುವ ಇಷ್ಟ ತಿಂಡಿ, ತಿನಿಸುಗಳು ಅವರ ಓದನ್ನು ಮತ್ತಷ್ಟು ರುಚಿಕರವಾಗಿಸಿದೆ. ಅನಿವಾರ್ಯವಾಗಿ ಮನೆಯಲ್ಲೇ ಉಳಿಯಬೇಕಿರುವ ‘ಕಷ್ಟ ಸುಖ’ವನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

‘ಕನ್ನಡ ಸಿನಿಮಾಗಳ ಚಿತ್ರೀಕರಣ ಸಂಪೂರ್ಣ ನಿಂತು ಹೋಗಿದೆ. ಬೆಂಗಳೂರಿನಲ್ಲಿದ್ದ ಎಲ್ಲ ಕಲಾವಿದರು, ತಂತ್ರಜ್ಞರು ತಮ್ಮ ತಮ್ಮ ಊರುಗಳಿಗೆ ಹೋಗಿಬಿಟ್ಟಿದ್ದಾರೆ. ಇನ್ನು ಕೆಲವರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ನಾನು ಈಗ ಬೆಂಗಳೂರು ಬಿಟ್ಟು ಮಂಗಳೂರಿಗೆ ಬಂದು ನೆಲೆಸಿದ್ದೇನೆ’ ಎಂದರು ನಿಮಿಕಾ.

ADVERTISEMENT

‘ಇದು ಜನರ ಜೀವದ ವಿಷಯ. ಹಾಗಾಗಿ, ಸರ್ಕಾರ ಲಾಕ್‌ಡೌನ್‌ ಘೋಷಿಸಿದೆ. 21 ದಿನಗಳ ಕಾಲ ನಾನು ಕೂಡ ಹೋಂ ಕ್ವಾರಂಟೈನ್‌ನಲ್ಲಿ ಇರುತ್ತೇನೆ. ಈ 21 ದಿನಗಳಲ್ಲಿ ಹಲವು ಪುಸ್ತಕಗಳನ್ನು ಓದುವ ಗುರಿ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ಅವರು.

‘ಒಂದೆಡೆ ಕುಳಿತುಕೊಂಡು ಕೆಲಸ ಮಾಡುವುದು ನನ್ನ ಜಾಯಮಾನದಲ್ಲೇ ಇರಲಿಲ್ಲ. ಆದರೆ, ಪರಿಸ್ಥಿತಿ ನನ್ನನ್ನು ಕಟ್ಟಿ ಹಾಕಿದೆ. ಸುಮ್ಮನೆ ಕೂರುವುದಕ್ಕೆ ಬೋರ್‌ ಆಗುತ್ತದೆ. ಫಿಟ್‌ನೆಸ್‌ ಕಾಯ್ದುಕೊಳ್ಳಲು ಜಿಮ್‌ಗೆ ಹೋಗುವಂತಿಲ್ಲ. ಅದಕ್ಕಾಗಿ ಮನೆಯಲ್ಲೇ ವರ್ಕೌಟ್‌ ಮಾಡುತ್ತಿದ್ದೇನೆ. ಮನೆಯಲ್ಲಿ ಕುಳಿತು ಎಷ್ಟು ಸಮಯ ಟೀವಿ ನೋಡಲು ಸಾಧ್ಯ. ಹಾಗಾಗಿ, ಈಗ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದೇನೆ.

ನನಗೆ ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚೇನೂ ಇಲ್ಲ. ಗಂಟೆಗಟ್ಟಲೆ ಓದುತ್ತಾ ಕೂರುವಷ್ಟು ಸಂಯಮ ಕೂಡ ನನಗೆ ಇಲ್ಲ. ಆದರೆ, ಚಿಕ್ಕ ಚಿಕ್ಕ ಸ್ಟೋರಿ ಬುಕ್‌ಗಳೆಂದರೆ ಅಚ್ಚುಮೆಚ್ಚು. ಸಣ್ಣ ಕತೆಗಳು ನಮ್ಮ ಮನೋಭಿತ್ತಿಯನ್ನು ವಿಸ್ತಾರಗೊಳಿಸುತ್ತವೆ’ ಎನ್ನುತ್ತಾರೆ ‘ರಾಮಧಾನ್ಯ’ ಚೆಲುವೆ ನಿಮಿಕಾ.

