ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು, ನಿರ್ದೇಶಕ ಮತ್ತು ನಿರ್ಮಾಪಕರಾದ ಅನುರಾಗ್ ಕಶ್ಯಪ್ ಹಾಗೂ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಗ್ರೂಪ್‌ನ ಸಿಇಒ ಶಿಭಾಶಿಶ್ ಸರ್ಕಾರ್ ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮುಂಬೈ ಮತ್ತು ಪುಣೆಯ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಕೆಲ ಸೆಲೆಬ್ರೆಟಿಗಳ ಕಾರ್ಯ ನಿರ್ವಾಹಕರು ಹಾಗೂ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾದ ‘ಕೆಡಬ್ಲ್ಯುಎಎನ್’ಗೆ ಸೇರಿದ ಸ್ಥಳಗಳ ಮೇಲೂ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಫ್ಯಾಂಟಮ್ ಫಿಲ್ಸ್ಮ್’ ವಿರುದ್ಧದ ತೆರಿಗೆ ವಂಚನೆಯ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ. ಕಶ್ಯಪ್, ನಿರ್ದೇಶಕ–ನಿರ್ಮಾಪಕ ವಿಕ್ರಮಾದಿತ್ಯ ಮೋಟ್ವಾನೆ, ನಿರ್ಮಾಪಕ ವಿಕಾಸ್ ಬಹ್ಲ್ ಮತ್ತು ನಿರ್ಮಾಪಕ–ವಿತರಕ ಮಧು ಮಂಟೆನಾ ಇದರ ಪ್ರವರ್ತಕರಾಗಿದ್ದಾರೆ. ಈ ಪ್ರವರ್ತಕರಿಗೆ ಸೇರಿದ ಸ್ಥಳಗಳಲ್ಲಿಯೂ ಶೋಧ ನಡೆದಿದೆ.
2011ರಲ್ಲಿ ಸ್ಥಾಪನೆಯಾದ ‘ಫ್ಯಾಂಟಮ್ ಫಿಲ್ಮ್ಸ್’ ಲೂಟೆರಾ, ಕ್ವೀನ್, ಅಗ್ಲಿ, ಎನ್ಎಚ್ 10, ಮಸಾನ್ ಮತ್ತು ಉಡ್ತಾ ಪಂಜಾಬ್ ನಂತಹ ಸಿನಿಮಾಗಳನ್ನು ನಿರ್ಮಿಸಿತ್ತು. ನಂತರ ಕಶ್ಯಪ್ ಅವರು ‘ಗುಡ್ ಬ್ಯಾಡ್ ಫಿಲ್ಮ್ಸ್’ ಎಂಬ ಹೊಸ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು. ಮೋಟ್ವಾನೆ ಅವರು ಆಂದೋಲನ್ ಫಿಲ್ಮ್ಸ್ ಅನ್ನು ಪ್ರಾರಂಭಿಸಿದರು. 33 ವರ್ಷದ ತಾಪ್ಸಿ ಪನ್ನು ಅವರು ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕಾಂಗ್ರೆಸ್, ಎನ್‌ಸಿಪಿ ಟೀಕೆ: ಈ ಐಟಿ ದಾಳಿ ಕುರಿತು ಟೀಕಿಸಿರುವ ಮಹಾರಾಷ್ಟ್ರ ಸರ್ಕಾರದ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ, ‘ಇದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಮಾತನಾಡುವವರ
ಧ್ವನಿ ಹತ್ತಿಕ್ಕುವ ಪ್ರಯತ್ನ’ ಎಂದು ದೂರಿವೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ವಿರೋಧಿಸುವವರನ್ನು ಕೇಂದ್ರದ ಏಜೆನ್ಸಿಗಳಾದ ಇ.ಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳು ಗುರಿಯಾಗಿಸಿಕೊಂಡಿವೆ ಎಂದು ಎನ್‌ಸಿಪಿ ಮುಖ್ಯ ವಕ್ತಾರರೂ ಆಗಿರುವ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.