‘ರಾಮಾಯಣ, ಮಹಾಭಾರತ, ಸಾಯಿಬಾಬಾ ಈ ರೀತಿಯ ಮಹಾಕಾವ್ಯಗಳೆಂದರೆ ತುಂಬ ಇಷ್ಟ. ಈಗ ಮಹಾಭಾರತದ ಕತೆಗಳನ್ನು ಓದಲು ಆರಂಭಿಸಿದ್ದೇನೆ. ಹೊಸದೊಂದು ಲೋಕ ಪ‍್ರವೇಶಿಸಿದ ಅನುಭವ ಆಗುತ್ತಿದೆ. ಮಹಾಭಾರತವನ್ನು ಎಷ್ಟು ಬಾರಿ ಓದಿದರೂ ಬೋರ್‌ ಆಗುವುದಿಲ್ಲ. ಮತ್ತೊಮ್ಮೆ ಓದಬೇಕು ಅನ್ನಿಸುತ್ತದೆ.

ಪುಸ್ತಕ ಓದುವ ಸಂದರ್ಭದಲ್ಲೇ ಅದರಲ್ಲಿ ಬರುವ ಕೆಲವೊಂದು ಇಂಟರಸ್ಟಿಂಗ್‌ ಪಾತ್ರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಗೂಗಲಿಂಗ್‌ ಮಾಡುತ್ತಿದ್ದೇನೆ’ ಎಂದ ಅವರು, ಲಾಕ್ ಡೌನ್‌ ಆಗಿರುವ ಕಾರಣದಿಂದಾಗಿ ಓದುವುದಕ್ಕೆ ಸಮಯ ಸಿಗುತ್ತಿದೆ. ಮನೆಯಲ್ಲಿರುವಾಗ ಅಮ್ಮ ನನ್ನಿಷ್ಟದ ತಿಂಡಿ, ಊಟ ಮಾಡಿ ಬಡಿಸುತ್ತಾರೆ. ಫ್ಯಾಮಿಲಿ ಜತೆ ಸಮಯ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಖುಷಿ ವ್ಯಕ್ತಪಡಿಸಿದರು.

ಅಂದಹಾಗೆ, ನಿಮಿಕಾ ರತ್ನಾಕರ್‌ ಅವರ ಬಣ್ಣದ ಬುಟ್ಟಿಯಲ್ಲಿ ಈಗ ದೊಡ್ಡ ಬ್ಯಾನರ್‌ನ ಮೂರ್ನಾಲ್ಕು ಸಿನಿಮಾಗಳಿವೆ. ಈ ವರ್ಷದ ಸನ್ಸೆಷನಲ್‌ ಹಿಟ್‌ ‘ಲವ್‌ ಮಾಕ್‌ಟೇಲ್‌’ ಸಿನಿಮಾ ಖ್ಯಾತಿಯ ‘ಡಾರ್ಲಿಂಗ್’ ಕೃಷ್ಣ ಜತೆಗೆ ನಿಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ, ರವಿಚಂದ್ರನ್‌ ತಾರಾಗಣವಿರುವ ‘ರವಿಚಂದ್ರ’ ಸಿನಿಮಾದಲ್ಲಿ ಅವರು ಕ್ರೇಜಿಸ್ಟಾರ್‌ಗೆ ಜತೆಯಾಗಿದ್ದಾರೆ.

‘ಡಾರ್ಲಿಂಗ್‌ ಕೃಷ್ಣ ನಾಯಕನಟರಾಗಿರುವ ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಸಿನಿಮಾದ ಚಿತ್ರೀಕರಣ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಅವರ ‘ಲವ್‌ ಮಾಕ್‌ಟೇಲ್‌’ ಸಿನಿಮಾ ಸೂಪರ್‌ಹಿಟ್‌ ಆಗಿದ್ದು, ನಮ್ಮ ಈ ಚಿತ್ರಕ್ಕೆ ಪ್ಲಸ್‌ ಆಗಲಿದೆ. ಹಾಗೆಯೇ, ‘ರವಿಚಂದ್ರ’ ಸಿನಿಮಾದ ಎರಡು ಫೈಟ್‌ ಮತ್ತು ಇಟಲಿಯಲ್ಲಿ ಸಾಂಗ್‌ ಶೂಟಿಂಗ್‌ ಬಾಕಿ ಇದ್ದು, ಕೊರೊನಾ ಭೀತಿ ಕೊನೆಗೊಂಡ ನಂತರವಷ್ಟೇ ಮತ್ತೇ ಶೂಟಿಂಗ್‌ ಪ್ರಾರಂಭಗೊಳ್ಳಲಿದೆ’ ಎಂದು ನಗು ತುಳುಕಿಸಿದರು ನಿಮಿಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.